Advertisement

Padubidri: ಅಪಾಯದಲ್ಲಿವೆ ಓವರ್‌ ಹೆಡ್‌ ಟ್ಯಾಂಕ್‌ಗಳು!

06:05 PM Sep 01, 2024 | Team Udayavani |

ಪಡುಬಿದ್ರಿ: ಸರಕಾರ ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿ ಹಳ್ಳಿ ಹಳ್ಳಿಗಳಿಗೆ ನೀರು ಸರಬರಾಜು ಮಾಡುತ್ತಿದೆ. ಹೊಸ ಹೊಸ ಪೈಪ್‌ ಲೈನ್‌ ಹಾಕಲಾಗುತ್ತಿದೆ. ಆದರೆ, ಹಳೆಯದಾದ ಓವರ್‌ ಟ್ಯಾಂಕ್‌ಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಓವರ್‌ ಹೆಡ್‌ ಟ್ಯಾಂಕ್‌ಗಳು ಕುಸಿದ, ಮುರಿದು ಬಿದ್ದ ಘಟನೆಗಳು ನಡೆದಿವೆ. ಉಡುಪಿ ಜಿಲ್ಲೆಯಲ್ಲೂ ಕೆಲವೊಂದು ಕಡೆ ಟ್ಯಾಂಕ್‌ಗಳು ಶಿಥಿಲಾವಸ್ಥೆಯಲ್ಲಿರುವುದು ಬೆಳಕಿಗೆ ಬಂದಿದೆ.

Advertisement

ಟ್ಯಾಂಕ್‌ನೊಳಗೆ ಮುರಿದ ಏಣಿ
ಪಡುಬಿದ್ರಿ ಗ್ರಾ. ಪಂ. ವ್ಯಾಪ್ತಿಯ ಪಾದೆಬೆಟ್ಟು ಗ್ರಾಮದಲ್ಲಿರುವ ಓವರ್‌ ಹೆಡ್‌ ಟ್ಯಾಂಕ್‌ ಎಷ್ಟೊಂದು ಶಿಥಿಲವಾಗಿದೆ ಎಂದರೆ, ಅದಕ್ಕೆ ಸರಿಯಾಗಿ ಹತ್ತಲು ಏಣಿ ಇಲ್ಲ. ಟ್ಯಾಂಕ್‌ನೊಳಗಿನ ಏಣಿಯೂ ಮುರಿದಿದೆ. ಇಂಥ ಸ್ಥಿತಿಯಲ್ಲೂ ಇದರಿಂದ ನೀರು ಸರಬರಾಜು ನಡೆಯುತ್ತಿದೆ

ಇದನ್ನು ನಿಗದಿತ ಸಮಯದಲ್ಲಿ ಸ್ವತ್ಛಗೊಳಿಸಬೇಕಾದಾಗ ಪಂಚಾಯತ್‌ ನೌಕರರು ಜೀವವನ್ನು ಪಣಕ್ಕಿಟ್ಟೇ ಕೆಲಸ ಮಾಡುತ್ತಾರೆ. ಆಗಲೇ ತುಕ್ಕು ಹಿಡಿದಿರುವ ನೀರಿನ ಟ್ಯಾಂಕ್‌ನ ಕಬ್ಬಿಣದ ಏಣಿಯೇರಿ, ಟ್ಯಾಂಕೊಳಗಿನ ಏಣಿ ತುಂಡಾಗಿರುವ ಕಾರಣದಿಂದ ಹಗ್ಗ ಕಟ್ಟಿ ಇಳಿದು ನೀರಿನ ಟ್ಯಾಂಕ್‌ನ ಕಾರ್ಯಭಾರ ನಿರ್ವಹಿಸುತ್ತಾರೆ. (ಮೇಲಿಂದ ಒಳಗಿಳಿಯಲು ಕಟ್ಟಿರುವ ಹಗ್ಗವನ್ನೂ ಇಲ್ಲಿ ನಾವು ಚಿತ್ರದಲ್ಲಿ ಕಾಣಬಹುದು).

