Advertisement

Danger Dengue: ಆರೋಗ್ಯ ಕೇಂದ್ರಗಳಲ್ಲಿ ಲ್ಯಾಬ್‌ ಟೆಕ್ನೀಶಿಯನ್‌ ನೇಮಕ

01:00 AM Jul 14, 2024 | Team Udayavani |

ಮಂಗಳೂರು : ಜಿಲ್ಲೆಯ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಲ್ಯಾಬ್‌ ಟೆಕ್ನೀಶಿಯನ್‌ ಕೊರತೆ ಇದ್ದು, ಜಿಲ್ಲಾಡಳಿತದಿಂದ ಸೂಕ್ತ ಕ್ರಮ ಕೈಗೊಂಡು ಮೂರು ತಿಂಗಳ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಬೇಕು ಎಂದು ವಿಧಾನಸಭಾ ಸ್ಪೀಕರ್‌ ಯು.ಟಿ. ಖಾದರ್‌ ಸೂಚನೆ ನೀಡಿದರು.

Advertisement

ಡೆಂಗ್ಯೂ ನಿಯಂತ್ರಣದ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಶನಿವಾರ ಜರುಗಿದ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು, ಎಂಪಿಡಬ್ಲ್ಯು ಕಾರ್ಯಕರ್ತರ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡೆಂಗ್ಯೂ ಪ್ರಕರಣ ಏರಿಕೆ ಸಮಯದಲ್ಲಿ ಪ್ರಯೋಗಾಲಯಗಳ ಮೂಲಕ ತ್ವರಿತವಾಗಿ ವರದಿ ಬರಲು ಲ್ಯಾಬ್‌ ಟೆಕ್ನೀಶಿಯನ್‌ ಅಗತ್ಯ ಹೆಚ್ಚಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.

ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣ ಔಟ್‌ಬ್ರೇಕ್‌ ಆಗದಂತೆ ಈಗಿಂದಲೇ ಎಚ್ಚರದಲ್ಲಿರಬೇಕು. ಯಾವುದೇ ಕಾರಣಕ್ಕೂ ಪ್ಲೇಟ್‌ಲೆಟ್‌, ರಕ್ತದ ಕೊರತೆಯಾಗದಂತೆ ನೋಡಿಕೊಳ್ಳಿ. ಡೆಂಗ್ಯೂ, ಎಚ್‌1ಎನ್‌1 ಸಹಿತ ಸಾಂಕ್ರಾಮಿಕ ರೋಗಗಳ ಚಿಕಿತ್ಸೆಗೆ ಸರಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಚಿಕಿತ್ಸೆಗೆ ವಿಳಂಬವಾಗದಂತೆ ಜಾಗ್ರತೆ ವಹಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಫಾಗಿಂಗ್‌ಗೆ ಗಮನ ಕೊಡಿ
ಡೆಂಗ್ಯೂ ಸೊಳ್ಳೆ ನಿಯಂತ್ರಣ ನಿಟ್ಟಿನಲ್ಲಿ ಜಿಲ್ಲಾದ್ಯಂತ ನಿಯಮಿತವಾಗಿ ವೇಳಾಪಟ್ಟಿ ತಯಾರಿಸಿ, ಫಾಗಿಂಗ್‌ ನಡೆಸಬೇಕು. ಒಂದು ವೇಳೆ ಫಾಗಿಂಗ್‌ ಯಂತ್ರ ಅಥವಾ ಅದಕ್ಕೆ ರಾಸಾಯನಿಕ ದ್ರಾವಣ ಬೇಕಾದರೆ ಆರೋಗ್ಯ ಇಲಾಖೆ ಗಮನಕ್ಕೆ ತನ್ನಿ ಎಂದು ಹೇಳಿದ ಅವರು, ಡೆಂಗ್ಯೂ ಜ್ವರದಿಂದ ಗುಣಮುಖರಾದ ಬಳಿಕವೂ ಅವರ ಮೇಲ್ವಿಚಾರಣೆ ಮಾಡಬೇಕು. ಡಿಸೆಂಬರ್‌ವರೆಗೂ ಡೆಂಗ್ಯೂ ಕಾರ್ಯಾಚರಣೆ ಮುಂದುವರಿಯಲಿ ಎಂದರು.

