Advertisement

ಅರಮನೆ ನಗರಿಯಲ್ಲಿ ಇಂದಿನಿಂದ ದಸರಾ ರಂಗು

08:31 AM Sep 21, 2017 | Team Udayavani |

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಹತ್ತು ದಿನಗಳ ಮೈಸೂರು ದಸರಾ ಮಹೋತ್ಸವಕ್ಕೆ ಗುರುವಾರ ಚಾಲನೆ ಸಿಗಲಿದೆ. ದಸರೆಗೆ ಸಿದ್ಧ ಗೊಂಡಿರುವ ಮೈಸೂರು ನಗರ ಕತ್ತಲಾಗುತ್ತಿ ದ್ದಂತೆ ವಿದ್ಯುತ್‌ ದೀಪಾಲಂಕಾರದಿಂದ ಜಗಮಗಿಸುತ್ತಿದೆ.

Advertisement

ಗುರುವಾರ ಬೆಳಗ್ಗೆ 8.45ರ ತುಲಾ ಲಗ್ನದಲ್ಲಿ ಚಾಮುಂಡಿಬೆಟ್ಟದಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ನಿತ್ಯೋತ್ಸವ ಕವಿ ಪ್ರೊ.ಕೆ.ಎಸ್‌.ನಿಸಾರ್‌ ಅಹಮದ್‌ ಅವರು 407ನೇ ದಸರಾ ಮಹೋ ತ್ಸವವನ್ನು ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಡಾ.ಎಚ್‌ .ಸಿ.ಮಹದೇವಪ್ಪ, ತನ್ವೀರ್‌ ಸೇಠ್, ಉಮಾಶ್ರೀ, ಪ್ರಿಯಾಂಕ ಖರ್ಗೆ, ರುದ್ರಪ್ಪ ಮಾನಪ್ಪ ಲಮಾಣಿ, ವಿಧಾನ ಪರಿಷತ್‌ ಉಪ ಸಭಾಪತಿ ಮರಿತಿಬ್ಬೇ ಗೌಡ ಉಪಸ್ಥಿತರಿರಲಿದ್ದಾರೆ. ಶಾಸಕ ಜಿ.ಟಿ. ದೇವೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯ ಕ್ರಮಕ್ಕಾಗಿ ಚಾಮುಂಡಿಬೆಟ್ಟದಲ್ಲಿ ದೇವಸ್ಥಾನದ ಹೊರ ಆವರಣದಲ್ಲಿ ವಿಶಾಲವಾದ ಪೆಂಡಾಲ್‌ ಹಾಕಲಾಗಿದ್ದು, ಸುಮಾರು ಒಂದು ಸಾವಿರ ಜನರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.

ಇದೇ ಮೊದಲ ಬಾರಿ ಮುಶೈರಾ: ದಸರಾ ಅಂಗವಾಗಿ ಸಂವಿಧಾನ- ಪ್ರಜಾಸತ್ತೆ-ಸಮಾನತೆ ಕುರಿತು ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಮಾನಸಗಂಗೋತ್ರಿಯ ಸೆನೆಟ್‌ ಭವನದಲ್ಲಿ ಆಯೋಜಿಸಲಾಗಿದೆ. ಬೆಂಗಳೂರು ರಸ್ತೆಯ ಗೋಲ್ಡನ್‌ ಪ್ಯಾಲೇಸ್‌ ಕನ್ವೆನನ್‌ ಹಾಲ್‌ನಲ್ಲಿ ಇದೇ ಮೊದಲ ಬಾರಿ ಉರ್ದು ಕವಿಗಳ ಸಂಗಮ (ಮುಶೈರಾ) ಆಯೋಜಿಸಲಾಗಿದೆ. ಇದೇ ಮೊದಲ ಬಾರಿಗೆ ಸೆ.27ರಂದು ಡಿ. ದೇವರಾಜ ಅರಸು ರಸ್ತೆಯಲ್ಲಿ ಓಪನ್‌ ಸ್ಟ್ರೀಟ್‌ ಫೆಸ್ಟಿವಲ್‌ ಆಚರಿಸಲಾಗುತ್ತಿದೆ. ಇನ್ನುಳಿದಂತೆ ಸೆ.22 ರಿಂದ 29ರವರೆಗೆ ಮಹಾ ರಾಜ ಕಾಲೇಜು ಮೈದಾನದಲ್ಲಿ ಯುವ ದಸರಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಜನಪ್ರಿಯ ಆಹಾರ ಮೇಳವನ್ನು ಈ ಬಾರಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದ ಜತೆಗೆ ಹೋಟೆಲ್‌ ಲಲಿತ್‌ ಮಹಲ್‌ ಪ್ಯಾಲೇಸ್‌ ಪಕ್ಕದ ಮುಡಾ ಮೈದಾನದಲ್ಲೂ ಆಯೋಜಿಸಿದ್ದು, ಇಲ್ಲಿ ಆದಿವಾಸಿ ಆಹಾರ ಪದಾರ್ಥಗಳ ಜತೆಗೆ ಫ‌ುಟ್‌ಪಾತ್‌ ಹೋಟೆಲ್‌ನಿಂದ ಹಿಡಿದು ತಾರಾ ಹೋಟೆಲ್‌ ಗಳವರೆಗಿನ ಸಸ್ಯಾಹಾರಿ ಮತ್ತು ಮಾಂಸಹಾರಿ ಖಾದ್ಯಗಳನ್ನು ಸವಿಯಬಹುದಾಗಿದೆ.

ದಸರಾ ವಸ್ತು ಪ್ರದರ್ಶನದಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಗೆ ಮಳಿಗೆ ತೆರೆಯಲು ಅವಕಾಶ ಕಲ್ಪಿಸಿ, ಸರ್ಕಾರದ ನಾಲ್ಕು ವರ್ಷಗಳ ಸಾಧನೆಯ ಪ್ರಚಾರಕ್ಕೆ ವೇದಿಕೆ ಕಲ್ಪಿಸಲಾಗುತ್ತಿದೆ. ದಸರಾ ಚಲನಚಿತ್ರೋತ್ಸವದಲ್ಲಿ ನಗರದ ಎರಡು ಮಲ್ಟಿಫ್ಲೆಕ್ಸ್‌ ಚಿತ್ರಮಂದಿರಗಳಲ್ಲಿ 30 ರೂ.ಗೆ ಚಿತ್ರ ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ. ಕುಪ್ಪಣ್ಣ ಪಾರ್ಕ್‌ನಲ್ಲಿ ದಸರಾ ಫ‌ಲಪುಷ್ಪ ಪ್ರದರ್ಶನ, ಜೆ.ಕೆ.ಮೈದಾನದಲ್ಲಿ ಮಹಿಳಾ ಮತ್ತು ಮಕ್ಕಳ ದಸರಾ, ರೈತ ದಸರಾ, ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆಗಳು ನಡೆಯಲಿವೆ. ಕಾಡಾ ಕಚೇರಿ  ಆವರಣದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳ ಏರ್ಪಡಿಸಲಾಗಿದೆ. ಮಾನಸಗಂಗೋತ್ರಿಯ ಓವೆಲ್‌ ಮೈದಾನದಲ್ಲಿ ದಸರಾ ಯೋಗಜ್ಯೋತಿ ನಡಿಗೆ, ಕಲಾಮಂದಿರ ದಲ್ಲಿ ಚಿತ್ರಕಲಾ ಶಿಬಿರ ಹಾಗೂ ಸೃಜನಾತ್ಮಕ ಕಲಾ ಶಿಬಿರ ಏರ್ಪಡಿಸಲಾಗಿದೆ.

10 ದಿನ ವಿವಿಧ ಕಾರ್ಯಕ್ರಮಗಳು
ಪಾರಂಪರಿಕ ನಡಿಗೆ, ಅರಮನೆ ಆವರಣದಲ್ಲಿ ಯೋಗೋತ್ಸವ, ಹಾಫ್ ಮ್ಯಾರಥಾನ್‌, ಜಾವಾ ಮೋಟಾರ್‌ ಸೈಕಲ್‌ ಸವಾರಿ, ರಾಜ್ಯಮಟ್ಟದ ಯೋಗಾಸನ ಸ್ಪರ್ಧೆ, ದಸರಾ ಕವಿಗೋಷ್ಠಿ, ಚಾಮುಂಡಿಬೆಟ್ಟಕ್ಕೆ ಯೋಗ ಚಾರಣ, ಡಿ.ದೇವರಾಜ ಅರಸು
ವಿವಿದೋದ್ದೇಶ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ದಸರಾ ಕುಸ್ತಿ ಸ್ಪರ್ಧೆ, ಸೈಕ್ಲೋಥಾನ್‌ ಸೇರಿ ಹತ್ತು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ಗಾಲಿಗಳ ಮೇಲೆ ಅರಮನೆ ಕಾರ್ಯಕ್ರಮದಡಿ ಒಂದು ದಿನದ ಪ್ರವಾಸಿ ಪ್ಯಾಕೇಜ್‌, ಕೆಎಸ್ಸಾರ್ಟಿಸಿಯಿಂದ ಮೈಸೂರು ಸುತ್ತಮುತ್ತಲಿನ ಪ್ರೇಕ್ಷಣಿಯ ಸ್ಥಳಗಳನ್ನು ತೋರಿಸುವ ದೇವದರ್ಶಿನಿ, ವನದರ್ಶಿನಿ ಹಾಗೂ ಜಲದರ್ಶಿನಿ ಹೆಸರಿನ ಒಂದು ದಿನದ ಪ್ರವಾಸವನ್ನು ಆಯೋಜಿಸಲಾಗಿದೆ. ವರುಣ ಕೆರೆಯಲ್ಲಿ ಜಲಸಾಹಸ ಕ್ರೀಡೆಗಳನ್ನು ಆಯೋಜಿಸಲಾಗಿದೆ.

Advertisement

ಪ್ರಶಸ್ತಿ ಪ್ರದಾನ ಇಂದು
ಗುರುವಾರ ಸಂಜೆ ಅರಮನೆ ಮುಂಭಾಗದ ವೇದಿಕೆಯಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಸಕ್ತ ಸಾಲಿನ ರಾಜ್ಯ ಸಂಗೀತ ವಿದ್ವಾನ್‌ ಪ್ರಶಸ್ತಿಯನ್ನು ಕರ್ನಾಟಕ ಸಂಗೀತದ ಹಿರಿಯ ಕಲಾವಿದೆ ವಿದೂಷಿ ಎ.ರಾಜಮ್ಮ ಕೇಶವಮೂರ್ತಿ ಅವರಿಗೆ ಪ್ರದಾನ ಮಾಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next