Advertisement

ಕಾರ್ಕಳ: ಬೈಪಾಸ್‌ನ ಸರ್ವಜ್ಞ ವೃತ್ತ ಡೇಂಜರ್‌ ಸ್ಪಾಟ್‌!

03:49 AM Mar 13, 2021 | Team Udayavani |

ಕಾರ್ಕಳ: ಬಜಗೋಳಿ-ಉಡುಪಿ ಸಂಪರ್ಕ ರಾಜ್ಯ ಹೆದ್ದಾರಿಯ ಬೈಪಾಸ್‌ನ ಸರ್ವಜ್ಞ ಸರ್ಕಲ್‌ ಅಪಘಾತ ವಲಯವಾಗಿ ಮಾರ್ಪಟ್ಟಿದೆ. ಇತ್ತೀಚಿನ ದಿನಗಳಲ್ಲಿ ಇಲ್ಲಿ ಅಪಘಾತ ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಅಪಘಾತ ತಡೆಗೆ ಇಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.

Advertisement

ಬೈಪಾಸ್‌ ಜಂಕ್ಷನ್‌ ಸಂಧಿಸುವ ಈ ಸ್ಥಳ ವಾಹನ ಚಾಲಕರು, ಪಾದಚಾರಿಗಳಲ್ಲಿ ಸದಾ ಗೊಂದಲ ಮೂಡಿಸುತ್ತಲೇ ಇರುತ್ತದೆ. ಯಾವ ಕಡೆಗೆ ಯಾವ ವಾಹನಗಳು ಹೋಗುತ್ತವೆ ಎಂದು ತತ್‌ಕ್ಷಣಕ್ಕೆ ತಿಳಿಯುವುದೇ ಇಲ್ಲ. ಪಾದಚಾರಿಗಳಂತೂ ರಸ್ತೆ ದಾಟಲು ಯೋಚಿಸುವಷ್ಟರಲ್ಲಿ ಇನ್ನೊಂದು ಕಡೆಯಿಂದ ವಾಹನಗಳು ನುಗ್ಗುವ ಅಪಾಯವಿದೆ. ವಾಹನಗಳು ಶರವೇಗದಲ್ಲಿ ಸಾಗಿ ಬರುತ್ತಿರುವುದು ಅಪಘಾತಗಳಿಗೆ ಕಾರಣವಾಗುತ್ತಿದೆ.

ಶಾಲಾ ಮಕ್ಕಳಿಗೆ ಭೀತಿ
ಸರ್ವಜ್ಞ ವೃತ್ತ ಒಂದು ಕೇಂದ್ರ ಬಿಂದು ಇದ್ದಂತೆ. ಇಲ್ಲಿ ಸಾರ್ವಜನಿಕರಷ್ಟೆ ಅಲ್ಲ. ಶಾಲಾ ಕಾಲೇಜು, ಬಹುತೇಕ ಸರಕಾರಿ ಕಚೇರಿಗಳು ಪರಿಸರದಲ್ಲಿ ಇರುವುದರಿಂದ ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ಜಂಕ್ಷನ್‌ನಲ್ಲಿ ಅಡ್ಡಾಡುತ್ತಿರುತ್ತಾರೆ. ಇಲ್ಲಿ ಹಂಪ್ಸ್‌ ಅಥವಾ ಕನಿಷ್ಠ ಬ್ಯಾರಿಕೇಡ್‌ ಹಾಕಿದರೆ ಉತ್ತಮವೆಂದು ಹೇಳುತ್ತಾರೆ.

ಸಿಬಂದಿ ಇಲ್ಲ
ಜಂಕ್ಷನ್‌ನಲ್ಲಿ ಎಲ್ಲ ಸಂದರ್ಭದಲ್ಲಿ ಅಲ್ಲದೇ ಇದ್ದರೂ ಜನ-ವಾಹನ ಸಂಚಾರ ಹೆಚ್ಚಿದ್ದಾಗ ಕನಿಷ್ಠ ಗೃಹರಕ್ಷಕ ದಳದ ಸಿಬಂದಿಯನ್ನಾದರೂ ಕರ್ತವ್ಯಕ್ಕೆ ನಿಯೋಜಿಸಿದರೆ ಸಂಭಾವ್ಯ ಅವಘಡಗಳನ್ನು ತಪ್ಪಿಸಬಹುದು. ವಾಹನಗಳು ಬೇಕಾಬಿಟ್ಟಿ ಸಂಚರಿಸುವುದರ ತಡೆಗೆ ಸಿಬಂದಿ ನೇಮಕ ಇಲ್ಲಿ ಅಗತ್ಯವಾಗಿದೆ.

