ಉಡುಪಿ: ಈ ರಸ್ತೆಯಲ್ಲಿ ಸುಗಮ ಸಂಚಾರ ಎಂಬುದು ಸಾಧ್ಯವೇ ಇಲ್ಲ! ನಾಲ್ಕುಚಕ್ರದ ವಾಹನಗಳು ನೃತ್ಯ ಮಾಡುತ್ತಾ ಸಾಗುತ್ತಿದ್ದರೆ, ದ್ವಿಚಕ್ರ ವಾಹನ ಸವಾರರು ಕಣ್ಣಲ್ಲಿ ಕಣ್ಣಿಟ್ಟು ಸಂಚರಿಸಬೇಕು. ಪಾದಚಾರಿಗಳಂತೂ ತೀರ ಎಚ್ಚರಿಕೆಯಿಂದಲೇ ನಡೆದಾಡಬೇಕು.
ಇದು ಮಣಿಪಾಲ – ರಾಜೀವ ನಗರದಿಂದ ಕರ್ವಾಲಿಗೆ ಹೋಗುವ ರಸ್ತೆ ದುರವಸ್ಥೆಯ ಸ್ಯಾಂಪಲ್. ಕಾಪು ವಿಧಾನಸಭಾ ಕ್ಷೇತ್ರದ ಅಲೆವೂರು ಗ್ರಾ.ಪಂ. ವ್ಯಾಪ್ತಿಗೆ ಒಳಪಟ್ಟ ಈ ರಸ್ತೆ ವರ್ಷಗಳಿಂದ ಡಾಮರು ಕಾಣದೇ ಸೊರಗಿದೆ.
ಕರ್ವಾಲು, ಮೂಡು ಅಲೆವೂರು, ಕೊಡಂಗಳ, ಕನರಾಡಿ, ಮರ್ಣೆ, ಪೆರ್ಣಂಕಿಲದಿಂದ ಸಾವಿರಾರು ಜನ ದೈನಂದಿನ ವ್ಯವಹಾರಕ್ಕಾಗಿ ಮಣಿಪಾಲಕ್ಕೆ ಬರಲು ಇದೇ ರಸ್ತೆಯನ್ನು ಬಳಸುತ್ತಾರೆ. ಸುಮಾರು 15 ವರ್ಷಗಳ ಹಿಂದೆ ನಬಾರ್ಡ್ ಯೋಜನೆಯಡಿ ನಿರ್ಮಾಣಗೊಂಡ ಈ ರಸ್ತೆ ಇಂದಿನವರೆಗೆ ಯಾವುದೇ ರಿಪೇರಿ ಕಂಡಿಲ್ಲ. ಇಲ್ಲಿ ಮಳೆ ನೀರು ಹರಿದುಹೋಗಲು ಚರಂಡಿ ಇಲ್ಲ. ವಿದ್ಯುತ್ ದೀಪಗಳಂತೂ ಇಲ್ಲವೇ ಇಲ್ಲ.
ರಸ್ತೆ ಹದಗೆಟ್ಟಿರುವುದರಿಂದ ರಾಜೀವ ನಗರದಿಂದ ಮುಂದಕ್ಕೆ ಬಸ್ಸುಗಳೂ ಬಾರದೇ ಅಲ್ಲಿಂದಲೇ ತಿರುಗಿಸಿ ಹೋಗುತ್ತಿವೆ. ಇದರಿಂದ ಜನ ಮೂರು ಕಿ.ಮೀ. ನಡೆಯಬೇಕಾದ ಸ್ಥಿತಿ ಇದೆ. 14 ವರ್ಷಗಳಿಂದಲೂ ರಸ್ತೆ ದುರಸ್ಥಿತಿಗೆ ಜನ ಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತ ಬಂದರೂ ಏನೂ ಪ್ರಯೋಜನವಾಗಿಲ್ಲ ಎಂದು ಜನ ದೂರುತ್ತಿದ್ದಾರೆ. ರಸ್ತೆ ಸರಿಪಡಿಸದೇ ಇದ್ದರೆ, ಊರಿನ ಜನರು ಒಟ್ಟು ಸೇರಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.