Advertisement

ಅಪಾಯಕಾರಿ ರಾಜ್ಯ ಹೆದ್ದಾರಿ: ರಸ್ತೆಯಿಂದ ಪಾದಚಾರಿ ನೇರ ಚರಂಡಿಗೆ…!

03:18 PM Apr 07, 2017 | Team Udayavani |

ಉಡುಪಿ: ಉಡುಪಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿರುವ ಬೀಡಿನಗುಡ್ಡೆ- ಕುಕ್ಕಿಕಟ್ಟೆ-ಡಯಾನಾ ರಸ್ತೆಯನ್ನು ಲೋಕೋಪಯೋಗಿ ಇಲಾಖೆಯವರು ವಿಸ್ತರಣೆ ಮಾಡಿದ್ದಾರೆ. ಈ ರಸ್ತೆ ಅಭಿವೃದ್ಧಿಯಾದ ಬಳಿಕ ವಾಹನಗಳಿಗೆ, ಜನರಿಗೆ ಮತ್ತಷ್ಟು ಅಪಾಯಕಾರಿಯಾಗಿ ಪರಿ ವರ್ತನೆಗೊಂಡಿದೆ. ರಸ್ತೆಯೇನೋ ವಿಸ್ತರಣೆಯಾಗಿದೆ. ಆದರೆ ಮುಖ್ಯವಾಗಿ ಪಾದಚಾರಿಗಳಿಗೆ ನಡೆದಾಡಲು ಇಲ್ಲಿ ಜಾಗವೇ ಇಲ್ಲ.

Advertisement

ಹೆದ್ದಾರಿಯ ಅಂಚಿನಲ್ಲಿ ಡಾಮರಿನ ಮೇಲೆ ಬಿಳಿ ಬಣ್ಣದ ಮಾರ್ಕಿಂಗ್‌ ಮಾಡಲಾಗಿದೆ. ಮಾರ್ಕಿಂಗ್‌ನ ಅಂಚಿನಲ್ಲಿ ಮಳೆ ನೀರು ಹರಿಯುವ ತೋಡು ಇದೆ. ಅದು ಕೂಡ ಕೆಲ ಕಡೆಗಳಲ್ಲಿ ಮಾತ್ರ ಕಂಡುಬರುತ್ತದೆ. ಮತ್ತೆ ಕೆಲವು ಕಡೆ ತೋಡುಗಳೇ ಮಾಯವಾಗಿವೆ. ಇಲ್ಲಿ ಮುಂದಕ್ಕೆ ಮಳೆ ನೀರು ರಸ್ತೆಯಲ್ಲಿಯೇ ಹರಿಯಬೇಕಾದ ಅನಿವಾರ್ಯತೆಯೂ ಸೃಷ್ಟಿಯಾಗಬಹುದು. ಹಲವೆಡೆ ರಸ್ತೆ ಅಂಚು ಖಾಸಗಿಯವರ ಮನೆಗಳ ಆವರಣ ಗೋಡೆಗಳ ಸಮೀಪದವರೆಗೆ ಇದೆ. 

ಈ ರಸ್ತೆ ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ  ತೋಡು, ಪಾದಚಾರಿಗಳಿಗೆ ಮಾರ್ಗ ಮಾಡುವುದು ಸಾರ್ವಜನಿಕ ಹಿತಾಸಕ್ತಿಯ ಕೆಲಸವಾಗಬೇಕಿತ್ತು. ಆದರೆ ಇಲ್ಲಿ ಮಾತ್ರ ತುಂಡು ತುಂಡಾಗಿ ಅಲ್ಲಲ್ಲಿ ಸಣ್ಣ ತೋಡುಗಳು, ಕೆಲ ಕಡೆ ಅದೂ ಇಲ್ಲ. ಪಾದಚಾರಿಗಳಿಗೆ ನಡೆದಾಡಲಂತೂ ಜಾಗವೇ ಇಲ್ಲಿಲ್ಲ. ಹೆದ್ದಾರಿಯಲ್ಲಿಯೇ ಹಿಂದೆ, ಮುಂದೆ ವಾಹನ ಯಾವಾಗ ತನ್ನ ಮೈಮೇಲೆಯೇ ಬರುವುದೋ ಎನ್ನುವ ಭಯದಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಜನರು ನಡೆದಾಡುವ ಪರಿಸ್ಥಿತಿ ಇಲ್ಲಿದೆ.

“ವಾಹನಗಳ ವೇಗಕ್ಕೆ ಬೇಕಿದೆ ಕಡಿವಾಣ’
ಹಿಂದೆ 5 ಮೀ. ಅಗಲದಲ್ಲಿ ರಸ್ತೆ ಇರುವಾಗ ಪಾದಚಾರಿಗಳಿಗೆ ಸಂಚರಿಸಲು ಜಾಗ ಇದ್ದಿತ್ತು. ಇದೀಗ ರಸ್ತೆಯನ್ನು 7 ಮೀ. ವಿಸ್ತರಣೆ ಮಾಡಿದರೂ ನಡೆದಾಡಲು ಜಾಗವಿಲ್ಲದಂತಾಗಿದೆ. ಕೆಲ ಕಡೆ ಸರಕಾರಿ ಜಾಗದ ಲಭ್ಯತೆಯ ಕೊರತೆಯೋ? ಖಾಸಗಿ ಜಾಗ ವಶಪಡಿಸಲು ಆಗದೆಯೋ? ಏನೋ 6 ಮೀ.ಗೆ ಮಾತ್ರ ವಿಸ್ತರಿಸಿ ಕಾಮಗಾರಿ ನಡೆಸಲಾಗಿದೆ. ಕೆಲ ಭಾಗಗಳ ಚರಂಡಿ ಕಾಮಗಾರಿಗಳು ಪೂರ್ತಿಯಾಗಿಲ್ಲ. ಸ್ಲಾಬ್‌ಗಳನ್ನು ಹಾಕುವ ಕಾರ್ಯ ಪ್ರಗತಿಯಲ್ಲಿದೆ. ವಿಸ್ತರಣೆ ಸಂದರ್ಭ ಖಾಲಿ ಜಾಗಗಳನ್ನು ಸಂಪೂರ್ಣವಾಗಿ ಬಳಸಿಕೊಂಡು ಡಾಮರು ಹಾಕಿ ರಸ್ತೆಯ ಅಂಚಿಗೆ ಬಣ್ಣವನ್ನೂ ಬಳಿಯಲಾಗಿದೆ. ಇದರಿಂದ ವಾಹನಗಳು ವೇಗ ಹೆಚ್ಚಿಸಿಕೊಳ್ಳಲು ಅವಕಾಶವಾಗಿದೆಯೇ ಹೊರತು ನಡೆದುಕೊಂಡು ಹೋಗುವವರಿಗೆ ಏನೂ ಪ್ರಯೋಜನವಾಗಿಲ್ಲ. ಪಾದಚಾರಿಗಳಿಗೆ ಈ ಹಿಂದಿಗಿಂತ ಈಗಲೇ ಅಪಾಯ ಬಹು ಹೆಚ್ಚಾಗಿದೆ.

“ಶಾಲಾ ಮಕ್ಕಳಿಗೆ ಕಾಡುತ್ತಿದೆ ಜೀವಭಯ’
ಬೀಡಿನಗುಡ್ಡೆ-ಡಯಾನಾ ರಸ್ತೆಯಾಗಿ ಪ್ರತಿದಿನ ಹತ್ತಾರು ಶಾಲಾ ವಾಹನಗಳು ಸಂಚರಿಸುತ್ತವೆ. ಹಾಗಾಗಿ ಇಲ್ಲಿ ಸ್ವಲ್ಪ ಎಡವಿದರೂ ಭಾರೀ ಅನಾಹುತ ತಪ್ಪಿದ್ದಲ್ಲ. ಯಾಕೆಂದರೆ ಜನರಿಗೆ ನಡೆದಾಡಲೇ ಜಾಗವಿಲ್ಲವೆಂದಾದರೆ ಇನ್ನು ಅನ್ಯ ವಾಹನಗಳಿಗೆ ಸೈಡ್‌ ಕೊಡಲು ಇಲ್ಲಿ ಜಾಗವೇ ಇಲ್ಲ. ಹೀಗಿರುವಾಗ ರಸ್ತೆ ಪಕ್ಕಕ್ಕೆ ವಾಹನಗಳು ಹೋದರೆ ಚರಂಡಿಗೋ, ಮನೆ ಕಾಂಪೌಂಡ್‌ಗೊà ಹೊಡೆದು 