ರೂಲ್ಸ್‌ ಬ್ರೇಕ್‌
ರಾತ್ರಿ ಕೂಡ ಈ ಜಂಕ್ಷನ್‌ ಅಪಾಯಕಾರಿಯಾಗಿದೆ. ರಾತ್ರಿ ವೇಳೆ ವಾಹನ ಸವಾರರು ಸಂಚಾರ ನಿಯಮಗಳನ್ನು ಉಲ್ಲಂ ಸಿ ವಾಹನ ಚಲಾಯಿಸುತ್ತಾರೆ. ಇದರಿಂದಲೇ ಅತಿ ಹೆಚ್ಚು ಅಪಘಾತಗಳು ರಾತ್ರಿ ವೇಳೆಯಲ್ಲೂ ಸಂಭವಿಸುತ್ತಿರುತ್ತದೆ.
ಜಂಕ್ಷನ್‌ನ ಆಸುಪಾಸು ದಿಕ್ಕುಗಳ ರಸ್ತೆಗಳಿಗೆ ಹಂಪ್ಸ್‌, ಬ್ಯಾರಿಕೇಡ್‌, ಎಲ್‌ಇಡಿ ಟ್ರಾಫಿಕ್‌ ಸಿಗ್ನಲ್‌ ಅಳವಡಿಸಿ ಅಪಘಾತ ನಿಯಂತ್ರಿಸುವುದು ಅಗತ್ಯವಾಗಿದೆ.

Advertisement

ಹಲವು ರಸ್ತೆ ಸಂಪರ್ಕಿಸುವ ಜಂಕ್ಷನ್‌!
ಬೈಪಾಸ್‌ ರಸ್ತೆಯ ಈ ಅಪಾಯಕಾರಿ ಜಂಕ್ಷನ್‌ ಇರುವುದು ಬಜಗೋಳಿ-ಉಡುಪಿ ಸಂಪರ್ಕ ರಸ್ತೆ ಮಧ್ಯೆ. ಜಂಕ್ಷನ್‌ನಿಂದ ಕವಲೊಡೆದು 5 ಸಂಪರ್ಕ ರಸ್ತೆಗಳಿವೆ. ಬಜಗೋಳಿ-ಉಡುಪಿ ಸಂಪರ್ಕ ರಸ್ತೆ ಒಂದಾದರೆ, ನಕ್ರೆ, ತಾಲೂಕು ಕಚೇರಿ ಎದುರಾಗಿ ಬಂಡಿಮಠಕ್ಕೆ, ಸಾಲ್ಮರಕ್ಕೆ ಒಳ ಮಾರ್ಗವಾಗಿ ಪೇಟೆಗೆ ತೆರಳುತ್ತದೆ.

ವಾಹನ, ಜನಸಂದಣಿಯಿರುವ ಸ್ಥಳ: ಹೆಚ್ಚಿದ ಅವಘಡ
ಕಾರ್ಮಿಕರು, ವಿದ್ಯಾರ್ಥಿಗಳು ಬೆಳಗ್ಗೆ ಹಾಗೂ ಸಂಜೆ ಹೊತ್ತು ಇದೇ ಜಂಕ್ಷನ್‌ ಮೂಲಕ ವಿವಿಧೆಡೆಗೆ ಹೆಚ್ಚು ತೆರಳುತ್ತಿರು ತ್ತಾರೆ. ಇಲ್ಲಿ ವಾಹನ ಸಂಚಾರ, ಜನಸಂಚಾರ ತಪ್ಪುವುದೇ ಇಲ್ಲ. ಎಲ್ಲ ಕಡೆಯ ರಸ್ತೆಗಳಿಂದಲೂ ವಾಹನ ಸವಾರರು ನುಗ್ಗುತ್ತಲೇ ಇರುತ್ತಾರೆ. ಇಂತಹ ಸಂದರ್ಭಗಳಲ್ಲಿ ಹೆಚ್ಚಿನ ಅವಘಡಗಳು ಸಂಭವಿಸಿದೆ. ಮಾ.12ರಂದು ಟೆಂಪೋ-ಬೈಕ್‌ ಮಧ್ಯೆ ಅಪಘಾತ ಸಂಭವಿಸಿ, ಬೈಕ್‌ ಸವಾರರು ಗಂಭೀರವಾಗಿ ಗಾಯಗೊಂಡಿದ್ದರು.

ಕ್ರಮ ಕೈಗೊಳ್ಳಲಾಗುವುದು
ವೃತ್ತದಲ್ಲಿ ಸರಣಿ ಅಪಘಾತ ಆಗುತ್ತಿರುವುದು ಗಮನಕ್ಕೆ ಬಂದಿದೆ. ಈ ಅಪಘಾತ ತಪ್ಪಿಸಲು ಇಲಾಖೆಯಿಂದ ಕ್ರಮ ಕೈಗೊಂಡು ಸಂಚಾರ ನಿಯಂತ್ರಣಕ್ಕೆ ಪ್ರಯತ್ನಿಸಲಾಗುವುದು.
-ಸಂಪತ್‌ ಕುಮಾರ್‌, ಸರ್ಕಲ್‌ ಇನ್ಸ್‌ಪೆಕ್ಟರ್‌

Advertisement

Udayavani is now on Telegram. Click here to join our channel and stay updated with the latest news.

Next