Advertisement

ಮರವಂತೆ ಬೀಚ್‌ನಲ್ಲಿ ಪ್ರವಾಸಿಗರಿಂದ ಅಪಾಯಕಾರಿ ವಿಹಾರ

11:34 PM Jun 29, 2020 | Sriram |

ಕುಂದಾಪುರ: ವಿಶ್ವವಿಖ್ಯಾತ ತ್ರಾಸಿ – ಮರವಂತೆ ಕಡಲ ಕಿನಾರೆಯಲ್ಲಿ ಅಲೆಗಳ ಅಬ್ಬರ ಹೆಚ್ಚುತ್ತಿರುವ ಮಧ್ಯೆಯೂ ಅಪಾಯಕಾರಿ ಸ್ಥಳದಲ್ಲಿ ನಿಂತು ಪ್ರವಾಸಿಗರ ಸೆಲ್ಫಿ, ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ ಮಕ್ಕಳು, ಮಹಿಳೆಯರ ಸಹಿತ ಅನೇಕರು ಕಡಲ ತೀರದಲ್ಲಿ ವಿಹರಿಸುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕಿದೆ.

Advertisement

ನದಿ ಹಾಗೂ ಕಡಲ ಮಧ್ಯದಲ್ಲಿ ಹಾದುಹೋಗುವ ಹೆದ್ದಾರಿಯ ತ್ರಾಸಿ – ಮರವಂತೆಯ ಅತ್ಯಪೂರ್ವವಾದ ಸೊಬಗನ್ನು ಕಣ್ತುಂಬಿಕೊಳ್ಳಲು ದೂರ- ದೂರದ ಊರುಗಳಿಂದ ಪ್ರತಿ ನಿತ್ಯ ಸಾವಿರಾರು ಮಂದಿ ಬರುತ್ತಾರೆ. ಆದರೆ ಸ್ನೇಹಿತರು, ಸಂಬಂಧಿಕರೊಂದಿಗೆ ಮೈಮರೆತು ಅಪಾಯವನ್ನು ಲೆಕ್ಕಿಸದೇ ನೀರಿಗಿಳಿಯುತ್ತಿದ್ದು, ಇಲ್ಲಿ ಈಗ ಯಾರೂ ಕೂಡ ಕೇಳುವವರೇ ಇಲ್ಲದಂತಾಗಿದೆ.

ಕಡಲ್ಕೊರೆತಕ್ಕಾಗಿ ಹಾಕಲಾದ ಕಲ್ಲು, ಬಂಡೆಗಳ ತುದಿಯವರೆಗೆ ಹೋಗಿ ಭಾರೀ ಅಲೆಗಳು ಅಪ್ಪಳಿಸುವ ಸನಿಹದಲ್ಲೇ ಫೋಟೋ ತೆಗೆಯುತ್ತಿರುವುದು, ಭಾರೀ ಗಾತ್ರದ ಅಲೆಗಳ ಅಬ್ಬರವಿದ್ದರೂ ಅದಕ್ಕೆ ಬೆನ್ನು ಹಾಕಿ ಸೆಲ್ಫಿ ಕ್ಲಿಕ್ಕಿಸುವುದು, ಕಡಲಿಗಿಳಿದು ಅಲೆಗಳ ಜತೆ ಆಟವಾಡುವುದು ನೋಡಿದರೆ ಆತಂಕ ಉಂಟಾಗುತ್ತದೆ.

ಸುರಕ್ಷತಾ ಕ್ರಮಕ್ಕೆ ಆಗ್ರಹ
ತ್ರಾಸಿ – ಮರವಂತೆ ಚತುಷ್ಪಥ ಹೆದ್ದಾರಿಯ ಸೇತುವೆಯಿಂದ ಇಲ್ಲಿನ ಸೀಲ್ಯಾಂಡ್‌ವರೆಗಿನ ಕಡಲಬ್ಬರ ಜೋರಾ ಗಿದ್ದು, ಭಾರೀ ಗಾತ್ರದ ಅಲೆಗಳು ದಡಕ್ಕಪ್ಪಳಿಸುತ್ತಿವೆ. ದಡದಿಂದ 90 ಮೀ. ಉದ್ದಕ್ಕಿರುವ ತಡೆಗೋಡೆ ಮೇಲೆ ನಿಲ್ಲುವುದು, ಸ್ನಾನ ಮಾಡುವುದು ಹಾಗೂ ಫೋಟೋ ತೆಗೆದುಕೊಳ್ಳುವುದು ಅಪಾಯಕಾರಿಯಾಗಿದೆ.

