ಒಂದು ಕಾಡಿಗೆ ಸಿಂಹ ಸರ್ವಾಧಿಕಾರಿಯಾಗಿತ್ತು. ಸಿಂಹದ ಅರಮನೆಯಾದ ಗುಹೆಯು ಅರೆಬರೆ ತಿಂದ ಪ್ರಾಣಿಗಳ ಮಾಂಸ ಹಾಗೂ ಮೂಳೆಗಳಿಂದ ತುಂಬಿಹೋಗಿತ್ತು. ಸಿಂಹ ತನ್ನ ಜಾಗವನ್ನು ಸ್ವಚ್ಚವಾಗಿ ಇಟ್ಟುಕೊಂಡಿರಲೇ ಇಲ್ಲ. ಅಲ್ಲಿನ ವಾಸನೆಗೆ ಅನೇಕ ಪ್ರಾಣಿಗಳು ಗುಹೆಗೆ ಹೋಗಲು ಹಿಂಜರಿಯುತ್ತಿದ್ದವು. ಒಮ್ಮೆ ಸಿಂಹ ತನ್ನ ಮೂವರು ಮಂತ್ರಿಗಳಾದ ನರಿ, ಕೋತಿ ಹಾಗೂ ಚಿರತೆಯನ್ನು ಅರಮನೆಗೆ ಕರೆಸಿಕೊಂಡಿತು.
ಸಿಂಹದ ಗುಹೆಗೆ ಬಂದ ನರಿ,ಕಕೋತಿ ಹಾಗೂ ಚಿರತೆಗಳು ಮೂಗು ಮುಚ್ಚಿಕೊಂಡಿರುವುದನ್ನು ಕಂಡ ಸಿಂಹಕ್ಕೆ ಸಿಟ್ಟುಬಂತು. “ನನ್ನ ಅರಮನೆ ದುರ್ಗಂಧ ಬೀರುತ್ತಿದ್ದೆಯೇ?’ ಎಂದು ಚಿರತೆಯನ್ನು ಕೇಳಿತು. ಚಿರತೆಯು ನಿಜ ಹೇಳಿದರೆ ಸಿಂಹಕ್ಕೆ ಕೋಪ ಬರುವುದೆಂದು “ಇಲ್ಲಾ ಮಹಾಪ್ರಭುಗಳೆ’ ಎಂದು ಸುಳ್ಳು ಹೇಳಿತು. ಕೂಡಲೇ ಸಿಂಹವು ಚಿರತೆಯ ಮೇಲೆರಗಿತು. ಗಾಯಗೊಂಡ ಚಿರತೆ ಅಲ್ಲಿಂದ ಕಾಲ್ಕಿತ್ತಿತು. ಇದನ್ನು ನೋಡಿ ನರಿ ಹಾಗೂ ಕೋತಿ ನಿಂತಲ್ಲೇ ಬೆವರಿದವು.
ಕೋತಿಯ ಕಡೆ ತಿರುಗಿದ ಸಿಂಹವು “ನನ್ನ ಅರಮನೆಯು ವಾಸನೆ ಬರುತ್ತಿದೆಯೇ?’ ಎಂದು ಕೇಳಿತು. ಸುಳ್ಳು ಹೇಳಿದ ಚಿರತೆಗೆ ಒದಗಿದ ದುರ್ಗತಿ ಕಂಡು ನಿಜ ಹೇಳುವುದೇ ವಾಸಿಯೆಂದು ಕೋತಿಯು “ಹೌದು ಸ್ವಾಮಿ, ದುರ್ಗಂಧ ಬರುತ್ತಿದೆ’ ಎಂದಿತು. ಸಿಂಹವು ಕೋತಿಯನ್ನು ಹಿಡಿದು ತನ್ನ ಕಾಲಿನಿಂದ ತುಳಿದು ಹೊಸಕಿಹಾಕಿತು. ಕೋತಿ ಕಿರುಚುತ್ತಾ ಅಲ್ಲಿಂದ ಓಡಿತು.
ನಂತರ ನರಿಯ ಸರದಿ. ಸಿಂಹ ಮತ್ತದೇ ಪ್ರಶ್ನೆಯನ್ನು ನರಿಗೆ ಕೇಳಿತು. ಏನು ಹೇಳಿದರೂ ಸಿಂಹಕ್ಕೆ ಕೋಪ ಬರುವುದನ್ನು ಕಂಡು ನರಿಗೆ ಪೀಕಲಾಟಕ್ಕಿಟ್ಟುಕೊಂಡಿತು. ಚಾಣಾಕ್ಷ ನರಿ “ಮಹಾಪ್ರಭು, ನನಗೆ ತುಂಬಾ ನೆಗಡಿಯಾಗಿದೆ ಆದ್ದರಿಂದ ವಾಸನೆ ತಿಳಿಯುತ್ತಿಲ್ಲ’ ಎಂದಿತು. ನರಿಯ ಬುದ್ದಿವಂತಿಕೆಯನ್ನು ಮೆಚ್ಚಿದ ಸಿಂಹ ಅದಕ್ಕೆ ಪಾರಿತೋಷಕ ನೀಡಿ ಸನ್ಮಾನಿಸಿತು.
ಹರೀಶ್