ಶ್ರೀನಗರ: ಈ ವರ್ಷದ ಆರಂಭದಲ್ಲಿ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ನಡೆದ ಉಗ್ರ ದಾಳಿಯಲ್ಲಿ ಸಾವನ್ನಪ್ಪಿದ ಏಳು ಜನರ ಕುಟುಂಬ ಸದಸ್ಯರು ಘಟನೆಯ ಬಗ್ಗೆ ಭದ್ರತಾ ಏಜೆನ್ಸಿಗಳ ಕ್ರಮದಲ್ಲಿ ವಿಳಂಬವನ್ನು ವಿರೋಧಿಸಿ ಸೆಪ್ಟೆಂಬರ್ 4 ರಂದು ಪ್ರತಿಭಟನೆಗೆ ಕರೆ ನೀಡಿದ್ದಾರೆ.
ಜನವರಿ 1 ರಂದು ರಾಜೌರಿಯ ಧಂಗ್ರಿ ಗ್ರಾಮದ ಮೇಲೆ ಭಯೋತ್ಪಾದಕರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದಾಗ ಏಳು ಜನರು ಸಾವನ್ನಪ್ಪಿ, 13 ಮಂದಿ ಗಾಯಗೊಂಡಿದ್ದರು. ಸುಧಾರಿತ ಸ್ಫೋಟಕ ಸಾಧನವನ್ನೂ (IED) ಉಗ್ರರು ಸ್ಥಳದಲ್ಲಿ ಬಿಟ್ಟು ಹೋಗಿದ್ದರು.
ದಾಳಿಯಲ್ಲಿ ತನ್ನ ಇಬ್ಬರು ಪುತ್ರರನ್ನು ಕಳೆದುಕೊಂಡಿರುವ ಸರೋಜ್ ಬಾಲಾ ಅವರು ಜಮ್ಮು-ಪೂಂಚ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುರಾದ್‌ಪುರದಲ್ಲಿ ತಮ್ಮ ಪ್ರತಿಭಟನೆಯನ್ನು ಬೆಂಬಲಿಸಲು ಜನರನ್ನು ಒತ್ತಾಯಿಸಿದ್ದಾರೆ. ಶುಕ್ರವಾರ ಮುರಾದ್‌ಪುರ ಬಥುನಿ, ಕಲ್ಲರ್, ಚಿಂಗಸ್ ಮತ್ತು ನೌಶೇರಾಗೆ ಭೇಟಿ ನೀಡಿದ ಬಾಲಾ, ಶನಿವಾರ ಮತ್ತು ಭಾನುವಾರ ಜಿಲ್ಲೆಯ ಇತರ ಭಾಗಗಳಲ್ಲಿ ಸಾರ್ವಜನಿಕ ಬೆಂಬಲವನ್ನು ಪಡೆಯುವುದಾಗಿ ಹೇಳಿದ್ದಾರೆ.
“ದಾಳಿ ನಡೆದು ಈಗಾಗಲೇ ಎಂಟು ತಿಂಗಳುಗಳು ಕಳೆದಿವೆ ಆದರೆ ನಾವು ಇನ್ನೂ ನ್ಯಾಯಕ್ಕಾಗಿ ಕಾಯುತ್ತಿದ್ದೇವೆ. ಸೆ 4 ರಂದು ನಡೆಯಲಿರುವ ಪ್ರತಿಭಟನೆಯಲ್ಲಿ ಎಲ್ಲರೂ ಕೈಜೋಡಿಸುವಂತೆ ವಿನಂತಿಸುತ್ತೇವೆ ಎಂದು ಹೇಳಿದ್ದಾರೆ. ಸಂತ್ರಸ್ತರ ಕುಟುಂಬಗಳಿಗೆ ಸರ್ಕಾರ 10 ಲಕ್ಷ ರೂ. ಪರಿಹಾರ ಮತ್ತು ಉದ್ಯೋಗ ನೀಡಿದೆ. ನಮಗೆ ಇದೆಲ್ಲ ಬೇಕಾಗಿಲ್ಲ. ಶಾಶ್ವತವಾಗಿ ಹೋದ ನಮ್ಮ ಮಕ್ಕಳಿಗೆ ಯಾವುದೇ ಪರಿಹಾರ ಸಾಕಾಗುವುದಿಲ್ಲ ಎಂದಿದ್ದಾರೆ.
ಸಂತ್ರಸ್ತರ ಕುಟುಂಬದ ಸದಸ್ಯರು ಈ ಹಿಂದೆಯೂ ಪ್ರತಿಭಟನೆ ನಡೆಸಿದ್ದರು. ದಾಳಿಯಲ್ಲಿ ಭಾಗಿಯಾಗಿದ್ದ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಇನ್ನಿಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ.