Advertisement
2013ರ ಮಾರ್ಚ್ ತಿಂಗಳು. ಡಾರನ್ ಫರ್ಗಸ್ಸನ್ (Darren Ferguson) ಎಂಬಾತ ಕಟ್ಟಿ ಬೆಳೆಸಿದ ”Beyond Skin” ಎನ್ನುವ ಸಂಸ್ಥೆಯ ಸಂಪರ್ಕಕ್ಕೆ ಬಂದಿದ್ದೆ. ಮತ್ತೂಮ್ಮೆ ಈ ಪರಿಚಯ ಆದದ್ದು ಸಂಗೀತದ ಮುಖಾಂತರವೇ, IF (enough food for everyone) ಎಂಬ ಚಾರಿಟಿಗೆ ಒಂದು ಹಾಡು ರೆಕಾರ್ಡ್ ಮಾಡುವವರಿದ್ದರು. ಅದಕ್ಕೆ ಒಂದು ಸಂಸ್ಕೃತ ಶ್ಲೋಕ ಹಾಡಲು ನನ್ನ ಕರೆದಿದ್ದರು. ಈ ಮೊದಲು, ಅನಂತರ ಈ ಸಂಸ್ಥೆಯೊಂದಿಗೆ ಅದೆಷ್ಟೋ ಕಾರ್ಯಕ್ರಮ, ಕಾರ್ಯಾಗಾರ, ತರಬೇತಿ, ತರಗತಿ ಮಾಡಿದ್ದೇನೆಯೋ ಲೆಕ್ಕವಿಟ್ಟಿಲ್ಲ.
Related Articles
Advertisement
ನಮ್ಮೊಳಗಿನ ಪ್ರತಿಭೆ ಅನಾವರಣಕ್ಕೆ ಪೂರಕ ವಾತಾವರಣವಿರಬೇಕು, ನಮ್ಮ ಮೇಲೆ ನಮಗೆ ನಂಬಿಕೆ ಮಾತ್ರವಲ್ಲ ನಮ್ಮೊಂದಿಗೆ ಇರುವವರಿಗೂ ನಮ್ಮ ಮೇಲೆ ನಂಬಿಕೆ ಇರಬೇಕು. ಇದೇ ಡಾರನ್ ಮಾಡುವ ಕಾರ್ಯ.
ಆತನ ತಂಡದೊಂದಿಗೆ ನಾನು ಈ ದೇಶದ ಚಿಕ್ಕ ಪುಟ್ಟ ಹಳ್ಳಿಗಳನ್ನೂ ಬಿಡದೆ ತಿರುಗಿದ್ದೇನೆ. ಆ ದಿನ ಸಿಸ್ಟರ್ ನಿವೇದಿತಾ ಹುಟ್ಟಿದ ಊರು ಡ್ಯಾನಗಾನನ್‌ನ ಪ್ರಾಥಮಿಕ ಶಾಲೆಗೆ ರಂಗೋಲಿ ಕಾರ್ಯಾಗಾರಕ್ಕೆ ಹೋದಾಗ ಅಲ್ಲಿನ ಶಿಕ್ಷಕಿ, ನಮ್ಮ ಊರಿನ ಮಗಳು ನಿಮ್ಮ ದೇಶಕ್ಕೆ ಹೋಗಿದ್ದಳು, ಈಗ ನೀವು ನಮ್ಮಲ್ಲಿಗೆ ಬಂದಿದ್ದೀರಿ, ಸ್ವಾಗತ ಎಂದು ಹೇಳಿ ಅಪ್ಪಿಕೊಂಡಾಗ ದೇವರು ನನಗೆ ಉತ್ತರಿಸಿದ ಎಂದೆನಿಸಿತು.
