Advertisement

ನಗರದಲ್ಲಿ ವಿಜೃಂಭಣೆಯ ದಸರಾ ಆಚರಣೆ

12:38 PM Oct 20, 2018 | |

ಬೆಂಗಳೂರು: ಜೆ.ಸಿ.ನಗರದಲ್ಲಿ ಶುಕ್ರವಾರ ದಸರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಜೆ.ಸಿ.ನಗರ ದಸರಾ ಮಹೋತ್ಸವ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುತ್ತಮುತ್ತಲ ಪ್ರದೇಶಗಳಿಂದ ಅಲಂಕೃತ ರಥಗಳಲ್ಲಿ ಉತ್ಸವ ಮೂರ್ತಿ ಹೊತ್ತು ಬಂದಿದ್ದ ತೇರು ಹಾಗೂ ಪಲ್ಲಕಿಗಳನ್ನು ಕಂಡು ಭಕ್ತರು ಪುಳಕಿತರಾದರು.

Advertisement

ರಾತ್ರಿ 9.30ರ ಸುಮಾರಿಗೆ ಆರಂಭವಾದ ಪಲ್ಲಕ್ಕಿ ಮೆರವಣಿಗೆ ಶಿವಾಜಿನಗರ, ಆರ್‌.ಟಿ.ನಗರ, ಲಕ್ಷ್ಮೀದೇವಮ್ಮ ಬ್ಲಾಕ್‌, ಸಿಬಿಐ ರಸ್ತೆ, ಮಠದಹಳ್ಳಿ, ಮೋತಿನಗರ, ಗಂಗೇನಹಳ್ಳಿ, ಸುಲ್ತಾನ್‌ಪಾಳ್ಯ, ಯಶವಂತಪುರ, ಹೆಬ್ಟಾಳ, ಗಂಗಾನಗರ ಭಾಗಗಳಿಂದ ದೇವರ ಮೂರ್ತಿಗಳು ಅಲಂಕೃತಗೊಂಡ ರಥಗಳಲ್ಲಿ ಜೆ.ಸಿ.ನಗರದ ದಸರಾ ಮೈದಾನದತ್ತ ಸಾಗಿ ಬಂದವು. ದರೊಂದಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಪ್ರತಿಮೆಯ ಮೆರವಣಿಗೆ ಆಕರ್ಷಣೀಯವಾಗಿತ್ತು.

ಮಧ್ಯರಾತ್ರಿ ಸುಮಾರಿಗೆ ಮೈದಾನಕ್ಕೆ ವಿವಿಧೆಡೆಯ ರಥಗಳು ಬಂದು ತಲುಪಿದ ಬಳಿಕ ಬನ್ನಿಮರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಲಾಯಿತು. ಅರಮನೆ ರಸ್ತೆಯ ಮಾರ್ಗವಾಗಿ ಸಾಗಿದ ಮೆರವಣಿಗೆ ಮುಂಜಾನೆ ವೇಳೆಗೆ ದರಸಾ ಮೈದಾನ ತಲುಪಿತ್ತು. ಪ್ರತಿವರ್ಷ ನಡೆಯುವ ಮಹೋತ್ಸವದಲ್ಲಿ ಭಾಗಿಯಾಗಲು ಸುತ್ತಮುತ್ತಲಿನ ರಸ್ತೆಗಳಲ್ಲಿ ಸಾವಿರಾರು ರಸ್ತೆಗಳು ಸೇರಿದ್ದ ದೃಶ್ಯ ಕಂಡುಬಂತು. 

ರಥಗಳು ಸಾಗಿಬಂದ ಪ್ರತಿಯೊಂದು ರಸ್ತೆಗಳ ಇಕ್ಕೆಲಗಳಲ್ಲಿಯೂ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು. ಹೂವಿನ ಪಲ್ಲಕಿ, ಪೂಜಾ ಕುಣಿತ, ಡೊಳ್ಳು ಕುಣಿತ, ಕೀಲು ಕುದುರೆ, ಗೊರವರ ಕಣಿತ, ಕರಡಿ ಮೇಳ ಸೇರಿದಂತೆ ವಿವಿಧ ಜನಪದ ಕಲಾತಂಡಗಳು ಮೆರವಣಿಗೆಯ ಮೆರಗು ಹೆಚ್ಚಿಸುವಂತಿತ್ತು. 

ಪಟಾಕಿ ಹಚ್ಚಿ ಸಂಭ್ರಮಿಸಿದ ಭಕ್ತರು: ಜೆ.ಸಿ.ನಗರ ದಸರಾ ಮೈದಾನಕ್ಕೆ ದೇವರುಗಳನ್ನು ಮೆರವಣಿಗೆಯ ಮೂಲಕ ತರುವ ವೇಳೆ ಭಕ್ತರು ರಸ್ತೆಗಳಲ್ಲಿ ಪಾಟಕಿಗಳನ್ನು ಸಿಡಿಸಿ ಸಂಭ್ರಮಿಸಿದರು. ಆಕಾಶಗಳಲ್ಲಿ ಸಿಡಿಯುತ್ತಿದ್ದ ಪಟಾಕಿಗಳನ್ನು ನೋಡಲು ಹಾಗೂ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಜನರು ಮಹಡಿ ಮೇಲೆ ನಿಂತಿದ್ದರು.

Advertisement

ವಿಜೃಂಭಣೆಯ ದುರ್ಗಾದೇವಿ ಮೆರವಣಿಗೆ: ನವರಾತ್ರಿ ಉತ್ಸವದ ಅಂಗವಾಗಿ ನಗರದ ಮನೆಗಳಲ್ಲಿ ಪ್ರತಿಷ್ಠಾಪಿಸಿದ್ದ ಗೊಂಬೆ ಪ್ರದರ್ಶನಕ್ಕೆ ತೆರೆಬಿತ್ತು. ಇದೇ ಸಂದರ್ಭದಲ್ಲಿ ನಾನಾ ಪ್ರದೇಶಗಳಲ್ಲಿ ನವದುರ್ಗೆಯರನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿ ಸಂಜೆ ದುರ್ಗಾದೇವಿ ಮೂರ್ತಿಗಳನ್ನು ಮೆರವಣಿಗೆ ನಡೆಸಿದ ಬಳಿಕ ಹಲಸೂರು ಕೆರೆ ಸೇರಿದಂತೆ ನಗರದ ವಿವಿಧ ಕೆರೆಗಳಲ್ಲಿ ವಿಸರ್ಜಿಸಲಾಯಿತು.

ಪ್ರಮುಖವಾಗಿ ಬೆಂಗಾಳಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪ್ರದೇಶಗಳಲ್ಲಿ ದೇವಿಯ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಐದು ದಿನಗಳ ಪೂಜಿಸಲಾಗಿದ್ದು, ದಸರಾ ದಿನವಾದ ಶುಕ್ರವಾರ ನಗರದ ವಿವಿಧ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಬಣ್ಣದೋಕುಳಿಯ ನಡುವೆ ದೇವಿ ಮೂರ್ತಿಯನ್ನು ವಿಸರ್ಜಿಸಲಾಯಿತು. ಇದರೊಂದಿಗೆ ನಗರದ ಪ್ರಮುಖ ಭಾಗಗಳಲ್ಲಿ ಆಯೋಜಿಸಿದ್ದ ದಾಂಡಿಯಾ ನೃತ್ಯದಲ್ಲಿ ಮಹಿಳೆಯರು, ಮಕ್ಕಳು ಭಾಗವಹಿಸಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next