Advertisement

ಎಂಟು ವೇದಿಕೆಗಳಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮ

09:47 PM Sep 21, 2019 | Lakshmi GovindaRaju |

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅಂಬಾವಿಲಾಸ ಅರಮನೆ ಸೇರಿದಂತೆ ನಗರದ ಎಂಟು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು. ನಗರದ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಶನಿವಾರ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಭಿತ್ತಿಚಿತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು.

Advertisement

ಸೆ.29ರಿಂದ ಅ.7ರವರೆಗೆ ಅರಮನೆ ಮುಂಭಾಗ, ಜಗನ್ಮೋಹನ ಅರಮನೆ, ಕಲಾಮಂದಿರ ಆವರಣದ ಕಿರು ರಂಗಮಂದಿರ, ಪುರಭವನ, ಚಿಕ್ಕ ಗಡಿಯಾರ, ಗಾನಭಾರತಿ ಹಾಗೂ ನಾದಬ್ರಹ್ಮ ಸಂಗೀತ ಸಭಾ ಸೇರಿದಂತೆ ನಗರದ ಒಟ್ಟು ಎಂಟು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ದೇಶದ ವಿವಿಧೆಡೆಯ ಹಲವಾರು ಖ್ಯಾತ ಕಲಾವಿದರು, ವಿದ್ವಾಂಸರು ಕಾರ್ಯಕ್ರಮ ನೀಡಲಿದ್ದಾರೆ ಎಂದರು.

ಎಲ್ಲಾ ವೇದಿಕೆಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಗ್ರ ಮಾಹಿತಿಯುಳ್ಳ ಕಿರುಹೊತ್ತಿಗೆಯನ್ನು ಸೆ.26ರಂದು ಬಿಡುಗಡೆ ಮಾಡುವುದಾಗಿ ತಿಳಿಸಿದರು. ಅರಮನೆ ವೇದಿಕೆಯಲ್ಲಿ ಸೆ.29ರಂದು ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು, ಮೈಸೂರಿನ ಸಂಗೀತ ವಿದ್ವಾಂಸರಾದ ಪ್ರೊ.ಬಿ.ಎಸ್‌.ವಿಜಯ ರಾಘವನ್‌ ಅವರಿಗೆ 2019ನೇ ಸಾಲಿನ ರಾಜ್ಯ ಸಂಗೀತ ವಿದ್ವಾನ್‌ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಮೂಲಸೌಕರ್ಯಕ್ಕೆ ಒತ್ತು: ಚಾಮುಂಡಿಬೆಟ್ಟದಲ್ಲಿ ಯಾತ್ರಿಕರ ನಿರೀಕ್ಷೆಗೆ ತಕ್ಕಂತೆ ಮೂಲಸೌಕರ್ಯಗಳಿಲ್ಲ. ಹೀಗಾಗಿ ಮೂಲ ಸೌಕರ್ಯ ಒದಗಿಸಲು ಒತ್ತು ನೀಡಲಾಗುವುದು. ಮೆಟ್ಟಿಲುಗಳ ಮೂಲಕ ಬೆಟ್ಟ ಹತ್ತುವವರಿಗಾಗಿ ಅಲ್ಲಲ್ಲಿ ವಿಶ್ರಾಂತಿ ತಾಣ, ಶೌಚಾಲಯ ನಿರ್ಮಿಸಲಾಗುವುದು. 4.5 ಕೋಟಿ ರೂ. ವೆಚ್ಚದಲ್ಲಿ ಬೆಟ್ಟದಲ್ಲಿನ ರಸ್ತೆಗಳನ್ನು ಡಾಂಬರೀಕರಣ ಮಾಡಿಸಲಾಗುವುದು.

ದಸರಾ ಮುಗಿದ ಮೂರು ತಿಂಗಳಲ್ಲಿ ಚಾಮುಂಡಿಬೆಟ್ಟ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರು ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಎನ್‌.ವಿ.ಫ‌ಣೀಶ್‌ ಮಾತನಾಡಿ, ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉತ್ತಮ ಕಲಾವಿದರು, ವಿದ್ವಾಂಸರನ್ನು ಗುರುತಿಸಲಾಗಿದ್ದು, ಉತ್ಕೃಷ್ಟ ಕಾರ್ಯಕ್ರಮಗಳನ್ನು ಜೋಡಿಸಲಾಗಿದೆ ಎಂದು ತಿಳಿಸಿದರು.

Advertisement

ಶಾಸಕ ಎಲ್‌.ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌, ಜಿಪಂ ಸಿಇಒ ಕೆ.ಜ್ಯೋತಿ, ಸಮಿತಿ ಕಾರ್ಯಾಧ್ಯಕ್ಷ ವಿ.ಎನ್‌.ಮಲ್ಲಿಕಾರ್ಜುನ ಸ್ವಾಮಿ, ಕಾರ್ಯದರ್ಶಿ ಎಚ್‌.ಚನ್ನಪ್ಪ ಮೊದಲಾದವರು ಉಪಸ್ಥಿತರಿದ್ದರು.

ಹಾಲುಣಿಸುವ ತಾಣ: ಜಂಬೂ ಸವಾರಿಯಂದು ಮೆರವಣಿಗೆ ಸಾಗುವ ಮಾರ್ಗದಲ್ಲಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಜೊತೆಗೆ ಈ ಬಾರಿ ತಾಯಂದಿರಿಗೆ ಮಕ್ಕಳಿಗೆ ಹಾಲುಣಿಸುವ ತಾಣಗಳನ್ನು ಅಲ್ಲಲ್ಲಿ ಸ್ಥಾಪಿಸಲಾಗುವುದು ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು. ನಗರದ ಸ್ವತ್ಛತೆ ಕಾರ್ಪಾಡುವ ಪೌರಕಾರ್ಮಿಕರೊಂದಿಗೆ ಸೆ.24ರಂದು ಸಹ ಭೋಜನ ಏರ್ಪಡಿಸುವುದಾಗಿ ಸಚಿವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next