ಉಪ್ಪಿನಂಗಡಿ: ಕರಾಯ ಸ. ಪ್ರೌ. ಶಾಲಾ ಆವರಣದಲ್ಲಿ, ಶಾಲಾ ಕಟ್ಟಡಕ್ಕೆ ತಾಗಿಕೊಂಡು ಭಾರೀ ಗಾತ್ರದ ದೂಪದ ಮರವೊಂದು ಇದ್ದು, ಅದು ಭಾರೀ ಗಾಳಿ ಮಳೆಗೆ ಬೀಳುವ ಅಪಾಯ ಇದೆ. ಅಪಾಯ ಎರಗುವ ಮುನ್ನ ಮರವನ್ನು ತೆರವು ಮಾಡುವಂತೆ ಶಾಲಾ ಮುಖ್ಯ ಶಿಕ್ಷಕರು ಉಪ್ಪಿನಂಗಡಿ ಅರಣ್ಯ ಇಲಾಖೆಗೆ ಮಾಡಿದ ಮನವಿಯಲ್ಲಿ ಆಗ್ರಹಿಸಿದ್ದಾರೆ. ಮರ ಶಾಲೆಯ ಹಿಂಭಾಗದಲ್ಲಿ ಗೋಡೆಗೆ ತಾಗಿಕೊಂಡಿದ್ದು, ಅದು ವಾಲಿದೆ. ಮರದ ರೆಂಬೆ-ಕೊಂಬೆಗಳು ಶಾಲಾ ಮಾಡಿನ ಮೇಲೆಯೇ ವಿಸ್ತರಿಸಿಕೊಂಡಿವೆ. ಭಾರೀ ಗಾಳಿಗೆ ಮರ ಧರೆಗೆ ಉರುಳಿದರೆ ನೇರವಾಗಿ ಶಾಲಾ ಕಟ್ಟಡದ ಮೇಲೆ ಬೀಳಲಿದೆ. ಶಾಲೆಯಲ್ಲಿ ಸುಮಾರು 150 ವಿದ್ಯಾರ್ಥಿ ಗಳು ಅಭ್ಯಾಸ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಶಾಲಾ ಅವಧಿಯಲ್ಲಿ ಸುರಿಯುವ ಭಾರೀ ಗಾಳೆಮಳೆಗೆ ಭೀತಿಯಿಂದ ಕುಳಿತು ಪಾಠ ಕೇಳಬೇಕಾದ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಮರವನ್ನು ತತ್ ಕ್ಷಣ ತೆರವು ಮಾಡಬೇಕು ಎಂದು ಶಾಲಾ ಮುಖ್ಯ ಶಿಕ್ಷಕರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.
ಕಡಿಯಲು ಕ್ರಮ
ಶಾಲಾ ಮುಖ್ಯ ಶಿಕ್ಷಕರು ತಮ್ಮಲ್ಲಿ ಮನವಿ ಮಾಡಿಕೊಂಡಿದ್ದಾರೆ. ಮನವಿ ಪರಿಶೀಲನೆ ಹಂತದಲ್ಲಿದ್ದು, ACF ಅವರಿಂದ ಅನುಮತಿ ಪಡೆದು ಶೀಘ್ರ ತೆರವು ಮಾಡಲಾಗುವುದು.
– ಸಂಧ್ಯಾ, ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ
3ನೇ ಬಾರಿ ಅರ್ಜಿ ನೀಡಿದ್ದೇವೆ
ಮರ ತೆರವು ಮಾಡುವ ಬಗ್ಗೆ ಈ ಹಿಂದೆ 2 ಬಾರಿ ಅರ್ಜಿ ಸಲ್ಲಿಸಿದ್ದೆವು. ಆದರೆ ಯಾವುದೇ ರೀತಿಯ ಸ್ಪಂದನೆ ದೊರೆತಿಲ್ಲ. ಮಳೆಗಾಲ ಆರಂಭ ಆಗುತ್ತಿದ್ದಂತೆ ಭೀತಿ ಎದುರಾಗುತ್ತಿದೆ. ಸಂಭವನೀಯ ದುರಂತವನ್ನು ತಪ್ಪಿಸುವ ನಿಟ್ಟಿನಲ್ಲಿ ಅದನ್ನು ತೆರವು ಮಾಡುವಂತೆ ಇದೀಗ ಮತ್ತೆ 3ನೇ ಬಾರಿಗೆ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದೇವೆ.
– ಶಿವಬಾಳು, ಶಾಲಾ ಮುಖ್ಯ ಶಿಕ್ಷಕ