ಮಳೆಗಾಲ ಬೇರೆ. ಅದರಲ್ಲೂ ಟ್ಯಾಂಕ್‌ನ ಮೇಲೆ ರಕ್ಷಣೆಗೆ ಅಳವಡಿಸಿದ ಕಬ್ಬಿಣದ ಆವರ್ಕವೂ “ಬೆಂಡ್‌” ಆಗಿದೆ. ಹಾಗಿದ್ದರೂ ದಿಟ್ಟತನದಿಂದ ಕರ್ತವ್ಯ ನಿರ್ವಹಿಸುವ ಅವರಿಗೆ ಶಹಭಾಷ್‌ ಎನ್ನಬೇಕು. ಆದರೆ, ಇಂಥ ದುಸ್ಥಿತಿಗೆ ಕಾರಣವಾದ ಪರಿಸ್ಥಿತಿಗೆ ಏನು ಹೇಳಬೇಕು?

ಪಡುಬಿದ್ರಿ ಗ್ರಾಪಂ. ಆವರಣದಲ್ಲೂ ಹಳೆ ಟ್ಯಾಂಕ್‌
ಈ ರೀತಿಯ ಅತೀ ಹಳೆಯ ಟ್ಯಾಂಕ್‌ ಒಂದು ಪಡುಬಿದ್ರಿ ಗ್ರಾ. ಪಂ. ಆವರಣದಲ್ಲೇ ಇದೆ. ಇಲ್ಲಿ ಸುಮಾರು ಏಳೆಂಟು ವರ್ಷಗಳ ಹಿಂದೆ ಗ್ರಾಮೀಣ ರಸ್ತೆ ರಚನೆಗಾಗಿ ಜಿ. ಪಂ. ಎಂಜೀನಿಯರಿಂಗ್‌ ವಿಭಾಗವೇ ಸರ್ವೇ ನಡೆಸಿದ್ದಾಗಲೇ ಟ್ಯಾಂಕ್‌ನ ಬದಿ ರಸ್ತೆ ರಚನೆಗೆ ಯೋಗ್ಯವಲ್ಲ. ಹಳೆಯ ನೀರಿನ ಟ್ಯಾಂಕ್‌ ಇದು. ಕಂಪನದಿಂದ ಅಪಾಯ ಎಂಬುದಾಗಿಯೂ ವರದಿಗಳು ಸಾರಿವೆ. ಇದು ಜಿಲ್ಲೆಯಲ್ಲಿ ಗ್ರಾಮೀಣ ನೀರು ಸರಬರಾಜಿನ ಓವರ್‌ ಹೆಡ್‌ ಟ್ಯಾಂಕುಗಳು ಯಾವ ಸ್ಥಿತಿಯಲ್ಲಿವೆ ಎಂಬುದನ್ನು ಜಗಜ್ಜಾಹೀರು ಮಾಡಿವೆ. ಪಡುಬಿದ್ರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಓವರ್‌ಹೆಡ್‌ ಟ್ಯಾಂಕುಗಳ ಕುರಿತಾದ ಸರ್ವೇ ಕಾರ್ಯವು ತಿಂಗಳ ಹಿಂದಷ್ಟೇ ನಡೆದಿದೆ. ಇದರ ವರದಿ ಇನ್ನಷ್ಟೇ ತಮ್ಮ ಕೈಸೇರಬೇಕಿದೆ ಎಂದು ಪಿಡಿಒ ಮಂಜುನಾಥ ಶೆಟ್ಟಿ ಹೇಳಿದ್ದಾರೆ.

Advertisement

ಯಾರು ಇದಕ್ಕೆ ಹೊಣೆ?
ಗ್ರಾಮೀಣ ಕುಡಿಯುವ ನೀರಿನ ಯೋಜನೆಯಲ್ಲಿ ಎಲ್ಲ ತಾಂತ್ರಿಕ ಅಂಶಗಳನ್ನು ಆಯಾಯ ಜಿ.ಪಂ. ಗ್ರಾಮೀಣ ನೀರು ಪೂರೈಕೆಯ ಎಂಜಿನಿಯರಿಂಗ್‌ ವಿಭಾಗವು ಅವಲೋಕಿಸುತ್ತಿರುತ್ತದೆ. ಕಾಲ, ಕಾಲಕ್ಕೆ ಇದೇ ನೀರಿನ ಟ್ಯಾಂಕುಗಳ ಮೇಲುಸ್ತುವಾರಿಯೂ ಜಿ.ಪಂ. ಗೆ ಸೇರಿರುತ್ತದೆ. ಸಿಮೆಂಟ್‌ ಉದುರಿದಾಗ ಅದಕ್ಕೆ ನಡೆಯಬೇಕಾದ ತೇಪೆ ಕಾಮಗಾರಿಗಳು, ಏಣಿಗಳ ಬದಲಾವಣೆ, ಟ್ಯಾಂಕ್‌ ಒಳಗಡೆಯ ಸ್ಥಿತಿಗತಿ ಪರಿಶೀಲಿಸಿ ಕ್ರಮಗಳ ಜರಗಿಸುವಿಕೆಯೂ ಕೂಡಾ ಜಿ.ಪಂ. ತಾಂತ್ರಿಕ ವಿಭಾಗದ ಅಧೀನದಲ್ಲಿರುತ್ತದೆ ಎಂಬ ಅಂಶವೂ ಇದುವರೆಗೂ ಜನತೆಯ ಎದುರು ತೆರೆದುಕೊಂಡಿಲ್ಲ.

