Advertisement

ಅಂಬಾರೀನ ಕದ್ದಿದ್ದಾರಂತೆ ದಸರಾ ನಡೆಯಲ್ವಂತೆ! 

06:00 AM Sep 25, 2018 | |

ಯಾರೋ ಕಿಡಿಗೇಡಿಗಳು ಅಂಬಾರೀನ ಕದ್ದಿದ್ದಾರಂತೆ ಕಣಪ್ಪಾ. ಕಳ್ಳರು, ಅಂಬಾರಿ- ಎರಡೂ ಸಿಕ್ಕಿಲ್ವಂತೆ. ಅದೇ ಕಾರಣಕ್ಕೆ ಈ ಬಾರಿ ದಸರಾ ನಡೆಯೋದೇ ಡೌಟ್‌ ಅಂತೆ ಎಂದರು ಅಪ್ಪ. ದಸರಾ ರಜೆಗೆಂದು ಊರಿಗೆ ಬಂದಿದ್ದ ನನಗೆ, ಅವರು ಮಾತು ಕೇಳಿ ಗಾಬರಿಯಾಯಿತು… 

Advertisement

ಇದು ಎಂಟು ವರ್ಷಗಳ ಹಿಂದೆ ನಡೆದ ಘಟನೆ. ಅದು ಅಕ್ಟೋಬರ್‌ ತಿಂಗಳು. ಶಾಲಾ ಕಾಲೇಜುಗಳಿಗೆ ದಸರಾ ರಜೆ ಇತ್ತು. ಶಿಕ್ಷಕನಾದ್ದರಿಂದ ನನಗೂ ರಜೆ ಇತ್ತು. ರಜಾ ದಿನಗಳಲ್ಲಿ ಅಪ್ಪನ ಜೊತೆ ಹೊಲ-ಗದ್ದೆಗೆ ಹೋಗಿ ದುಡಿಯುವ ಹವ್ಯಾಸ ಇದೆ. ಹಾಗೆಯೇ ಅವತ್ತೂ ಜಮೀನಿಗೆ ಹೋಗುತ್ತಿದ್ದಂತೆ, ತಂದೆಯಿಂದ ಒಂದು ಆಶ್ಚರ್ಯ ಮತ್ತು ಆಘಾತಕರ ಸುದ್ದಿ ಕಾದಿತ್ತು. ಅದನ್ನು ಕೇಳಿ ದಂಗು ಬಡಿದಂತಾಯಿತು. 

“ಮೈಸೂರು ಅರಮನೆಯಲ್ಲಿ ಅಂಬಾರಿ ಕಳುವಾಯಿತಂತೆ! ಪೊಲೀಸರು ಕಳ್ಳರನ್ನು ಹುಡುಕುತ್ತಿ¨ªಾರಂತೆ. ಅಂಬಾರಿಯೇ ಇಲ್ಲ ಎಂಬ ಕಾರಣದಿಂದ, ಈ ಬಾರಿ ದಸರಾ ನಡೆಯುವುದು ಅನುಮಾನ ಅಂತೆಲ್ಲಾ ಊರಿಗೆ ಊರೇ ಮಾತನಾಡುತ್ತಿದೆ’ ಎಂದರು ನಮ್ಮಪ್ಪ. 
ಆ ವಿಚಾರ ಕೇಳಿ ನನಗೂ ಗಾಬರಿ ಆಯ್ತು. ಇದೇನು ಸಾಮಾನ್ಯ ಸಂಗತಿಯೇ? ಅದಲ್ಲದೇ ನಾವು ಹದಿನಾರು ಗ್ರಾಮದ ಮಂದಿ. ಮೈಸೂರಿನಿಂದ ಕೇವಲ 24 ಕಿ.ಮೀ ದೂರದಲ್ಲಿರುವ ನಮ್ಮೂರಿಗೂ ಅರಮನೆಗೂ ಭಾವನಾತ್ಮಕ ಸಂಬಂಧವಿದೆ. ಅದ್ಹೇಗೆ ಎಂದಿರಾ?  ಮೈಸೂರು ಒಡೆಯರು ಸಂಸ್ಥಾನದ ಮೂಲ ಪುರುಷರು “ಯದುರಾಯರು’. ಅವರ ಮೂಲ ನೆಲೆ “ಯದುನಾಡು’. ಆ ಯದುನಾಡೆಂಬ ಹೆಸರು ಕಾಲಘಟ್ಟದ ನಂತರದಲ್ಲಿ ಜನರ ಉಚ್ಚಾರಣಾ ದೋಷದಿಂದಾಗಿ “ಹದಿನಾರು’ ಎಂದಾಗಿದೆ. ಹಾಗಾಗಿ, ಮೈಸೂರು, ಮಹಾರಾಜರು, ಅರಮನೆ ಎಂದರೆ ಸಾಕು ನಮ್ಮೂರಿನವರಿಗೆ ಸಂಭ್ರಮ ಜೊತೆಯಾಗುತ್ತಿತ್ತು. ಇದೀಗ, ಅಂಬಾರಿ ನಾಪತ್ತೆಯಾದ ಸುದ್ದಿ ನಮ್ಮೂರಿನಲ್ಲಿ ಈ ಭಾರೀ ಸದ್ದು ಮಾಡಿತ್ತು. 

