Advertisement

Mangalore-ಬೆಂಗಳೂರು ಸಂಚಾರಕ್ಕೆ ಶಿರಾಡಿಯಲ್ಲಿ ಸಂಚಕಾರ!

11:20 AM Jul 12, 2024 | Team Udayavani |

ಮಂಗಳೂರು: ಬೆಂಗಳೂರಿಗೆ ಮಂಗಳೂರನ್ನು ಸಂಪರ್ಕಿಸುವ ಶಿರಾಡಿ ಘಾಟಿಯಲ್ಲಿ ಸುಲಲಿತ ಸಂಚಾರಕ್ಕೆ ಮಾರನ ಹಳ್ಳಿ -ಸಕಲೇಶಪುರ ಹೆದ್ದಾರಿ ಭಾಗ ಅಡ್ಡಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಶಿರಾಡಿ ಘಾಟಿಯ ಅಡ್ಡಹೊಳೆಯಿಂದ ಹಾಸನ ಜಿಲ್ಲೆಯ ಮಾರನಹಳ್ಳಿವರೆಗೆ ಕಾಂಕ್ರೀಟ್‌ ರಸ್ತೆ ಆಗಿದೆ. ಆದರೆ ಮಾರನ ಹಳ್ಳಿಯಿಂದ ಸಕಲೇಶಪುರದ ವರೆಗಿನ 15 ಕಿ.ಮೀ. ಕಾಮಗಾರಿಯಲ್ಲಿ ಯಾವುದೇಪ್ರಗತಿಯಿಲ್ಲ.

Advertisement

ಆಗಿದ್ದು ಏನು?
ಸಕಲೇಶಪುರದ ಆನೆಮಹಲ್‌ ನಿಂದ ಮಾರನ ಹಳ್ಳಿಯ ಹೆಗ್ಗದ್ದೆಯವರೆಗಿನ ರಸ್ತೆಗೆ ಕಾಂಕ್ರೀಟ್‌ ಹಾಕಲು 4-5 ವರ್ಷಗಳ ಹಿಂದೆ
ನಿರ್ಧರಿಸಲಾಗಿತ್ತು. ಆದರೆ ಅಲ್ಲೊಂದು- ಇಲ್ಲೊಂದು ಎಂಬಂತೆ ಕೆಲವೇ ಮೀಟರ್‌ ನಷ್ಟು ಕಾಂಕ್ರೀಟ್‌ ಹಾಸಲಾಗಿದ್ದು, ಉಳಿದೆಡೆ ಡಾಮರು ರಸ್ತೆ. ನಿತ್ಯ ಸಾವಿರಾರು  ವಾಹನಗಳು ಸಂಚರಿಸುವ ಈ ರಸ್ತೆ ಯ ಕೆಲವೆಡೆ ಇಕ್ಕಟ್ಟಿದ್ದು, ಅಪಾಯಕಾರಿಯಾಗಿದೆ. ದೋಣಿಗಲ್‌, ಕಪ್ಪಳ್ಳಿ ವ್ಯಾಪ್ತಿಯ ಬಹುತೇಕ ಕಡೆ ಕಾಮಗಾರಿ ಆರಂಭವಾಗಿಲ್ಲ. ಕೆಸನಗಹಳ್ಳಿಯಲ್ಲಿ ಗುಡ್ಡವನ್ನು ಕಡಿದು ಕಾಮಗಾರಿ ನಡೆಸಲಾಗುತ್ತಿದೆ. ಇದೇ ರಸ್ತೆಯಲ್ಲಿ ಸಣ್ಣಪುಟ್ಟ ಸೇತುವೆಗಳಿದ್ದು, ಒಂದಕ್ಕೆ ಹಾನಿಯಾದರೂ ಮಂಗಳೂರು – ಬೆಂಗಳೂರು ಸಂಚಾರವೇ ಸ್ಥಗಿತವಾಗಬಹುದು!

ಗುಡ್ಡಗಳೇ ಅಪಾಯ!
ಮಾರನಹಳ್ಳಿ-ಸಕಲೇಶಪುರ ಮಧ್ಯೆ ಆಗಿರುವ ಕೆಲವು ಮೀಟರ್‌ ಕಾಂಕ್ರೀಟ್‌ ರಸ್ತೆಯ ನಿರ್ವಹಣೆ ಸರಿ ಇಲ್ಲ. ಕೆಲವೆಡೆ ರಸ್ತೆಗೆ ಗುಡ್ಡದ ಮಣ್ಣು ಕುಸಿದಿದ್ದರೆ, ಮತ್ತೆ ಕೆಲವೆಡೆ ಕುಸಿಯುವ ಭೀತಿಯಲ್ಲಿದೆ. ಜತೆಗೆ ಕೆಲವೆಡೆ ಗುಡ್ಡವನ್ನು ಕಡಿದು ಬಿಡಲಾಗಿದ್ದು, ಕೆಲವೆಡೆ ಗುಡ್ಡಗಳ ಬದಿಯಲ್ಲಿ ಜರಿದಿದೆ.

ಶಿರಾಡಿ ಹೆದ್ದಾರಿಯಲ್ಲೂ “ಕುಸಿತ’ ಜಾಗದ ಆತಂಕ!
ಶಿರಾಡಿ ಘಾಟಿ ರಸ್ತೆಗೆ 2015ರಲ್ಲಿ 13 ಕಿ.ಮೀ. ಹಾಗೂ 2018 ರಲ್ಲಿ 2ನೇ ಹಂತದಲ್ಲಿ 13 ಕಿ.ಮೀ. ರಸ್ತೆಯನ್ನು ಕಾಂಕ್ರೀಟ್‌ ಮಾಡಲಾಗಿತ್ತು. ಈ ರಸ್ತೆಯ ಬದಿಯ ಸಂಭವನೀಯ ಕುಸಿತ ಸ್ಥಳಗಳಲ್ಲಿ ತಡೆಗೋಡೆ ಕೆಲಸ ಅಲ್ಲಲ್ಲಿ ಪ್ರಗತಿಯಲ್ಲಿದೆ. ಕೆಲವೆಡೆ ಇನ್ನೂ ಇಂತಹ ಅಪಾಯಕಾರಿ ಸ್ಥಳಗಳಿವೆ.

Advertisement

“ಕಾಮಗಾರಿ ತುರ್ತು ಮುಕ್ತಾಯಕ್ಕೆ ಸೂಚನೆ
ಮಾರನಹಳ್ಳಿ-ಸಕಲೇಶಪುರ ಹೆದ್ದಾರಿ ಕಾಮಗಾರಿ ನಿಧಾನ ಆದ ಕಾರಣದಿಂದ ಈಗಾಗಲೇ ಹಲವು ಸುತ್ತಿನ ಸಭೆ ನಡೆಸಿ ಕಾಮಗಾರಿ ತ್ವರಿತಗೊಳಿಸಲು ನಿರ್ದೇಶಿಸಲಾಗಿದೆ. ಮುಂದಿನ ವರ್ಷ ಮೇ ಒಳಗೆ ಪೂರ್ಣ ಗೊಳಿಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.
*ಸತ್ಯಭಾಮಾ ಸಿ. ಜಿಲ್ಲಾಧಿಕಾರಿ, ಹಾಸನ

ಮೇ 31ರೊಳಗೆ ಪೂರ್ಣ
ವಿವಿಧ ಕಾರಣಗಳಿಂದ ಕಾಮಗಾರಿ ತಡವಾಗಿತ್ತು. ಈಗ ಗುತ್ತಿಗೆದಾರರಿಗೆ 2025ರ ಮೇ 31ರೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಲು ಗಡುವು ನೀಡಲಾಗಿದೆ. ಅದರಂತೆ ಕಾಮಗಾರಿ ನಡೆಯಲಿದೆ.
*ಪ್ರವೀಣ್‌, ಯೋಜನಾ ನಿರ್ದೇಶಕರು ಎನ್‌ಎಚ್‌ಎಐ-ಹಾಸನ

*ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next