ಮಳೆಗಾಲದಲ್ಲಿ ಸಮುದ್ರದ ಅಲೆಗಳು ಅತ್ಯಂತ ಅಪಾಯಕಾರಿಯಾಗಿದ್ದು, ಇದರ ಅಬ್ಬರವನ್ನು ಅಂದಾಜಿಸುವುದು ಕೂಡ ಕಷ್ಟ. ಇಲ್ಲಿನ ಕಡಲ ತೀರದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಸಂಬಂಧಪಟ್ಟ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು, ಗೃಹ ರಕ್ಷಕದ ದಳದವರು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

ಹೆಚ್ಚುವರಿ “ಪ್ರವಾಸಿ ಮಿತ್ರ’ರಿಗೆ ಬೇಡಿಕೆ
ತ್ರಾಸಿ- ಮರವಂತೆಯಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಇರಬೇಕಾದ ಪ್ರವಾಸಿ ಮಿತ್ರರ ಕೊರತೆಯಿದೆ. ಇಲ್ಲಿ ಗೃಹ ರಕ್ಷಕ ದಳದ ಇಬ್ಬರು ಸಿಬಂದಿ ಹಾಗೂ ಒಬ್ಬರು ಲೈಫ್‌ಗಾರ್ಡ್‌ ಅಗತ್ಯವಿದ್ದರೂ, ಈಗ ಇಲ್ಲಿರುವುದು ಒಬ್ಬರು ಗೃಹ ರಕ್ಷಕ ದಳದ ಸಿಬಂದಿ ಹಾಗೂ ಒಬ್ಬರು ಪ್ರವಾಸಿ ಮಿತ್ರರು ಮಾತ್ರ. ಇಲ್ಲಿಗೆ 4 ಮಂದಿ ಪ್ರವಾಸಿ ಮಿತ್ರರನ್ನು ನಿಯೋಜಿಸಿದ್ದರೂ, ಈಗಿರುವುದು ಇಲ್ಲಿ ಒಬ್ಬ ಪ್ರವಾಸಿ ಮಿತ್ರರು ಮಾತ್ರ.

ಗಮನ ಹರಿಸಲಾಗುವುದು
ಮರವಂತೆಗೆ ಕಳೆದ ವರ್ಷ ನಾಲ್ವರು ಪ್ರವಾಸಿ ಮಿತ್ರರನ್ನು ನೇಮಕಗೊಳಿಸಲಾಗಿತ್ತು. ಆದರೆ ಆ ಬಳಿಕ ಸೋಮೇಶ್ವರ, ಕಾಪು, ಮಲ್ಪೆ ಮತ್ತಿತರ ಕಡೆಗಳಿಗೆ ನಿಯೋಜಿಸಿರುವುದರಿಂದ ಹಾಗೂ ತುರ್ತು ನೆರೆ ವಿಪತ್ತು ತಂಡದಲ್ಲಿಯೂ ಅಗತ್ಯವಿರುವುದರಿಂದ ಸದ್ಯಕ್ಕೆ ಒಬ್ಬರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿಗೆ ಹೆಚ್ಚುವರಿ ಪ್ರವಾಸಿ ಮಿತ್ರರ ನಿಯೋಜನೆ ಕುರಿತಂತೆ ಗಮನಹರಿಸಲಾಗುವುದು.
– ಡಾ| ಪ್ರಶಾಂತ್‌ ಶೆಟ್ಟಿ, ಸಮಾದೇಷ್ಟರು, ಜಿಲ್ಲಾ ಗೃಹ ರಕ್ಷಕ ದಳ ಉಡುಪಿ

ಎಚ್ಚರಿಕೆ ಅಗತ್ಯ
ಮರವಂತೆಯಲ್ಲಿ ಪ್ರವಾಸಿಗರ ಸುರಕ್ಷತಾ ಕ್ರಮಗಳ ಕುರಿತಂತೆ ಆದ್ಯತೆ ನೆಲೆಯಲ್ಲಿ ಗಮನಹರಿಸಲಾಗುವುದು. ಇಲ್ಲಿನ ಕಡಲ ತೀರದಲ್ಲಿ ವಿಹರಿಸುವಾಗ, ಸೆಲ್ಫಿ, ಫೋಟೋ ತೆಗೆಯುವ ಸಂದರ್ಭದಲ್ಲಿ ಪ್ರವಾಸಿಗರು ಆದಷ್ಟು ಎಚ್ಚರಿಕೆಯಿಂದ ಇರಬೇಕು. ಈಗಿನ್ನು ಮಳೆಗಾಲವಾಗಿರುವುದರಿಂದ ಕಲ್ಲು ಬಂಡೆಗಳು ಜಾರುವ ಸಂಭವವೂ ಇರುತ್ತದೆ.
– ಚಂದ್ರಶೇಖರ ನಾಯ್ಕ, ಸಹಾಯಕ ನಿರ್ದೇಶಕರು ಪ್ರವಾಸೋದ್ಯಮ ಇಲಾಖೆ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next