ಆಲಂಕಾರು: ಇಲ್ಲಿಯ ಶ್ರೀ ದುರ್ಗಾಂಬ ಪದವಿಪೂರ್ವ ಕಾಲೇಜಿನ ಬಳಿ ಬೃಹತ್ ಗಾತ್ರದ ಮರವೊಂದು ವಿದ್ಯುತ್ ತಂತಿಯ ಮೇಲೆ ತುಂಡಾಗಿ ಬೀಳುವ ಹಂತದಲ್ಲಿದೆ. ಆಲಂಕಾರು-ಶರವೂರು ರಸ್ತೆ ಬದಿ ಯಲ್ಲಿಯೇ ಇರುವ ಈ ಮರದ ಒಂದು ಬದಿಯ ಗೆಲ್ಲುಗಳನ್ನು ಈಗಾಗಲೇ ತೆರವುಗೊಳಿಸಿದ್ದು, ವಿದ್ಯುತ್ ತಂತಿಯ ಮೇಲಿದ್ದ ಗೆಲ್ಲುಗಳನ್ನು ಮಾತ್ರ ಹಾಗೆಯೇ ಬಿಡಲಾಗಿದೆ. ಇದರ ಪರಿಣಾಮ ಯಾವುದೇ ಕ್ಷಣದಲ್ಲಿ ಮರ ತಂತಿಯ ಮೇಲೆ ಬೀಳುವ ಸಾಧ್ಯತೆಯಿದೆ. ದುರ್ಗಾಂಬ ಪ.ಪೂ. ಕಾಲೇಜಿನ ಪ್ರವೇಶ ದ್ವಾರವು ಈ ಮರದ ಸಮೀಪವೇ ಇರುವುದರಿಂದ ವಿದ್ಯಾರ್ಥಿಗಳು ಆತಂಕದಲ್ಲಿಯೇ ಓಡಾಡುವಂತಾಗಿದೆ.
ಅಪಾಯ ಕಟ್ಟಿಟ್ಟ ಬುತ್ತಿ
ಒಂದು ವೇಳೆ ಮರವು ತುಂಡಾಗಿ ಬಿದ್ದಲ್ಲಿ 7 ವಿದ್ಯುತ್ ಕಂಬಗಳ ಸಹಿತ ವಿದ್ಯುತ್ ಪರಿವರ್ತಕವೊಂದು ಧರೆಗುರುಳಬಹುದು. ಇನ್ನಾದರೂ ಮೆಸ್ಕಾಂ ಎಚ್ಚತ್ತುಕೊಳ್ಳಬೇಕಿದೆ.
ಶರವೂರು ದೇಗುಲದ ಬಳಿ ಇದೇ ಸ್ಥಿತಿ
ಶರವೂರು ದೇಗುಲದ ಭದ್ರಕಾಳಿ ಅಮ್ಮನವರ ಗುಡಿಯ ಬಳಿ ಬೃಹತ್ ಅಕೇಶಿಯಾ ಮರದ ರೆಂಬೆಗಳು ವಿದ್ಯುತ್ ತಂತಿಯ ಮೇಲಿದೆ. ಭಾರೀ ಗಾಳಿ ಮಳೆ ಬಂದರೆ ಅಪಾಯ ಸಂಭವಿಸಬಹುದು. ಇಲ್ಲಿ ಮರದ ಗೆಲ್ಲು ತಂತಿಯ ಮೇಲೆ ಬಿದ್ದಲ್ಲಿ ಒಂದು ವಿದ್ಯುತ್ ಪರಿವರ್ತಕ ಮತ್ತು ಹಲವು ಕಂಬಗಳು ಧರೆಗುರುಳುವುದು ಖಂಡಿತ.