Advertisement

ಫುಟ್‌ ಪಾತ್‌ಮೇಲೆ ನಡೆದೀರಾ ಜೋಕೆ!

05:01 PM Sep 29, 2018 | Team Udayavani |

ಕೊಪ್ಪಳ: ನಗರ ಪ್ರದೇಶಗಳ ಅಭಿವೃದ್ಧಿಗಾಗಿ ಸರ್ಕಾರ ಕೋಟಿ ಕೋಟಿ ಅನುದಾನ ಕೊಡುತ್ತಿದೆ. ಆದರೆ ಅಭಿವೃದ್ಧಿ ಮಾತ್ರ ಆಮೆ ವೇಗಗಿಂತಲೂ ನಿಧಾನಗತಿಯಲ್ಲಿ ನಡೆಯುವುದು ಸುಳ್ಳಲ್ಲ. ಇದಕ್ಕೆ ಕೊಪ್ಪಳವೇ ಸಾಕ್ಷಿ ಎಂದರೂ ತಪ್ಪಾಗಲಾರದು. ಇನ್ನೂ ಫುಟ್‌ಪಾತ್‌ ಪರಿಸ್ಥಿತಿಯನ್ನೊಮ್ಮೆ ನೀವು ನೋಡಿದರೆ ಹೇಳತೀರದಾಗಿದೆ. ಎಲ್ಲೆಂದರಲ್ಲಿ ಚರಂಡಿ ಮೇಲ್ಭಾಗದಲ್ಲಿ ಕುಸಿದು ಬಿದ್ದಿವೆ. ಇದನ್ನು ಈವರೆಗೂ ಯಾರೂ ಕಣ್ತೆರೆದು ನೋಡುತ್ತಿಲ್ಲ.

Advertisement

ಹೌದು. ನಗರದ ಅಭಿವೃದ್ಧಿ ಮಾಡುತ್ತೇವೆ ಎಂದು ಜನಪ್ರತಿನಿಧಿಗಳು, ಅಧಿಕಾರಿ ವರ್ಗ ವರ್ಷಕ್ಕೆ ನೂರೆಂಟು ಕ್ರಿಯಾಯೋಜನೆ ಮಾಡಿ ಅನುಮೋದನೆ ಪಡೆಯುತ್ತಾರೆ. ಆದರೆ ಅನುದಾನ ಕಡಿಮೆ ಇದೆ. ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದು ಅರೆಬರೆ ಕಾಮಗಾರಿ ನಿರ್ವಹಿಸಿ ಕೈ ಬಿಟ್ಟಿರುವ ಅದೆಷ್ಟು ಉದಾಹರಣೆ ಸಾಕಷ್ಟವಿವೆ.

ಇದಕ್ಕೆ ನಗರದ ಚರಂಡಿ, ಫುಟ್‌ಪಾತ್‌ಗಳು ಹೊರತಾಗಿಲ್ಲ. ನಗರೋತ್ಥಾನದಡಿ ಅಭಿವೃದ್ಧಿಗೆ ಹಣ ಬಂದಿದೆ. ಆದರೆ ಬಂದ ಅನುದಾನ ಗುತ್ತಿಗೆದಾರನ ಪಾಲಾಗಿದೆಯೇ ಹೊರತು ಕಾಮಗಾರಿ ನಡೆಯಲಿಲ್ಲ. ಕಳೆದ ನಾಲ್ಕು ವರ್ಷದ ಹಿಂದಷ್ಟೆ ನಗರದ ಹೆದ್ದಾರಿ ರಸ್ತೆ, ಎರಡೂ ಬದಿಯಲ್ಲಿ ಚರಂಡಿ ನಿರ್ಮಾಣಕ್ಕೆ ಕೋಟಿ ಕೋಟಿ ಅನುದಾನ ಹರಿದು ಬಂದಿತ್ತು. ಆದರೆ ಆಂಧ್ರ ಮೂಲದ ಗುತ್ತಿಗೆದಾರ ಅರೆಬರೆ ಕಾಮಗಾರಿ ನಿರ್ವಹಿಸಿ ಪಲಾಯನ ಮಾಡಿದ್ದಾರೆ. ಇತ್ತ ನಿರ್ಮಿತಿ ಕೇಂದ್ರವೂ ಅರೆ ಬರೆ ಕಾಮಗಾರಿ ನಿರ್ವಹಿಸಿ ಪೇಮೆಂಟ್‌ ಪಡೆದಿದೆ. ಆದರೆ ಕೇವಲ 4 ವರ್ಷದಲ್ಲಿ ಚರಂಡಿ ಮೇಲ್ಭಾಗದ ಸಿಮೆಂಟ್‌, ಬಂಡೆಗಳು ಕುಸಿದು ಬಿದ್ದಿವೆ.

