Advertisement

ನಗರದೊಳಗೊಂದು ಕತ್ತಲ ಹಾದಿ: ಇಲ್ಲಿ ಟಾರ್ಚ್‌ ಹಾಕಿಕೊಂಡೇ ಹೋಗಬೇಕು!

05:41 AM Jan 25, 2019 | Team Udayavani |

ಮಹಾನಗರ: ಕತ್ತಲಾದೊಡನೆ ಈ ರಸ್ತೆಯಲ್ಲಿ ಬಂದರೆ ನಿಮಗೆ ಗ್ರಾಮೀಣ ಭಾಗದಲ್ಲಿ ಸಂಚರಿಸಿದ ಅನುಭವವಾಗದೇ ಇರದು. ಹೌದು.. ಸುತ್ತಲೂ ಕಗ್ಗತ್ತಲು, ಪಾದಚಾರಿಗಳ ಕೈಯಲ್ಲಿ ಟಾರ್ಚ್‌…

Advertisement

ಇದು ಬೇರೆ ಊರಿನ ಕಥೆಯಲ್ಲ . ಅಭಿ ವೃದ್ಧಿ ಹೊಂದುತ್ತಿರುವ ನಗರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮಂಗಳೂರಿನ ಹೃದಯ ಭಾಗದಲ್ಲಿರುವ ಕೋರ್ಟ್‌ ರಸ್ತೆಯ ಅವಸ್ಥೆ. ರಸ್ತೆ ಕಾಮಗಾರಿ ಭಾಗಶಃ ಮುಗಿದು ತಿಂಗಳುಗಳು ಕಳೆದರೂ ಈ ರಸ್ತೆಗೆ ದಾರಿದೀಪದ ವ್ಯವಸ್ಥೆ ಕಲ್ಪಿಸಲಾಗಿಲ್ಲ. ಆ ಕಾರಣಕ್ಕೆ ಈ ಭಾಗದಲ್ಲಿ ನಡೆಯುವ ಪಾದಚಾರಿಗಳು ಕೈಯಲ್ಲಿ ಮೊಬೈಲ್‌ ಟಾರ್ಚ್‌ ಹಿಡಿದು ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಕರಂಗಲ್ಪಾಡಿಯಿಂದ ಕೆ.ಎಸ್‌. ರಾವ್‌ ರಸ್ತೆಗೆ ಸಂಪರ್ಕ ಕಲ್ಪಿಸುವ 280 ಮೀ. ಉದ್ದದ ಕೋರ್ಟ್‌ ರಸ್ತೆ ಕಾಂಕ್ರೀಟ್ ಕಾಮಗಾರಿಗೆ 2015ರ ಜೂನ್‌ 6ರಂದು ಶಿಲಾನ್ಯಾಸ ನಡೆದಿತ್ತು. ರಾಜ್ಯಸಭಾ ಸದಸ್ಯ ಆಸ್ಕರ್‌ ಫೆರ್ನಾಂಡಿಸ್‌ ಮತ್ತು ಆಗಿನ ಲೋಕೋಪಯೋಗಿ ಸಚಿವ ಮಹಾದೇವಪ್ಪ ಶಿಲಾನ್ಯಾಸ ನೆರವೇರಿಸಿದ್ದರು. ಲೋಕೋಪಯೋಗಿ ಇಲಾಖೆಯಿಂದ 11 ಕೋಟಿ ರೂ. ವೆಚ್ಚದಲ್ಲಿ ಆರಂಭಿಸಲಾದ ರಸ್ತೆ ಕಾಮಗಾರಿ 18 ತಿಂಗಳಲ್ಲಿ ಪೂರ್ಣಗೊಳಿಸುವ ಭರವಸೆ ನೀಡಲಾಗಿತ್ತು. ಆದರೆ ವಿವಿಧ ತಾಂತ್ರಿಕ ಸಮಸ್ಯೆಗಳ ಪರಿಣಾಮ ಮೂರು ವರ್ಷಗಳ ವರೆಗೆ ರಸ್ತೆ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಇದೀಗ ರಸ್ತೆ ಕಾಮಗಾರಿ ಭಾಗಶಃ ಪೂರ್ಣಗೊಂಡರೂ ಪಾದಚಾರಿಗಳು ಈ ರಸ್ತೆಯಲ್ಲಿ ಸಂಚರಿಸಲು ಹಿಂದೇಟು ಹಾಕುವಂತಾಗಿದೆ.