ಜಿಲ್ಲಾದ್ಯಂತ ಟ್ಯಾಂಕ್‌ ಸರ್ವೇ
ಉಡುಪಿ ಜಿ. ಪಂ. ಮುಖ್ಯ ಸಿಇಒ ಪ್ರತೀಕ್‌ ಬಾಯಲ್‌ ಅವರು ಸುಮಾರು 2 ತಿಂಗಳ ಹಿಂದಷ್ಟೇ ಜಿಲ್ಲೆಯ ಕುಡಿಯುವ ನೀರಿನ ಟ್ಯಾಂಕುಗಳ ಪರಿಸ್ಥಿತಿಯ ಪರಾಮರ್ಶೆಗೆ ಮುಂದಾಗಿದ್ದಾರೆ. ತಿಂಗಳ ಹಿಂದಷ್ಟೇ ಈ ಕುರಿತಾಗಿ ಜಿ. ಪಂ. ಎಂಜೀನಿಯರಿಂಗ್‌ ವಿಭಾಗದ ಮೂಲಕ ಜಿಲ್ಲಾದ್ಯಂತದ ಓವರ್‌ಹೆಡ್‌ ಟ್ಯಾಂಕ್‌ಗಳ ಸರ್ವೇಯನ್ನೂ ನಡೆಸಲಾಗಿದೆ. ಆದರೆ, ಅದರ ಪೂರ್ಣ ವರದಿ ಇನ್ನೂ ಬಂದಿಲ್ಲ.

ಒಟ್ಟು ಎಷ್ಟು ಟ್ಯಾಂಕ್‌?
ಉಡುಪಿ ಜಿಲ್ಲೆಯ ಏಳೂ ತಾಲೂಕುಗಳ 155 ಗ್ರಾ. ಪಂ.ಗಳ 245 ಹಳ್ಳಿಗಳಲ್ಲಿ ಒಟ್ಟು 895 ಗ್ರಾಮೀಣ ಕುಡಿಯುವ ನೀರಿನ ಟ್ಯಾಂಕ್‌ ಗಳಿವೆ. ಅವುಗಳಲ್ಲಿ ಎರಡು ಶಿಥಿಲಗೊಂಡಿದ್ದು ಅವುಗಳನ್ನು ಕೆಡವಲಾಗಿದೆ.

ಜಿ.ಪಂ. 840 ಓವರ್‌ ಹೆಡ್‌ ಟ್ಯಾಂಕ್‌ಗಳ ತಪಾಸಣೆ ನಡೆಸಿ ಶುಚಿ ಗೊಳಿಸುವ ಕಾರ್ಯವನ್ನೂ ಪೂರೈಸಿದೆ

ಜಿಲ್ಲೆಯಲ್ಲಿ ಕುಡಿಯುವ ನೀರು ಸರಬರಾಜಿನ ಒಟ್ಟು 1,483 ಜಲಮೂಲ ಗಳಿದ್ದು, ಅವುಗಳ ತಪಾಸಣೆ ನಡೆದಿದೆ.

ಮಾಹಿತಿ ನೀಡಿ…
ಅಪಾಯಕಾರಿ ಸ್ಥಿತಿಯಲ್ಲಿರುವ ಓವರ್‌ಹೆಡ್‌ ಟ್ಯಾಂಕ್‌ಗಳು ನಿಮ್ಮ ವ್ಯಾಪ್ತಿಯಲ್ಲೂ ಇದ್ದರೆ, ಫೋಟೋ ತೆಗೆದು, ವಿವರಗಳೊಂದಿಗೆ ನಮ್ಮ ವಾಟ್ಸ್ಯಾಪ್ ಸಂಖ್ಯೆ 63629 06071ಗೆ ಬರೆದು ಕಳುಹಿಸಿ.

-ಆರಾಮ

Advertisement

Udayavani is now on Telegram. Click here to join our channel and stay updated with the latest news.