ಮುಂಬೈ: ಐಸಿಸಿ ಟಿ20 ವಿಶ್ವಕಪ್ ನ ಸೂಪರ್ 12 ಹಂತದ ಎಲ್ಲಾ ಪಂದ್ಯಗಳಲ್ಲೂ ಗೆದ್ದ ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ ಸೋಲನುಭವಿಸಿ ವಿಶ್ವಕಪ್ ಅಭಿಯಾನವನ್ನು ಅಂತ್ಯಗೊಳಿಸಿದೆ. ಪಾಕಿಸ್ಥಾನದ ಸೋಲಿನ ಬಗ್ಗೆ ಹಲವರು ಹಲವು ರೀತಿಯಲ್ಲಿ ವಿಮರ್ಶೆ ಮಾಡುತ್ತಿದ್ದಾರೆ. ಮಾಜಿ ಆಟಗಾರ ದಾನಿಶ್ ಕನೇರಿಯಾ ತನ್ನದೇ ಆದ ಕಾರಣ ನೀಡಿದ್ದಾರೆ.
ಪಂದ್ಯದ ಮೇಲೆ ಹಿಡಿತ ಹೊಂದಿದ್ದ ಬಾಬರ್ ಅಜಂ ಪಡೆ ಕೊನೆಯ ನಾಲ್ಕು ಓವರ್ ನಲ್ಲಿ ಸೋಲನುಭವಿಸಿತು ಎಂದಿದ್ದಾರೆ. ಇದಕ್ಕೆ ಕಾರಣವನ್ನೂ ಕನೇರಿಯಾ ನೀಡಿದ್ದಾರೆ.
ವಿಡಿಯೋದಲ್ಲಿ ಮಾತನಾಡಿದ ಅವರು, ಪಾಕಿಸ್ಥಾನ ನಾಯಕ ಬಾಬರ್ ಅಜಂ ಸ್ವಲ್ಪ ರಕ್ಷಣಾತ್ಮಕ ನಾಯಕತ್ವ ಮಾಡಿದರು. ಫಾರ್ಮ್ ನಲ್ಲಿರದ ಸ್ಮಿತ್ ಬ್ಯಾಟಿಂಗ್ ಗೆ ಆಗಮಿಸಿದ ಆರಂಭದಲ್ಲೇ ಸ್ಲಿಪ್ ಫೀಲ್ಡರ್ ಇರಿಸಿ ಒತ್ತಡ ಹೇರಬೇಕಿತ್ತು. ಆದರೆ ಬಾಬರ್ ಹಾಗೆ ಮಾಡಲಿಲ್ಲ. ಸ್ಮಿತ್ ಬ್ಯಾಟ್ ಸವರಿದ ಚೆಂಡು ಸ್ಲಿಪ್ ನಲ್ಲಿ ಬಿದ್ದು ಬೌಂಡರಿಗೂ ಹೋಯಿತು ಎಂದರು.
ಇದನ್ನೂ ಓದಿ:ರೋಹಿತ್ ವಿಶ್ವದಾಖಲೆಯ ಆಟಕ್ಕೆ ಇಂದಿಗೆ 7ವರ್ಷ: ಪಿರೇರ ಬಿಟ್ಟ ಕ್ಯಾಚ್ ಲಂಕೆಗೆ ಮುಳುವಾಗಿತ್ತು
ಮಾರ್ಕಸ್ ಸ್ಟೋಯಿನಸ್ ವೇಗಿಗಳಿಗೆ ಉತ್ತಮವಾಗಿ ಆಡುತ್ತಾರೆ. ಆದರೆ ಬಲಗೈ ಲೆಗ್ ಸ್ಪಿನ್ನರ್ ಅಥವಾ ಆಫ್ ಸ್ಪಿನ್ನರ್ ಗೆ ಕಷ್ಟ ಪಡುತ್ತಾರೆ. ಹೀಗಾಗಿ ಅನುಭವಿ ಸ್ಪಿನ್ನರ್ ಗಳಾದ ಮೊಹಮ್ಮದ್ ಹಫೀಜ್ ಅಥವಾ ಶೋಯೆಬ್ ಮಲಿಕ್ ಗೆ ಬೌಲಿಂಗ್ ನೀಡಬೇಕಿತ್ತು. ಅವರು ಸ್ಟೋಯಿನಸ್ ಮತ್ತು ವೇಡ್ ವಿಕೆಟ್ ಪಡೆಯುತ್ತಿದ್ದರು. ಸೋಲಿಗೆ ಇದೂ ಒಂದು ಕಾರಣವಾಯಿತು ಎಂದು ದಾನಿಶ್ ಕನೇರಿಯಾ ಹೇಳಿದರು.
ಒಟ್ಟಾರೆ ಪಾಕ್ ತಂಡದ ಪ್ರದರ್ಶನವನ್ನು ಹೊಗಳಿದ ಕನೇರಿಯಾ “ಪಾಕ್ ತಂಡವು ಇಷ್ಟು ಆತ್ಮವಿಶ್ವಾಸದಿಂದ ಮತ್ತು ಈ ರೀತಿ ಉತ್ತಮವಾಗಿ ಆಡುವುದನ್ನು ನಾವು ಎಂದೂ ನೋಡಿಲ್ಲ. ಈ ಟೂರ್ನಿಯಲ್ಲಿ ಪಾಕ್ ತಂಡ ಎಂದಿನಂತೆ ತೋರಲಿಲ್ಲ. ಅವರ ಉತ್ಸಾಹ ಅದ್ಭುತವಾಗಿತ್ತು. ಅವರ ಹೋರಾಟ ಮತ್ತು ಗೆಲ್ಲುವ ಹಂಬಲ ” ಹೇಳಿದರು.
ಸೆಮಿ ಫೈನಲ್ ನಲ್ಲಿ ಕಳಪೆ ಪ್ರದರ್ಶನದ ಹೊರತಾಗಿಯೂ ಹಸನ್ ಅಲಿಯನ್ನು ಕನೇರಿಯಾ ಬೆಂಬಲಿಸಿದರು. “ಹಸನ್ ಅಲಿ ಪಾಕಿಸ್ತಾನದ ಸ್ಟಾರ್. ನಾವೆಲ್ಲರೂ ಅವನನ್ನು ಬೆಂಬಲಿಸಬೇಕು. ಅವರು ಪಾಕಿಸ್ತಾನದ ಭವಿಷ್ಯದ ತಾರೆ” ಎಂದರು.