Advertisement

ಭಾರಿ ಅಪಾಯ ತಂದೊಡ್ಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಮಾತ್ರವಲ್ಲದೆ ಉಡುಪಿಯ ವಿದ್ಯೋದಯ, ವಳಕಾಡು, ಕ್ರಿಶ್ಚಿಯನ್‌ ಹೈಸ್ಕೂಲ್‌, ಮುಕುಂದಕೃಪಾ ಮೊದಲಾದ ಶಾಲೆಗಳಿಗೆ ತೆರಳುವ ಸ್ಥಳೀಯ ಮಕ್ಕಳು ಇದೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಾರೆ. ರಸ್ತೆಯಲ್ಲಿಯೇ ನಡೆಯಬೇಕಾದ ಅನಿವಾರ್ಯ ಒಂದು ಕಡೆಯಾದರೆ, ಎಲ್ಲಿ ವಾಹನಗಳು ಮೈಮೇಲೆ ಬರುತ್ತದೋ ಎನ್ನುವ ಭಯ ಇನ್ನೊಂದೆಡೆ. ಇದೇ ಪರಿಸ್ಥಿತಿಯಲ್ಲಿ ಶಾಲಾ ಮಕ್ಕಳು ಹೋಗುತ್ತಿದ್ದಾರೆ. ಯಾವಾಗ ಯಾವ ವಾಹನ ಬಂದು ಹೊಡೆಯುತ್ತದೋ ಹೇಳ್ಳೋಕೆ ಆಗಲ್ಲ. ಕೆಲ ದಿನಗಳ ಹಿಂದೆಯಷ್ಟೇ ಈ ಭಾಗದಲ್ಲಿ ರಸ್ತೆ ದಾಟುತ್ತಿದ್ದ ಪ್ರೌಢಶಾಲಾ ಬಾಲಕಿಯೋರ್ವಳಿಗೆ ಕಾರು ಢಿಕ್ಕಿಯಾಗಿ ಮೃತಪಟ್ಟಿದ್ದನ್ನು ಇಲ್ಲಿ ಉದಾಹರಿಸಬಹುದಾಗಿದೆ. ಮಕ್ಕಳ ಸುರಕ್ಷತೆಯಲ್ಲಿ ಉಡುಪಿ ಮಾಡೆಲ್‌ ಎನ್ನುವ ಅಧಿಕಾರಿಗಳಿಗೆ ಇಲ್ಲಿನ ಪರಿಸ್ಥಿತಿಯ ಅರಿವು ಇನ್ನಾದರೂ ಆಗಬಹುದೇ?

ಒಂದೇ ಕಡೆ 3 ಅಪಾಯಕಾರಿ ತಿರುವು
ಬೀಡಿನಗುಡ್ಡೆಯಿಂದ ಮುಂದಕ್ಕೆ ಹೋದಂತೆ ಬೈಲೂರು ವಾರ್ಡ್‌ನಲ್ಲಿ ಹಾದುಹೋಗುವ ವಿಸ್ತರಿತ ರಸ್ತೆಯಲ್ಲಿ 100 ಮೀ. ವ್ಯಾಪ್ತಿಯಲ್ಲಿಯೇ 3 ಅತ್ಯಂತ ಅಪಾಯಕಾರಿಯಾದ ಕಡಿದಾದ ತಿರುವು ಇದೆ. ರಸ್ತೆ ವಿಸ್ತರಣೆ ಮಾಡುವಾಗ ಇದಕ್ಕೊಂದು ಪರಿಹಾರ ಕಂಡುಕೊಳ್ಳದೆ. ಆ ಭಾಗದಲ್ಲಿಯೂ ರಸ್ತೆಯ ಅಂಚಿನವರೆಗೆ ಡಾಮರೀಕರಣ ಮಾಡಲಾಗಿದ್ದು, ಅಪಘಾತಗಳಿಗೆ ಹೇಳಿ ಮಾಡಿಸಿದಂತೆ ರಸ್ತೆ ನಿರ್ಮಾಣವಾದಂತಿದೆ. ಅಪಾಯಕಾರಿ ತಿರುವಿನಲ್ಲಿ ಮುಂದುಗಡೆಯಲ್ಲಿ ಬರುವ ವಾಹನಗಳ ಅರಿವೂ ಸಿಗುವುದಿಲ್ಲ. ರಸ್ತೆ ಉತ್ತಮವಾಗಿರುವ ಕಾರಣ ವಾಹನ ಚಲಾಯಿಸುವವರು ಕೂಡ ವೇಗವಾಗಿ ಬರುತ್ತಿದ್ದಾರೆ. ಇಲ್ಲಿ ವಾಹನಗಳ ವೇಗಕ್ಕೆ ಕಡಿವಾಣ ಹಾಕಬೇಕಾದರೆ ಅಪಾಯಕಾರಿ ತಿರುವಿನ ಆಸುಪಾಸಿನಲ್ಲಾದರೂ ಪೊಲೀಸರು ಬ್ಯಾರಿಕೇಡ್‌ ಹಾಕಬೇಕಿದೆ.

