ನ್ಯೂಯಾರ್ಕ್: ದ್ವಿತೀಯ ಶ್ರೇಯಾಂಕದ ಆಸ್ಟ್ರಿಯನ್ ಟೆನಿಸಿಗ ಡೊಮಿನಿಕ್ ಥೀಮ್ ಮತ್ತು ರಶ್ಯದ ಡ್ಯಾನಿಲ್ ಮೆಡ್ವೆಡೇವ್ ಯುಎಸ್ ಓಪನ್ ಪುರುಷರ ಸೆಮಿಫೈನಲ್‌ನಲ್ಲಿ ಮುಖಾಮುಖಿ ಆಗಲಿದ್ದಾರೆ.
“ಆಲ್ ರಶ್ಯನ್’ ಸೆಣಸಾಟದಲ್ಲಿ ಡ್ಯಾನಿಲ್ ಮೆಡ್ವೆಡೇವ್ 7-6 (8-6), 6-3, 7-5 (7-5) ನೇರ ಸೆಟ್‌ಗಳಿಂದ ಆ್ಯಂಡ್ರೆ ರುಬ್ಲೇವ್ ಅವರನ್ನು ಮಣಿಸಿದರು. ಇದರೊಂದಿಗೆ ಈ ಕೂಟದಲ್ಲಿ ಒಂದೂ ಸೆಟ್ ಕಳೆದುಕೊಳ್ಳದ ಹೆಗ್ಗಳಿಕೆಗೆ ಪಾತ್ರರಾದರು.
ಮೆಡ್ವೆಡೇವ್ ಅವರೀಗ ಇತಿಹಾಸದ ಹೊಸ್ತಿಲಲ್ಲಿದ್ದಾರೆ. 1960ರ ಬಳಿಕ ಒಂದೂ ಸೆಟ್ ಕಳೆದುಕೊಳ್ಳದೆ ಗ್ರ್ಯಾನ್ ಸ್ಲಾಮ್ ಗೆದ್ದ ದಾಖಲೆಗೆ ಪಾತ್ರರಾಗಬಹುದಾದ ಅವಕಾಶವೊಂದು ಅವರಿಗೆ ಎದುರಾಗಿದೆ. ಅಂದು ಆಸ್ಟ್ರೇಲಿಯದ ನೀಲ್ ಫ್ರೆಸರ್ ಯುಎಸ್ ಓಪನ್‌ನಲ್ಲೇ ಈ ಸಾಧನೆ ಮಾಡಿದ್ದರು.
ಮೆಡ್ವೆಡೇವ್ ಕಾಣುತ್ತಿರುವ ಸತತ 2ನೇ ಯುಎಸ್ ಓಪನ್ ಸೆಮಿ ಫೈನಲ್ ಇದಾಗಿದೆ. ಕಳೆದ ವರ್ಷ ಅವರು ಡಿಮಿಟ್ರೋವ್‌ಅವರಿಗೆ ಸೋಲುಣಿಸಿ ಫೈನಲ್‌ಗೆ ಲಗ್ಗೆ ಇರಿಸಿದ್ದರು. ಅಲ್ಲಿ 5 ಸೆಟ್‌ಗಳ ಜಿದ್ದಾ ಜಿದ್ದಿ ಕಾಳಗ ನಡೆಸಿ ರಫೆಲ್ ನಡಾಲ್‌ಗೆ ಶರಣಾಗಿದ್ದರು.
ಇನ್ನೊಂದು ಕ್ವಾರ್ಟರ್ ಫೈನಲ್‌ನಲ್ಲಿ ಡೊಮಿನಿಕ್ ಥೀಮ್ ಕೂಡ 6-1, 6-2, 6-4 ನೇರ ಸೆಟ್‌ಗಳಿಂದ ಆಸ್ಟ್ರೇಲಿಯದ ಅಲೆಕ್ಸ್ ಡಿ ಮಿನೌರ್ ಅವರನ್ನು ಹಿಮ್ಮೆಟ್ಟಿಸಿದರು. ಇದು ಮಿನೌರ್ ವಿರುದ್ಧ ಥೀಮ್ ಸಾಧಿಸಿದ ಸತತ 3ನೇ ಜಯ.