ದಾಂಡೇಲಿ: ನಗರದ ಬಸ್ ನಿಲ್ದಾಣದಲ್ಲಿ ಮಾನಸಿಕ ಅಸ್ವಸ್ಥನೋರ್ವ ರಂಪಾಟ ನಡೆಸಿ, ಪ್ರಯಾಣಿಕರು ಮತ್ತು ಸಾರಿಗೆ ಬಸ್ ಸಿಬ್ಬಂದಿಗಳು ಕಕ್ಕಾಬಿಕ್ಕಿಯಾದ ಘಟನೆ ಆ.28ರ ಸೋಮವಾರ ನಡೆದಿದೆ.
ತನ್ನ ಎರಡು ಕೈಯಲ್ಲಿ ತರಕಾರಿ ಹೊಂದಿದ್ದ ಕೈ ಚೀಲದೊಂದಿಗೆ ನಗರದ ಬಸ್ ನಿಲ್ದಾಣಕ್ಕೆ ಬಂದಿದ್ದ ಮಾನಸಿಕ ಅಸ್ವಸ್ಥನೋರ್ವ ತಡೆರಹಿತ ಬಸ್ಸಿನ ಚಾಲಕನಲ್ಲಿ ನನಗೆ ಹಳಿಯಾಳ ತಾಲೂಕಿನ ಅಜಗಾಂವ್ಗೆ ಹೋಗಬೇಕು. ಅಜಗಾಂವ್ ಕ್ರಾಸ್ ಹತ್ತಿರ ಬಸ್ ನಿಲ್ಲಿಸುತ್ತಿರಾ ಎಂದು ಕೇಳಿದ್ದಾನೆ. ಆಗ ಚಾಲಕ ಇದು ತಡೆರಹಿತ ಬಸ್ ಆಗಿರುವುದರಿಂದ ಇಲ್ಲಿಂದ ಮುಂದೆ ಹಳಿಯಾಳದಲ್ಲಿ ಮಾತ್ರ ನಿಲುಗಡೆಯಿರುತ್ತದೆ. ಬೇರೆ ಬಸ್ಸಿನಲ್ಲಿ ಹೋಗಿ ಎಂದಿದ್ದಾನೆ.
ಅಷ್ಟೊತ್ತಿಗಾಗುವಾಗ ರೊಚ್ಚಿಗೆದ್ದ ಮಾನಸಿಕ ಅಸ್ವಸ್ಥ ಕೈ ಚೀಲವನ್ನು ಅಲ್ಲೆ ಇಟ್ಟು ಎರಡು ಕೈಯಲ್ಲಿ ಕಲ್ಲನ್ನು ಹಿಡಿದುಕೊಂಡು ನನ್ನನ್ನು ಬಿಟ್ಟು ಹೇಗೆ ಹೋಗುತ್ತಿಯಾ ಎಂದು ಚಾಲಕನಿಗೆ ಏರು ಧ್ವನಿಯಲ್ಲಿ ಹೇಳಿ ಬಸ್ಸಿಗೆ ಕಲ್ಲನ್ನು ಎಸೆಯಲು ಮುಂದಾಗಿದ್ದಾನೆ.
ಸುಮಾರು ಹದಿನೈದು ನಿಮಿಷಗಳವರೆಗೆ ಮಾನಸಿಕ ಅಸ್ವಸ್ಥನ ರಂಪಾಟ ನಡೆಯಿತು. ಆನಂತರ ಸಾರಿಗೆ ಬಸ್ಸಿನ ಸಿಬ್ಬಂದಿಗಳು ಆತನನ್ನು ಹಿಡಿದು ಬಸ್ ನಿಲ್ದಾಣದಿಂದ ಹೊರಗೆ ಕಳುಹಿಸಿದ್ದಾರೆ.
ಸಾರಿಗೆ ಸಿಬ್ಬಂದಿಗಳು ಮಾನಸಿಕ ಅಸ್ವಸ್ಥನ ವಿಚಾರದಲ್ಲಿ ತಮ್ಮ ನಿಯಮಗಳನ್ನು ಸಡಿಲಿಕೆ ಮಾಡುವುದೆ ಒಳಿತೆಂಬ ಮಾತು ಕೇಳಿಬರುತ್ತಿದ್ದು, ಒಂದು ವೇಳೆ ಬಸ್ ಹತ್ತಿಸಿ ಅಜಗಾಂವ್ ಕ್ರಾಸ್ ವರೆಗೆ ಕರೆದುಕೊಂಡು ಹೋಗಿರುತ್ತಿದ್ದಲ್ಲಿ ಈ ಸಮಸ್ಯೆ ಸೃಷ್ಟಿಯಾಗುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಸಾರಿಗೆ ಅಧಿಕಾರಿಗಳು ಸಾರಿಗೆ ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನವನ್ನು ನೀಡಬೇಕಾಗಿದೆ.