Advertisement

ಧಾರೇಶ್ವರರಿಗೆ ಅರೆಶಿರೂರು ಸಂಸ್ಮರಣಾ ಪ್ರಶಸ್ತಿ 

06:00 AM Dec 07, 2018 | Team Udayavani |

ಬಡಗುತಿಟ್ಟಿನ ಮೇರು ಭಾಗವತ, ಸುಬ್ರಹ್ಮಣ್ಯ ಧಾರೇಶ್ವರರಿಗೆ ಈ ಬಾರಿಯ ಅರೆಶಿರೂರು ದಿ|ರಾಮಚಂದ್ರ ಭಟ್ಟ ಸಂಸ್ಮರಣಾ ಪ್ರಶಸ್ತಿ ಒಲಿದು ಬಂದಿದೆ. ಪ್ರಶಸ್ತಿ ಪ್ರದಾನ ಡಿ. 11ರಂದು ಕುಂದಾಪುರದ ಯಳಜಿತ ಗ್ರಾಮದ ಹೆರಗುಡಿ ಶ್ರೀ ಬಲಮುರಿ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನಡೆಯಲಿದೆ.

Advertisement

ಸುಬ್ರಹ್ಮಣ್ಯ ಭಾಗವತರು ಕಾಳಿಂಗ ನಾವಡರ ಭಾಗವತಿಕೆಯಿಂದ ಆಕರ್ಷಿತರಾಗಿ ಯಕ್ಷರಂಗವನ್ನು ಸೇರಲು ಬಯಸಿ, ಉಪ್ಪೂರು ನಾರಾಯಣ ಭಾವಗವತರ ಶಿಷ್ಯರಾಗಿ, ಆಮೂಲಕ ಯಕ್ಷಗಾನಕ್ಕೆ ಪದಾರ್ಪಣೆ ಮಾಡಿದರು. ಹಿರಿಯರಿಂದ ಹಿಡಿದು ಕಿರಿಯರ ತನಕ ಅನೇಕ ಕಲಾವಿದರನ್ನು ರಂಗದಲ್ಲಿ ಕುಣಿಸಿ, ಗಾನ ಮಾಧುರ್ಯತೆಯಿಂದ ಲಕ್ಷಾಂತರ ಪ್ರೇಕ್ಷಕರಿಗೆ ಆನಂದವನ್ನು ಉಣಬಡಿಸಿದ್ದು; ಉಣ ಬಡಿಸುತ್ತಿರುವುದು ಎಲ್ಲಾ ಕಾಲದಲ್ಲೂ ಸ್ಮರಣೀಯ. ಧಾರೇಶ್ವರರು ಕಲಾಸೇವೆಯನ್ನು ಅಮೃತೇಶ್ವರಿ ಮೇಳ, ಶಿರಸಿ ಪಂಚಲಿಂಗ ಮೇಳ, ಹಿರೆಮಹಾಲಿಂಗೇಶ್ವರ ಮೇಳಗಳಲ್ಲಿ ಸಲ್ಲಿಸಿದ್ದಲ್ಲದೆ 26 ವರ್ಷಗಳ ಕಾಲ ನಿರಂತರವಾಗಿ ಪೆರ್ಡೂರು ಮೇಳದಲ್ಲಿ ಸೇವೆಸಲ್ಲಿಸಿದ್ದು ಗಣನೀಯವಾದುದು. 

ಗಾನಕೋಗಿಲೆ, ರಂಗಮಾಂತ್ರಿಕ ಎಂದೇ ಖ್ಯಾತರಾಗಿರುವ ಧಾರೇಶ್ವರರ ಕಂಠ ಮಾಧುರ್ಯವನ್ನು ಅನುಭವಿಸಿ ಆನಂದಿಸಿದವರು ಅಪಾರ. ಅರವತ್ತು ಸಂವತ್ಸರಗಳನ್ನು ಪೂರೈಸಿದ್ದರೂ ಅದೇ ಇಂಪಾದ ಸ್ವರದಿಂದ ಮನವನ್ನು ತಂಪಾಗಿಸುವ ಇವರ ಪ್ರತಿಭೆಯನ್ನು ಮೆಚ್ಚ ಬೇಕು. ಯಕ್ಷಗಾನದಲ್ಲಿ ಭಾಗವತರೇ ಸೂತ್ರಧಾರರಾಗಿರುತ್ತಾರೆ. ಇಡೀ ಪ್ರಸಂಗ, ಸನ್ನಿವೇಶ, ಪಾತ್ರಗಳನ್ನು ಹಿಡಿತದಲ್ಲಿಟ್ಟುಕೊಂಡು, ರಂಗದಲ್ಲಿ ಅನವಶ್ಯಕ ವಾಗ್ವಾದಗಳನ್ನು ನಿಯಂತ್ರಿಸುತ್ತ, ಕಾಲಮಿತಿಯನ್ನು ಸೂಚಿಸುತ್ತ, ಪ್ರೇಕ್ಷಕರನ್ನು ಕೊನೆಯತನಕ ಹಿಡಿದಿಟ್ಟುಕೊಳ್ಳುವ ದಿಶೆಯಲ್ಲಿ ಭಾಗವತರ ಪಾತ್ರ ಹಿರಿದಾದುದು. ಇಂತಹ ರಂಗತಂತ್ರದಲ್ಲಿ ವಿಶೇಷ ಒಲವು , ಪರಿಣತಿ ಹೊಂದಿರುವವರು ಧಾರೇಶ್ವರರು. 

 ವಿಷ್ಣು ಭಟ್ಟ ಹೊಸ್ಮನೆ 

Advertisement

Udayavani is now on Telegram. Click here to join our channel and stay updated with the latest news.

Next