ಜನರಿಗೆ ಸಂಚರಿಸಲು ಶುದ್ಧ ಫುಟ್‌ಪಾತ್‌ ಇಲ್ಲ. ಜಿಲ್ಲಾಧಿಕಾರಿ ಕಚೇರಿಯಿಂದ ಮಳೆ ಮಲ್ಲೇಶ್ವರ ಗುಡ್ಡದವರೆಗೂ ಎರಡೂ ಬದಿಯಲ್ಲಿ ಕಿತ್ತು ಚರಂಡಿ ನಿರ್ಮಿಸಲಾಯಿತು. ಆದರೆ ಮೂರೇ ವರ್ಷ ಪುನರ್‌ ನಿರ್ಮಾಣ ಮಾಡುವಷ್ಟು ಹದಗೆಟ್ಟಿವೆ. ಕನಿಷ್ಟ ಹತ್ತು ವರ್ಷದಷ್ಟು ಆಯುಷ್ಯ ಚರಂಡಿಗಳಿಗೆ ಇಲ್ಲದಂತಾಗಿದೆ. ಸರ್ಕಾರದ ಹಣ ಚರಂಡಿಯಲ್ಲಿಯೇ ಹರಿದು ಹೋಗುತ್ತಿದೆ ಎಂಬ ಅನುಮಾನ ಭಾಸವಾಗುತ್ತಿದೆ.

ಹೆದ್ದಾರಿ ರಸ್ತೆ ನಿತ್ಯವೂ ಜನಜಂಗುಳಿಯಿಂದ ಕೂಡಿರುತ್ತದೆ. ಸಾಮಾನ್ಯವಾಗಿ ಫುಟ್‌ಪಾತ್‌ ಮೇಲೆ ಸಂಚಾರ ಹೆಚ್ಚಿರುತ್ತದೆ ಎಂದು ಎಲ್ಲರಿಗೂ ಗೊತ್ತಿದೆ. ಆದರೆ ಕಿತ್ತು ಹೋದ ಮೇಲ್ಭಾಗವನ್ನು ನಗರಸಭೆ ಕಣ್ತೆರೆದು ನೋಡುತ್ತಲೇ ಇಲ್ಲ. ನಮಗ್ಯಾಕೆ ಬೇಕು ಎನ್ನುವಷ್ಟರ ಮಟ್ಟಿಗೆ ನಗರಸಭೆ ಮೌನ ವಹಿಸಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ನಿತ್ಯ ಇದೇ ಮಾರ್ಗವಾಗಿ ಸಾವಿರಾರು ವಿದ್ಯಾರ್ಥಿಗಳು ಸಂಚಾರ ಮಾಡುತ್ತಾರೆ. ವೃದ್ಧರು, ಮಹಿಳೆಯರು, ಮಕ್ಕಳು ಇಲ್ಲೇ ಸಂಚಾರ ಮಾಡುತ್ತಾರೆ. ಅಪಾಯ ಎದುರಾಗು ಸಂಭವವಿದೆ. ಮಳೆ ಬಂದ ವೇಳೆ ಜನರು ಬಿದ್ದು ಗಾಯಗೊಂಡ ಘಟನೆ ಇನ್ನೂ ಮರೆತಿಲ್ಲ. ಮಳೆ ಬಂದಾಗ ಗಟಾರದಲ್ಲಿ ನಾಯಿ, ಹಂದಿಮರಿ, ಮೇಕೆ ಮರಿ ಕೊಚ್ಚಿಕೊಂಡು ಹೋಗಿದ್ದನ್ನೂ ಜನರು ಮರೆತಿಲ್ಲ.

Advertisement

ಒತ್ತುವರಿ ಕೇಳರೋರಿಲ್ಲ: ಈ ಹಿಂದೆ ನಗರಸಭೆ ಪುಟಪಾತ್‌ ಒತ್ತುವರಿ ತೆರವಿಗೆ ಮನಸ್ಸು ಮಾಡಿತ್ತು. ಆದರೆ ಯಾರಧ್ದೋ ಒತ್ತಡಕ್ಕೆ ಮಣಿದು ಬೆರಳೆಣಿಕೆಯಷ್ಟು ತೆರವು ಮಾಡಿದೆ. ಹೆದ್ದಾರಿ ಸೇರಿದಂತೆ ಜವಾಹರ ರಸ್ತೆ ಹಾಗೂ ವಿವಿಧ ಬಡಾವಣೆಗಳಲ್ಲಿ ಬರೊಬ್ಬರಿ ಒತ್ತುವರಿ ಮಾಡಲಾಗಿದೆ. ಈ ಬಗ್ಗೆ ಯಾರೂ ಕೇಳುವವರೇ ಇಲ್ಲದಂತಾಗಿದೆ. ಅಧಿಕಾರಿಗಳು ನಗರಸಭೆಯಲ್ಲಿ ಇದ್ದಾರೋ? ಇಲ್ಲವೋ ? ಎನ್ನುವ ಅನುಮಾನ ಜನರಲ್ಲಿ ಕಾಡುತ್ತಿದೆ. ಅಧಿಕಾರಿಗಳ ಮೌನ ಜನರಿಗೆ ಅನುಮಾನ ಬರುವಂತೆ ಮಾಡುತ್ತಿದೆ. ಅಭಿವೃದ್ಧಿಯ ಬಗ್ಗೆ ಇವರಿಗೆ ಇರುವ ದೂರದೃಷ್ಟಿಯ ಯೋಜನೆಗಳೆ ಸಾರಿ ಸಾರಿ ಹೇಳುತ್ತಿವೆ.