ನಾನು ಅಂಬಾರಿ ಕಳವಿನ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು, “ನಿಮಗೆ ಈ ವಿಚಾರ ಹೇಳಿದ್ಯಾರು?’ ಎಂದು ಅಪ್ಪನನ್ನು ಕೇಳಿದೆ. ಅವರು “ಅನಾಚಿ ಹೇಳಿದ’ ಎಂದರು. “ಅನಾಚಿ’ ಎಂಬುದು ನಮ್ಮೂರಿನ ನಾಗರಾಜುವಿನ ಅಡ್ಡ ಹೆಸರು. ಆತ ಊರಿನ ಒಬ್ಬ ಮುಗ್ಧ ವ್ಯಕ್ತಿ. ಮರಗೆಲಸ ಆತನ ಕುಲಕಸುಬು. ಅದನ್ನು ಬದಿಗೊತ್ತಿ, ತೆಂಗಿನ ಕಾಯಿಯಿಂದ ಅಂತರ್ಜಲ ಪರೀಕ್ಷಿಸುವ ಕುಶಲತೆಯನ್ನೂ ಆತ ಕಲಿತಿದ್ದ. ಅವನಿಗೆ ಅಂಬಾರಿ ಕಳುವಿನ ವಿಚಾರ ಹೇಗೆ ತಿಳಿಯಿತು ಎಂಬುದೇ ಕೌತುಕ. ಆತನನ್ನು ವಿಚಾರಿಸಿದರೆ, “ಟಿ.ವಿಯಲ್ಲಿ ಉದಯ ವಾರ್ತೆ ನೋಡುತ್ತಿದ್ದೆ; ಅದರಲ್ಲಿ ಪ್ರಕಟಿಸಿದರು’ ಎಂದ! 

ಆತ ಉದಯ ವಾರ್ತೆ ನೋಡುತ್ತಿದ್ದದ್ದು ನಿಜ. ಅಂಬಾರಿ ಕಳುವಿನ ವಾರ್ತೆ ಬಂದಿದ್ದೂ ಸತ್ಯವೇ! ಆದರೆ ಅÇÉೊಂದು ತಮಾಷೆ ನಡೆದಿತ್ತು. ಏನಾಗಿತ್ತೆಂದರೆ- ಕೈಯಲ್ಲಿ ರಿಮೋಟ್‌ ಹಿಡಿದಿದ್ದ ಆತನ ಹೆಂಡತಿಯೋ, ಮಕ್ಕಳ್ಳೋ ವಾರ್ತೆ ಕೇಳಲು ಬೇಜಾರಾಗಿ ಉದಯ ಮೂವೀಸ್‌ ಚಾನೆಲ್‌ಗೆ ಬದಲಿಸಿ¨ªಾರೆ. ಆ ಚಾನೆಲ್‌ನಲ್ಲಿ, ಅಂದು ದಸರಾ ಪ್ರಯುಕ್ತ “ನವಗ್ರಹ’ ಸಿನಿಮಾ ಬಿತ್ತರವಾಗುತ್ತಿತ್ತು. “ನವಗ್ರಹ’ ಸಿನಿಮಾ, ಅಂಬಾರಿ ಕಳುವಿನ ಕಾಲ್ಪನಿಕ ಕಥೆಯನ್ನು ಆಧರಿಸಿದ್ದಾಗಿದೆ. ಸಿನಿಮಾದಲ್ಲಿನ ವಾರ್ತೆಯಲ್ಲಿ ಅಂಬಾರಿ ಕಳುವಿನ ವಿಚಾರವನ್ನು ಪ್ರಕಟ ಮಾಡುವ ಸನ್ನಿವೇಶಕ್ಕೂ, ಉದಯ ವಾರ್ತೆಯಿಂದ ಉದಯ ಮೂವೀಸ್‌ ಚಾನೆಲ್‌ಗೆ ಬದಲಾಗಿದ್ದಕ್ಕೂ “ಕಾಕತಾಳೀಯ’ ಎಂಬಂತೆ ತೇಪೆಯಾಗಿದೆ. ಪಾಪ, ನಾಗರಾಜನಿಗೆ ಇದರ ಅರಿವಾಗಿಲ್ಲ. ನಿಜವಾಗಿಯೂ ಅಂಬಾರಿ ಕಳುವಾಗಿದೆ ಎಂದು ತಿಳಿದು, ತನಗೇ ಮೊದಲು ಸುದ್ದಿ ಗೊತ್ತಾಗಿದ್ದು ಎಂಬ ಹೆಮ್ಮೆಯಿಂದ ಅರ್ಧ ಊರಿಗೆ ಅಂಬಾರಿ ಕಳುವಿನ ಸುದ್ದಿಯನ್ನು ಹರಡಿಬಿಟ್ಟಿದ್ದ. ಸುದ್ದಿಯ ಸತ್ಯಾಸತ್ಯತೆ ವಿಚಾರಿಸುವ ಗೋಜಿಗೇ ಹೋಗದೆ ಊರಿನವರೂ ನಂಬಿಬಿಟ್ಟರು. ನಿಜಾಂಶ ತಿಳಿಯಲು ಸ್ವಲ್ಪ ಸಮಯವೇ ಬೇಕಾಯ್ತು. ಆಮೇಲೆ ಎಲ್ಲರಿಗೂ ನಕ್ಕು ನಕ್ಕು ಸಾಕಾಯಿತು. ಅವನನ್ನು ಕಂಡಾಗಲೆಲ್ಲ ಆ ಘಟನೆ  ನೆನಪಿಗೆ ಬರುತ್ತದೆ. ಕೆಲವೊಮ್ಮೆ ಅಸ್ಪಷ್ಟ ಮಾಹಿತಿಗಳು ಏನೆಲ್ಲ ರಾದ್ಧಾಂತ ಉಂಟು ಮಾಡುತ್ತವೆ ಎಂಬುದಕ್ಕೆ ಈ ಪ್ರಸಂಗವೇ ಸಾಕ್ಷಿ.         

Advertisement

– ನಂದೀಶ.ಬಿ.ಹದಿನಾರು 

Advertisement

Udayavani is now on Telegram. Click here to join our channel and stay updated with the latest news.

Next