ಹಂಪ್ಸ್‌-ಬೇಡಿಕೆ ಬಂದರೆ ಪರಿಶೀಲಿಸುತ್ತೇವೆ: ಪಿಡಬ್ಲ್ಯುಡಿ
ಬೀಡಿನಗುಡ್ಡೆಯಿಂದ ಕೆಮೂ¤ರು ಕ್ರಾಸ್‌ (ರಾಮನಗರ) ವರೆಗೆ ಸುಮಾರು 3 ಕಿ.ಮೀ. ಉದ್ದಕ್ಕೆ 7 ಮೀ. ಅಗಲಕ್ಕೆ ರಸ್ತೆಯನ್ನು ವಿಸ್ತರಣೆ ಮಾಡಿ ಅಭಿವೃದ್ಧಿಪಡಿಸಲಾಗಿದೆ. ಸಚಿವ ಪ್ರಮೋದ್‌ ಮಧ್ವರಾಜ್‌ ಅವರ ಪ್ರಸ್ತಾವನೆಯ ಮೇರೆಗೆ ರಸ್ತೆ ಅಭಿವೃದ್ಧಿಗೆ 2.50 ಕೋ.ರೂ. ಅನುದಾನ ಲಭಿಸಿದೆ. ಚರಂಡಿ, ರೋಡ್‌ ಮಾರ್ಜಿನ್‌ ಮಾರ್ಕಿಂಗ್‌ ಹೀಗೆ ಶೇ. 3ರಷ್ಟು ಕೆಲಸ ಮಾತ್ರ ಬಾಕಿ ಇದೆ. ವಾಹನಗಳ ವೇಗ ನಿಯಂತ್ರಿಸಲು ರಾಜ್ಯ ಹೆದ್ದಾರಿಗೆ ಹಂಪ್ಸ್‌ ನಿರ್ಮಿಸಲು ಅವಕಾಶವಿಲ್ಲ. ಹಂಪ್ಸ್‌ ಹಾಕಿದರೂ ಹಲವರು ವಿರೋಧಿಸುವವರೂ ಇದ್ದಾರೆ. ಹಾಗಾಗಿ ಅಪಾಯಕಾರಿ ಸ್ಥಳವಿದೆ, ಹಂಪ್ಸ್‌ ಅಳವಡಿಸಿ ಎನ್ನುವ ಕುರಿತು ಸಂಚಾರಿ ಪೊಲೀಸರೇನಾದರೂ ವರದಿ ಕೊಟ್ಟರೆ ಅದನ್ನು ಪರಿಶೀಲಿಸಿ ಹಂಪ್ಸ್‌ ಅಳವಡಿಸಲು ಕ್ರಮ ಕೈಗೊಳ್ಳಲು ಅವಕಾಶವಿದೆ.
ಡಿ.ವಿ. ಹೆಗ್ಡೆ, ಅಸಿಸ್ಟೆಂಟ್‌ ಎಕ್ಸಿಕ್ಯೂಟಿವ್‌ ಎಂಜಿನಿಯರ್‌, ಪಿಡಬ್ಲ್ಯುಡಿ.

“ಒಳರಸ್ತೆಗಳಿಂದ ಬರುವ ವಾಹನ’
ಈ ಹೆದ್ದಾರಿಗೆ ಅಲ್ಲಲ್ಲಿ ಜನವಸತಿಗಳಿರುವ ಒಳರಸ್ತೆಗಳು ಹೊಂದಿಕೊಂಡಿವೆ. ಒಳರಸ್ತೆಗಳಿಂದ ಬರುವ ವಾಹನಗಳಿಗೂ ಮುಂದಕ್ಕೆ ಅಪಾಯ ತಪ್ಪಿದ್ದಲ್ಲ. ರಸ್ತೆಯ ಅಂಚಲ್ಲಿ ಜಾಗವೇ ಇಲ್ಲವಾದ್ದರಿಂದ ಒಳರಸ್ತೆಯಿಂದ ಬರುವ ವಾಹನಗಳು ಒಮ್ಮೆಲೆ ಹೆದ್ದಾರಿಯನ್ನು ಸಂಧಿಸುವಾಗ ವಾಹನ ಸವಾರರ ಗಮನಕ್ಕೆ ಬಾರದೆ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿದೆ. 

