ಸುವರ್ಣ ವಿಧಾನಸೌಧ: ಹುಬ್ಬಳ್ಳಿ- ಧಾರವಾಡ ನಡುವಿನ ಭೈರಿದೇವರಕೊಪ್ಪದ ಬಳಿ ಹೆದ್ದಾರಿಯಲ್ಲಿರುವ ಹಜರತ್ ಸಯ್ಯದ್ ಮೆಹಮೂದ್ ಶಹಾ ದರ್ಗಾವನ್ನು ರಸ್ತೆ (ಬಿಆರ್‌ಟಿಎಸ್) ಅಭಿವೃದ್ಧಿಗಾಗಿ ಸ್ಥಳೀಯರ ಒಪ್ಪಿಗೆ ಪಡೆದೇ ಸ್ಥಳಾಂತರಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶೂನ್ಯವೇಳೆಯಲ್ಲಿ ಶಾಸಕ ಪ್ರಸಾದ್ ಅಬ್ಬಯ್ಯ ವಿಷಯ ಮಂಡನೆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಯಾರಿಗೂ ನೋವು ಕೊಡುವ ಉದ್ದೇಶ ಇಲ್ಲ. ಇಡೀ ದೇಶದಲ್ಲಿ ರಸ್ತೆ ಅಗಲೀಕರಣ ವಿಷಯದಲ್ಲಿ ಯಾವ ರೀತಿ ಕ್ರಮಕೈಗೊಳ್ಳಬೇಕೆಂದು ಕಾನೂನು ಇದೆ. 10-12 ವರ್ಷದಿಂದಲೂ ಭೂ ಸ್ವಾಧೀನಕ್ಕೆ ತಡೆಯಾಗಿದ್ದು, ಕಾರಿಡಾರ್ ನಿರ್ಮಿಸಲು ಸ್ಥಳಾಂತರ ಮಾಡಲೇಬೇಕಾಗುತ್ತದೆ. ಈ ವಿಚಾರದಲ್ಲಿ ಆರು ಬಾರಿ ಮಾತುಕತೆ ನಡೆದಿದೆ.
ಅಲ್ಲಿರುವವರೆಲ್ಲ ಗೊತ್ತಿದ್ದಾರೆ, ದರ್ಗಾ ಸ್ಥಳಾಂತರಕ್ಕೂ ಒಪ್ಪಿದ್ದಾರೆ ಹಾಗೂ ನಾವೇ ಮಾಡುತ್ತೇವೆ ಎಂದಿದ್ದಾರೆ. ಅವರಿಗೆ ಏನೆಲ್ಲ ಸಹಕಾರ ಕೊಡಬೇಕೋ ಕೊಡುತ್ತೇವೆ. ಶುಕ್ರವಾರ ಅಲ್ಲಿಗೆ ಭೇಟಿಕೊಡುತ್ತೇನೆ ಎಂದರು. ನಾನು ಆ ಭಾಗದವನೇ. ರಸ್ತೆಗಾಗಿ ಶೋ ರೂಂ, ಮನೆ-ಅಂಗಡಿಗಳನ್ನು ತೆರವು ಮಾಡಲಾಗಿದೆ. ಅಷ್ಟೇ ಏಕೆ ಪ್ರೈಮ್ ಏರಿಯಾದಲ್ಲಿದ್ದ ನನ್ನ ಜಾಗವನ್ನೇ ಸ್ವಾಧೀನ ಮಾಡಿಕೊಳ್ಳಲಾಗಿದೆ. ಐದಾರು ಕೋಟಿ ರೂ. ಬೆಲೆ ಬಾಳುವ ಜಾಗಕ್ಕೆ ಐದಾರು ಲಕ್ಷ ರೂ. ಪರಿಹಾರ ಬಂದಿದೆ ಎಂದರು.
ಶಾಸಕ ಪ್ರಸಾದ್ ಅಬ್ಬಯ್ಯ ಮಾತನಾಡಿ, ಚುನಾವಣೆ ಸಂದರ್ಭ ಇಂತಹ ವಿಚಾರ ಮುನ್ನೆಲೆಗೆ ಬರುತ್ತಿದೆ. ದರ್ಗಾ ತೆರವು ಮಾಡುವ ವಿಷಯದಲ್ಲಿ ಕೋರ್ಟ್ ತಡೆಯಾಜ್ಞೆ ತೆರವು ಮಾಡಿದ್ದರಿಂದ ಏಕಾಏಕಿ 144 ಸೆಕ್ಷನ್ ಹಾಕಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದರಿಂದ ಅಶಾಂತಿ ಸೃಷ್ಟಿ ಮಾಡಿದಂತಾಗುತ್ತದೆ, ಸರ್ಕಾರಕ್ಕೆ ಯಾವ ಒತ್ತಡ ಇದೆಯೋ ಗೊತ್ತಿಲ್ಲ ಎಂದರು.
ಆ ದರ್ಗಾ ಸರ್ವಧರ್ಮ ಸಮನ್ವಯ ಸ್ಥಳ. ಅನೇಕ ವರ್ಷಗಳಿಂದಲೂ ಅಲ್ಲಿದೆ. ಅದನ್ನು ತೆರವು ಮಾಡುವುದರಿಂದ ಉದ್ವಿಗ್ನತೆ ಉಂಟಾಗುತ್ತದೆ, ದ್ವೇಷಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ. ಹೀಗಾಗಿ ಮಂಗಳವಾರ ರಾತ್ರಿ ಸಿಎಂಗೆ ಕರೆ ಮಾಡಿ ತೆರವು ಮಾಡದಂತೆ ಮನವಿ ಮಾಡಿದ್ದೆ ಎಂದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಉಪನಾಯಕ ಯು.ಟಿ.ಖಾದರ್, ದರ್ಗಾವನ್ನು ಮುಟ್ಟಬೇಡಿ, ರಸ್ತೆಗೆ ಅಡಚಣೆಯಾಗುವುದಾದರೆ ಎದುರಿನ ಜಾಗವನ್ನು ಸ್ವಾಧೀನಪಡಿಸಿಕೊಂಡು ಅಲ್ಲಿ ರಸ್ತೆ ಮಾಡಿ ಎಂದು ಸಲಹೆ ನೀಡಿದರು. ಬಿಜೆಪಿಯ ಅರವಿಂದ ಬೆಲ್ಲದ್ ಮಾತನಾಡಿ, ಬಿಆರ್‌ಟಿಎಸ್‌ಗಾಗಿ 13 ಗುಡಿ ಹಾಗೂ ಒಂದು ಚರ್ಚ್ ತೆರವುಗೊಳಿಸಲಾಗಿದೆ. ದರ್ಗಾ ತೆಗೆಯಬಾರದೆಂದರೆ ಹೇಗೆ? ಎಲ್ಲರ ಭಾವನೆಯೂ ಒಂದೇ. ಅಲ್ಲಿ ರಸ್ತೆ ಸುರಕ್ಷಿತವಾಗಿಲ್ಲ, ತೆರವು ಆಗಲೇ ಬೇಕು. ದರ್ಗಾದವರೂ ಸಹ ತೆರವು ಮಾಡಲು ಒಪ್ಪಿದ್ದಾರೆ. ಕಾಂಗ್ರೆಸ್ ಮಾತ್ರ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದರು.