ಮೆಲ್ಬೋರ್ನ್: ಆಸ್ಟ್ರೇಲಿಯಾ ತಂಡದ ಅಲ್ ರೌಂಡರ್, ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡುವ ಡೇನಿಯಲ್ ಕ್ರಿಸ್ಚಿಯನ್ ನಾಲ್ಕು ವರ್ಷಗಳ ಬಳಿಕ ಆಸೀಸ್ ತಂಡಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಡೇನಿಯಲ್ ಆಡಲಿದ್ದಾರೆ.
ಸದ್ಯ 37 ವರ್ಷದ ಡೇನಿಯಲ್ ಕ್ರಿಸ್ಚಿಯನ್ 2017ರಲ್ಲಿ ಕೊನೆಯದಾಗಿ ಆಸೀಸ್ ಜೆರ್ಸಿಯಲ್ಲಿ ಕಣಕ್ಕಿಳಿದಿದ್ದರು. ಅವರು ವಿಂಡೀಸ್ ವಿರುದ್ಧ ಆಡಲಿದ್ದಾರೆ ಎಂದು ಕೋಚ್ ಜಸ್ಟಿನ್ ಲ್ಯಾಂಗರ್ ತಿಳಿಸಿದ್ದಾರೆ.
‘ನಾನು ಮುಖ್ಯ ಕೋಚ್ ಆಗಿ ಮೂರು ವರ್ಷವಾಯಿತು. ಪ್ರತಿ ಸಲ ಆತ ಯಾವುದೇ ಕೂಟದಲ್ಲಿ ಉತ್ತಮವಾಗಿ ಆಡಿದಾಗ ನನಗೆ ಸಂದೇಶ ಕಳುಹಿಸುತ್ತಾನೆ.’ ಕೋಚ್ ನನ್ನನ್ನು ಆಯ್ಕೆ ಮಾಡಿ, ಆಸ್ಟ್ರೇಲಿಯಾದ ಬೆಸ್ಟ್ ಆಲ್ ರೌಂಡರ್ ನಾನು’ ಎನ್ನುತ್ತಾನೆ” ಎಂದು ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ.
ಇದನ್ನೂ ಓದಿ:ಇಂಗ್ಲೆಂಡ್ ಬಿ ಟೀಮ್ ನ ವಿರುದ್ಧ ಹೀನಾಯವಾಗಿ ಸೋತ ಪಾಕಿಸ್ಥಾನ
ಅದಲ್ಲದೆ ಮಿಚೆಲ್ ಮಾರ್ಷ್ ಅವರು ಅಗ್ರ ಕ್ರಮಾಂಕದಲ್ಲಿ ಆಡಲಿದ್ದಾರೆ. ಜೋಶ್ ಫಿಲಿಪ್ ಅವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ ಎಂದು ಲ್ಯಾಂಗರ್ ಹೇಳಿದರು.
ಆಸ್ಟ್ರೇಲಿಯಾ ತಂಡ ವೆಸ್ಟ್ ಇಂಡೀಸ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿ ಆಡಲಿದೆ. ಬಾರ್ಬಡೋಸ್ ನ ಕೆನ್ನಿಂಗ್ಸ್ಟನ್ ಓವಲ್ ನಲ್ಲಿ ಪಂದ್ಯಗಳು ನಡೆಯಲಿದೆ.