ಹಂಪ್ಸ್‌, ಎಚ್ಚರಿಕೆ ಫ‌ಲಕಗಳ ಅಗತ್ಯ ಸಾರ್ವಜನಿಕ ಹಿತದೃಷ್ಟಿಯಿಂದ ಹೆದ್ದಾರಿ ಸಂಪರ್ಕಿತ ಒಳರಸ್ತೆಗಳು, ಅಪಾಯಕಾರಿ ತಿರುವುಗಳಲ್ಲಿ ಎಚ್ಚರಿಕೆ ಫ‌ಲಕಗಳನ್ನು ಅಳವಡಿಸುವುದು ಸೂಕ್ತವಾಗಿದೆ. ಮುಖ್ಯವಾಗಿ ಅಪಾಯಕಾರಿಯಾಗಿರುವ ಬೈಲೂರು ಭಾಗದ ತಿರುವುಗಳಲ್ಲಿ ಮಾರ್ಕಿಂಗ್‌ ಸಹಿತ ಹಂಪ್ಸ್‌ಗಳನ್ನು ನಿರ್ಮಿಸಬೇಕಾದ ಅಗತ್ಯ ಇದೆ ಎಂದು ಸ್ಥಳೀಯ ನಾಗರಿಕರು ಹೇಳಿದ್ದಾರೆ.

ಮಕ್ಕಳ ಸುರಕ್ಷೆಯಿಂದಾದರೂ ಹಂಪ್ಸ್‌ ಹಾಕಿ
ರಸ್ತೆ ವಿಸ್ತರಣೆ ಮಾಡುವಾಗಲೇ ಪಾದಚಾರಿಗಳಿಗೆ ನಡೆಯಲು ಜಾಗವೆಲ್ಲಿದೆ ಎನ್ನುವ ಸಾಮಾನ್ಯ ಜ್ಞಾನವನ್ನು ಇಲಾಖೆಯವರು ಗಮನದಲ್ಲಿ ಇಟ್ಟುಕೊಳ್ಳಬೇಕಿತ್ತು. ಕಿರಿದಾದ ರಸ್ತೆಯಲ್ಲಿದ್ದ ತಿರುವಿನ ಭಾಗದಲ್ಲಿಯೂ ಸೂಕ್ತ ಕ್ರಮ ವಹಿಸಿಲ್ಲ. ಪ್ರತಿದಿನ ಹಿರಿಯರು, ಮಕ್ಕಳು ಇಲ್ಲಿ ಹೆದ್ದಾರಿಯಲ್ಲಿಯೇ ನಡೆದುಕೊಂಡು ಹೋಗಬೇಕಾದ ಅನಿವಾರ್ಯ ಸ್ಥಿತಿಯನ್ನು ನಿರ್ಮಾಣ ಮಾಡಿದ್ದಾರೆ. ಮುಂದಕ್ಕೆ ಆಗಬಹುದಾದಂತಹ ಅನಾಹುತಗಳನ್ನು ತಪ್ಪಿಸಲು ಕೂಡಲೇ ಮಾರ್ಕಿಂಗ್‌ ಸಹಿತವಾದ ಹಂಪ್ಸ್‌ಗಳನ್ನು ನಿರ್ಮಿಸಲೇಬೇಕು. ಪಿಡಬ್ಲ್ಯುಡಿ, ಜಿಲ್ಲಾಡಳಿತ, ನಗರಸಭೆ ಈ ಬಗ್ಗೆ ಕ್ರಮ ವಹಿಸಬೇಕು. ಗಂಗೊಳ್ಳಿಯಲ್ಲಾದ ಶಾಲಾ ಮಕ್ಕಳ ಅಪಘಾತ  ದುರಂತ ಕಥನ ಕಣ್ಣ ಮುಂದಿದೆ. ಮುಂದೆ ಅಂತಹ ಘಟನೆ ಮರುಕಳಿಸಬಾರದು.
ಡಾ| ಬಿ. ಭಾಸ್ಕರ ರಾವ್‌, ಅಂಕಣಕಾರ

ಚೇತನ್‌ ಪಡುಬಿದ್ರಿ

Advertisement

Udayavani is now on Telegram. Click here to join our channel and stay updated with the latest news.

Next