ಕಳಪೆ ಕಾಮಗಾರಿ: ನಗರದ ಎನ್‌ಎಚ್‌- 63 ರಸ್ತೆಯನ್ನು ಏಂಟು ವರ್ಷದಲ್ಲಿ ಎರಡು ಬಾರಿ ನಿರ್ಮಿಸಲಾಗುತ್ತಿದೆ. ನೂರು ಕೋಟಿಗೂ ಅಧಿಕ ಹಣ ಇದೇ ರಸ್ತೆಗೆ ವ್ಯಯಿಸಲಾಗಿದೆ. ಆದರೂ ರಸ್ತೆ, ಫುಟ್‌ಪಾತ್‌ ಜನರ ಸಂಚಾರಕ್ಕೆ ಸಿಗುತ್ತಿಲ್ಲ. ಪುಟ್‌ಪಾತ್‌ನ ಸಿಮೆಂಟ್‌, ಬಂಡೆಗಳು ಉದುರುತ್ತಿವೆ. ಎಲ್ಲೆಡೆ ಕುಸಿದು ಬಿದ್ದಿವೆ. ಇದು ಅಭಿವೃದ್ಧಿಗೆ ಹಿಡಿದ ಕೈ ಗನ್ನಡಿಯಾಗಿದೆ. ಗುತ್ತಿಗೆದಾರರ, ಜನ ನಾಯಕರ ಅಭಿವೃದ್ಧಿಗೆ ಹಿಡಿದ ಕೈಗನ್ನಡಿಯಾಗಿದೆ ಎನ್ನುತ್ತಿದ್ದಾರೆ ಜನ. 

ಈ ಹಿಂದೆ ಸತ್ಯಮೂರ್ತಿ ಅವರು ಜಿಲ್ಲಾಧಿಕಾರಿ ಇದ್ದಾಗ, ನಗರದ ಫುಟ್‌ಪಾತ್‌ ಮೇಲೆ ಸುತ್ತಾಟ ನಡೆಸಿ ಪುಟಪಾತ್‌ನ ಒತ್ತುವರಿ ಸಮಸ್ಯೆ ಬಗ್ಗೆ ಗಮನಕ್ಕೆ ತಂದಿದ್ದೆವು. ಆಗ ಬಿಟ್ಟರೆ ಇಲ್ಲಿವರೆಗೂ ಯಾರು ನಗರ ಸಂಚಾರ ಮಾಡಿಲ್ಲ. ಜನರ ಸಂಚಾರಕ್ಕಾಗಿಯೇ ಫುಟ್‌ಪಾತ್‌ ಇವೆ. ಆದರೆ ಎಲ್ಲೆಂದರಲ್ಲಿ ಸಿಮೆಂಟ್‌ ಮೇಲ್ಛಾವಣಿ ಕುಸಿದು ಬಿದ್ದಿದ್ದರಿಂದ ಜನರಿಗೆ ತೊಂದರೆಯಾಗುತ್ತಿದೆ. ಇನ್ನಾದರೂ ಶಾಸಕರು, ಸಚಿವರು, ಸಂಸದರು ನಗರ ಸಂಚಾರ ನಡೆಸಿ ಸಮಸ್ಯೆ ಆಲಿಸಲಿ.
 ಶಿವಾನಂದ ಹೊದ್ಲೂರು,
 ನಗರ ನಿವಾಸಿ.

ನಗರಾದ್ಯಂತ ಫುಟ್‌ಪಾತ್‌ ಒತ್ತುವರಿಯಾಗಿದೆ. ಯಾರೂ ಅದರ ತೆರವಿಗೆ ಮುಂದಾಗುತ್ತಿಲ್ಲ. ನಗರದ ಹೆದ್ದಾರಿಯ ಎರಡೂ ಬದಿಯಲ್ಲಿ ಫುಟ್‌ಪಾತ್‌ ವ್ಯವಸ್ಥೆಯೇ ಉತ್ತಮವಾಗಿಲ್ಲ. ಎಲ್ಲೆಡೆ ಗುಂಡಿ ಬಾಯ್ದೆರೆದು ನಿಂತಿವೆ. ನಿತ್ಯ ಶಾಲಾ-ಕಾಲೇಜು ವಿದ್ಯಾರ್ಥಿಗಳು ಫುಟ್‌ ಪಾತ್‌ ಮೇಲೆ ಸಂಚಾರ ಮಾಡುತ್ತಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ನಗರಸಭೆ, ಜಿಲ್ಲಾಡಳಿತ ಇನ್ನಾದರೂ ಗಮನಿಸಬೇಕಿದೆ.
 ಮಹ್ಮದ್‌ ರಫಿ, ನಗರ ನಿವಾಸಿ.

„ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next