ವಾಹನ ಸವಾರರಿಗೆ ಭಯ
ಕರಂಗಲ್ಪಾಡಿಯಿಂದ ಕೆ.ಎಸ್‌. ರಾವ್‌ ರಸ್ತೆಗೆ ತೆರಳಲು ಕೋರ್ಟ್‌ ರಸ್ತೆ ಸಮೀಪದ ಮಾರ್ಗ. ಆ ಹಿನ್ನೆಲೆಯಲ್ಲಿ ಬಹುತೇಕ ವಾಹನಗಳು ಆ ಮಾರ್ಗದಲ್ಲೇ ಸಂಚರಿಸುತ್ತವೆ. ಅಲ್ಲದೆ ಪಿವಿಎಸ್‌ ರಸ್ತೆಯಲ್ಲಿ ವಾಹನ ದಟ್ಟಣೆಯು ಹೆಚ್ಚುವುದರಿಂದ ಈ ರಸ್ತೆ ಮೂಲಕವೇ ವಾಹನ ಸವಾರರು, ಪಾದಚಾರಿಗಳು ಸಂಚರಿಸುತ್ತಾರೆ. ಹಗಲು ಹೊತ್ತಿನಲ್ಲಿ ವಾಹನ ಸಂಚಾರ ಹಾಗೂ ಜನನಿಬೀಡವಾಗಿರುವ ಪ್ರದೇಶ ರಾತ್ರಿಯಾಗುತ್ತಿದ್ದಂತೆ ಖಾಲಿ ಇರುತ್ತದೆ. ರಸ್ತೆಯ ಎರಡು ಭಾಗಗಳಲ್ಲೂ ಮರಗಿಡಗಳು ದಟ್ಟವಾಗಿ ಬೆಳೆದಿರುವುದರಿಂದ ಸಂಜೆಯಾಗುತ್ತಿದ್ದಂತೆ ರಸ್ತೆ ಸುತ್ತಮುತ್ತ ಕಗ್ಗತ್ತಲು ಆವರಿಸಿಕೊಳ್ಳುತ್ತದೆ. ಪಾದಚಾರಿಗಳು ಮಾತ್ರವಲ್ಲದೆ ವಾಹನ ಸವಾರರು ಈ ಮಾರ್ಗವಾಗಿ ಸಂಚರಿಸಲು ಹಿಂದೇಟು ಹಾಕುವಂತಾಗಿದೆ.

ರಸ್ತೆ ಕಾಮಗಾರಿ ಪೂರ್ಣಗೊಳ್ಳಲು ಮೂರು ವರ್ಷಗಳೇ ಬೇಕಾಯಿತು. ಇನ್ನೂ ಬೀದಿ ದೀಪಗಳನ್ನು ಅಳವಡಿಸುವ ಕಾರ್ಯ ಪೂರ್ಣಗೊಳ್ಳಲು ಇನ್ನೆಷ್ಟು ಸಮಯಬೇಕಾದಿತು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

Advertisement

ಗುತ್ತಿಗೆದಾರರ ಜವಾಬ್ದಾರಿ
ಕರಂಗಲ್ಪಾಡಿಯಿಂದ ಕೆ.ಎಸ್‌. ರಾವ್‌ ರಸ್ತೆಗೆ ಸಂಪರ್ಕ ಕಲ್ಪಿಸುವ 280 ಮೀ. ಉದ್ದದ ಕೋರ್ಟ್‌ ರಸ್ತೆ ಕಾಂಕ್ರೀಟ್ ಕಾಮಗಾರಿಯನ್ನು 11 ಕೋಟಿ ರೂ. ವೆಚ್ಚದಲ್ಲಿ ಮಾಡಲಾಗುತ್ತಿದೆ. ನೀಡಿದ ಗುತ್ತಿಗೆ ಆಧಾರದ ಮೇಲೆ ಕಾಂಕ್ರೀಟ್ ರಸ್ತೆ, ಚರಂಡಿ, ಫುಟ್ಪಾತ್‌, ಬೀದಿ ದೀಪಗಳ ವ್ಯವಸ್ಥೆ ನೀಡುವುದು ಗುತ್ತಿಗೆದಾರನ ಜವಾಬ್ದಾರಿ. ಸಣ್ಣಪುಟ್ಟ ಕೆಲಸ ಇನ್ನೂ ಬಾಕಿ ಇರುವುದರಿಂದ ಬೀದಿದೀಪ ಅಳವಡಿಸಿಲ್ಲ.
– ಎ.ಸಿ. ವಿನಯರಾಜ್‌,
 ಸ್ಥಳೀಯ ಕಾರ್ಪೊರೇಟರ್‌

ಶೀಘ್ರ ಬೀದಿ ದೀಪ ಅಳವಡಿಕೆ
ರಸ್ತೆಯ ಬಹುತೇಕ ಕಾಮಗಾರಿ ಮುಗಿದಿದೆ. ರಸ್ತೆಯ ಬದಿಗಳಲ್ಲಿ ಸುರಕ್ಷತಾ ಕೆಲಸ ಬಾಕಿ ಇದೆ.ಅದನ್ನು ಪೂರ್ಣ ಗೊಳಿಸಿದ ಬಳಿಕ ಬೀದಿ ದೀಪ ಅಳವಡಿಸುವ ಕೆಲಸ ಅಗಲಿದೆ.
– ಕಾಂತರಾಜು,
ಅಧೀಕ್ಷಕ ಅಭಿಯಂತರ, ಲೋಕೋಪಯೋಗಿ ಇಲಾಖೆ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next