ಜಿಲ್ಲಾಧಿಕಾರಿ ಮುಲ್ಲೆ„ ಮುಗಿಲನ್‌ ಮಾತನಾಡಿ, ಲಾರ್ವಾ ನಾಶದಿಂದಷ್ಟೇ ಡೆಂಗ್ಯೂ ನಿಯಂತ್ರಣ ಸಾಧ್ಯ. ಅಧಿಕಾರಿಗಳು ಲಾರ್ವಾ ಉತ್ಪತ್ತಿಯಾಗುವ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಜನರಿಗೆ ಜಾಗೃತಿ ನೀಡಬೇಕು. ನಿಯಮ ಉಲ್ಲಂಘಿಸುವ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

Advertisement

ಒಟ್ಟು 345 ಪ್ರಕರಣ; ಇಬ್ಬರು ಐಸಿಯುನಲ್ಲಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 345 ಡೆಂಗ್ಯೂ ಪ್ರಕರಣ ದಾಖಲಾಗಿದೆ. 23 ಸಕ್ರಿಯ ಪ್ರಕರಣ ಇದ್ದು, ಇಬ್ಬರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ನವೀನ್‌ಚಂದ್ರ ಕುಲಾಲ್‌ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್‌ ಕೆ., ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್‌ ಕುಮಾರ್‌, ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌, ಮಂಗಳೂರು ನಗರ ಪೊಲೀಸ್‌ ಉಪ ಆಯುಕ್ತ ದಿನೇಶ್‌ ಕುಮಾರ್‌ ಉಪಸ್ಥಿತರಿದ್ದರು.

ಪ್ಲೇಟ್‌ಲೆಟ್‌ ದರ ಹೆಚ್ಚೇಕೆ?
ಜಿಲ್ಲೆಯಲ್ಲಿ ಪ್ಲೇಟ್‌ಲೆಟ್‌ ಸಮಸ್ಯೆ ಇದೆಯೇ ಎಂದು ಅಧಿಕಾರಿಗಳಲ್ಲಿ ಖಾದರ್‌ ಪ್ರಶ್ನಿಸಿದರು. ಅಧಿಕಾರಿಗಳು ಉತ್ತರಿಸಿ, ವೆನಾÉಕ್‌ ರಕ್ತನಿಧಿ ಕೇಂದ್ರದಲ್ಲಿ ಆವಶ್ಯಕ ಪ್ಲೇಟ್‌ಲೆಟ್‌ ಲಭ್ಯವಿದೆ. ವೆನಾÉಕ್‌ ಆಸ್ಪತ್ರೆಯಲ್ಲಿ ಪ್ಲೇಟ್‌ಲೆಟ್‌ ವರ್ಗಾವಣೆಗೆ ಬಿಪಿಎಲ್‌ ಕಾರ್ಡ್‌ದಾರರಿಗೆ ಉಚಿತ ಮತ್ತು ಇತರರಿಗೆ ಒಂದು ಯುನಿಟ್‌ಗೆ 200 ರೂ. ದರ ವಿಧಿಸಲಾಗುತ್ತದೆ ಮತ್ತು ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಪ್ಲೇಟ್‌ಲೆಟ… ವರ್ಗಾವಣೆಗೆ ಸುಮಾರು 1,600 ರೂ.ಗಳನ್ನು ವಿಧಿಸುತ್ತಿದೆ. ಸರಕಾರ ಯಾವುದೇ ಮಿತಿಯನ್ನು ನಿಗದಿಪಡಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಸ್ಪೀಕರ್‌, ಬಿಲ್‌ ಅಧಿಕವಾಗಿರಬಾರದು. ಈ ಸಮಸ್ಯೆಯನ್ನು ಖಾಸಗಿ ಆಸ್ಪತ್ರೆ ಆಡಳಿತಗಳೊಂದಿಗೆ ಚರ್ಚಿಸಲು ಅಧಿಕಾರಿಗಳಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next