ಈ ಸಂಸ್ಥೆಯ ಇನ್ನೊಂದು ವಿಶೇಷ ಕೆಲಸ ವಿದೇಶದಲ್ಲಿರುವ ಯುವ ಕಲಾವಿದರನ್ನು ಕರೆಸಿ ಅವರಿಂದ ಇಲ್ಲಿನ ಯುವಜನರಿಗೆ ತರಬೇತಿ ಕೊಡಿಸುವುದು. ಇಲ್ಲಿನ ಕಲಾವಿದರನ್ನು ಅವರಲ್ಲಿಗೆ ಕಳಿಸುವುದು, ಇಂಥ ಕಲಾವಿದರನ್ನು ”peace ambassadors”’ ಎಂದು ಕರೆಯಲಾಗುತ್ತದೆ. ಶ್ರೀಲಂಕಾದ ಶಾಲೆಯೊಂದರಲ್ಲಿ ಮಕ್ಕಳು ಮತ್ತು ಇಲ್ಲಿನ ಗ್ರಾಮರ್ ಸ್ಕೂಲ್ ಮಕ್ಕಳು ಒಂದೇ ಮ್ಯೂಸಿಕಲ್ ಟ್ಯೂನ್ ಅನ್ನು ಅಭ್ಯಾಸ ಮಾಡಿ ಸುಂದರವಾದ ವೀಡಿಯೋ ಒಂದನ್ನು ಮಾಡಿದ್ದನ್ನು ನೋಡಿದರೆ ಮನಸು ತುಂಬಿ ಬರುತ್ತದೆ.
ಈಗ ಅನಿಸುತ್ತದೆ ಜಗತ್ತಿನ ಈ ಸುಂದರ ಮಗ್ಗಲನ್ನು ನನಗೆ ಪರಿಚಯಿಸಲೆಂದೇ ದೇವರು ನನ್ನನ್ನು ಇಲ್ಲಿ ತಂದು ಹಾಕಿದ.
2017ರಲ್ಲಿ ಈ ಕಾರ್ಯಕ್ರಮದನ್ವಯ ಇಲ್ಲಿಗೆ ಕೊಲಂಬಿಯಾ ದೇಶದಿಂದ ಹಲವಾರು ಕಲಾವಿದರು ಬಂದಿದ್ದರು. ಅವರಿಗೆ ಇಂಗ್ಲಿಷ್ ಬರುತ್ತಿರಲಿಲ್ಲ. ಅದರಲ್ಲಿ ದುಬಾಷಿಯೊಬ್ಬನಿದ್ದ. ಆ ಎಲ್ಲ ಕಲಾವಿದರಲ್ಲಿ ಅತೀ ಉತ್ಸಾಹಿಯಾಗಿದ್ದವಳು ನತಾಲಿ. 20 ವರ್ಷದ ನಗುಮೊಗದ ಹುಡುಗಿ. ಆಕೆ ಕೊಲಂಬಿಯಾದ ಜನಪದ ನೃತ್ಯ, ಡ್ರೀಮ್ ಕ್ಯಾಚರ್, ವಿಶಿಷ್ಟ ರೀತಿಯಿಂದ ಮಾಡಲಾಗುವ ಬ್ರೇಸ್ಲೇಟ್‌ಗಳ ಕುರಿತು ಇಲ್ಲಿನ ಮಕ್ಕಳಿಗೆ ಹೇಳಿಕೊಡಲು ಬಂದಿದ್ದಳು. ಆಕೆ ಇಲ್ಲಿ ಉಳಿದಿದ್ದು ಕೇವಲ 10 ದಿನ. ಆದರೆ ಮರಳುವಾಗ “ಅಯ್ಯೋ ಇನ್ಯಾವಾಗ ಇವಳನ್ನು ಭೇಟಿ ಮಾಡುವುದೋ’ ಎಂದೆನಿಸಿ ಬಿಡುವಷ್ಟು ಹತ್ತಿರವಾಗಿದ್ದಳು. ದೇವರಿಗೂ ಆಕೆಯ ಮೇಲೆ ತುಂಬಾ ಪ್ರೀತಿ ಬಂದಿರಬೇಕು. ಐರೆಲಂಡ್ ಭೇಟಿಯ ಒಂದು ವರ್ಷದೊಳಗೆ ಬ್ರೇನ್ ಟ್ಯೂಮರ್‌ಗೆ
ತುತ್ತಾಗಿ ಬಾರದ ಲೋಕಕ್ಕೆ ತೆರಳಿದಳು. ನಾವೆಲ್ಲ ಈ ಸುದ್ದಿಯನ್ನು ನಂಬಲಾಗದ ಸ್ಥಿತಿಯಲ್ಲೇ ಇರುವಾಗ ಡಾರನ್ ಆಕೆಯ ಕುಟುಂಬಕ್ಕೆ ಧನಸಹಾಯ ಸಂಗ್ರಹಿಸಿ ಕೊಟ್ಟಿದ್ದ. ಆಕೆಯ ಹೆಸರಿನಲ್ಲಿ ಒಂದು ಹೂ ಬಿಡುವ ಮರ ನೆಟ್ಟಿದ್ದ. ಆಕೆಯ ಜೀವನೋತ್ಸಾಹ, ಸಮಾಜಮುಖೀ ಕಾರ್ಯಗಳಲ್ಲಿ ಆಕೆಗಿದ್ದ ಆಸಕ್ತಿ, ತನ್ನಿಂದ ಆ ಸಕಾರಾತ್ಮಕ ಬದಲಾವಣೆ ಸಾಧ್ಯ ಎನ್ನುವ ಆತ್ಮವಿಶ್ವಾಸಕ್ಕೆ ನತಾಲಿ ಹೆಸರಲ್ಲಿ ಫೌಂಡೇಶನ್ ಶುರು ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಆರ್ಟ್ಸ್ ಡೈಲಾಗ್ ತಂಡದ ಸದಸ್ಯರು ವಿವಿಧ ದೇಶಗಳಿಂದ ಬಂದಿದ್ದರು. ನತಾಲಿಯ
ಸಹೋದರಿಯೂ ಕೊಲಂಬಿಯಾದಿಂದ ಬಂದಿದ್ದಳು. ಈ ಫೌಂಡೇಶನ್ ಮೂಲಕ ಯೋಗ್ಯ ಯುವ ಕಲಾವಿದೆಯರಿಗೆ ಕಲಿಕೆಗೆ ಸಹಾಯ ಮಾಡುವ ಕಾರ್ಯ ನಡೆಸಲಾಗುತ್ತಿದೆ. ಎಲ್ಲಿಯ ಮುಂಡಗೋಡ, ಎಲ್ಲಿಯ ಕೊಲಂಬಿಯಾ, ಎಲ್ಲಿಯ ಐರೆಲಂಡ್? ನಮ್ಮನ್ನು ಬೆಸೆದಿದ್ದು ಮಾತ್ರ ಸಂಗೀತ, ಕಲೆ. ಡಾರನ್ ಹೇಳುವಂತೆ “ನಾವು ನಮ್ಮ ಧರ್ಮ, ನಂಬಿಕೆ ಭಾಷೆ, ಸಂಸ್ಕೃತಿ ಯಾವುದನ್ನೂ ಬಿಡಬೇಕಿಲ್ಲ. ಆ ಚೌಕಟ್ಟಿನಲ್ಲಿದ್ದುಕೊಂಡೇ ನಮ್ಮಂತೆ ಇತರರು ಅಂದುಕೊಂಡು ಸಾಧ್ಯವಾದರೆ ಒಂದಷ್ಟು ಪ್ರೀತಿ ಹಂಚಿದರೆ ಸಾಕು ಮತ್ತು ಕಲಾವಿದರು ಸಂಗೀತಗಾರರು ಮನಸು ಮಾಡಿದರೆ ಈ ಜಗತ್ತು ಪ್ರೇಮ, ಶಾಂತಿ, ಸೌಹಾರ್ದತೆಯಿಂದ ತುಂಬಿ ತುಳುಕಾಡುವುದರಲ್ಲಿ ಸಂಶಯವೇ ಇಲ್ಲ’.
ಅಮಿತಾ ರವಿಕಿರಣ್,
ಬೆಲ್‌ಫಾಸ್ಟ್, ನಾರ್ದನ್ ಐರೆಲಂಡ್