Advertisement

ಗಾಳಿಯ ರಭಸಕ್ಕೆ  ನೆಲಕ್ಕುರುಳಿದ ಮರಗಳು, ಮನೆ-ಅಂಗಡಿಗಳಿಗೆ ಹಾನಿ

03:04 PM Jul 16, 2018 | |

ಆಲಂಕಾರು : ಕಳೆದ ಎರಡು ದಿನಗಳಿಂದ ಮಳೆಯ ಆರ್ಭಟ ಸ್ವಲ್ಪ ಕಡಿಮೆ ಯಾದರೂ ಬೀಸುತ್ತಿರುವ ಬಿರುಗಾಳಿಯ ಬಗ್ಗೆ ಜನತೆ ಆತಂಕ ಹೊಂದಿದ್ದಾರೆ. ರವಿವಾರ ಬೆಳಗ್ಗೆ ಆಲಂಕಾರು ಗ್ರಾಮದ ಅಲ್ಲಲ್ಲಿ ಬೀಸಿದ ಬಿರುಗಾಳಿಗೆ ಅಪಾರ ಪ್ರಮಾಣದ ಕೃಷಿ ಸಾರ್ವಜನಿಕ ಸೊತ್ತುಗಳು ನಾಶವಾಗಿವೆ. ಆಲಂಕಾರು ಗ್ರಾಮದ ಶರವೂರು, ಕೊಂಡಾಡಿ, ಕೊಪ್ಪ, ನಾಡ್ತಿಲದಲ್ಲಿ ಬೀಸಿದ ಭಾರಿ ಸುಂಟರಗಾಳಿಗೆ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಕೊಂಡಾಡಿ ಮೋನಪ್ಪ
ಅವರ ಮನೆಗೆ ಹಾಗೂ ಕೊಟ್ಟಿಗೆಗೆ ತೆಂಗಿನ ಮರ ಮುರಿದು ಬಿದ್ದು 50 ಸಾವಿರ ರೂ.ಗೂ ಮಿಕ್ಕಿ ನಷ್ಟ ಸಂಭವಿಸಿದೆ. ಪಕ್ಕದಲ್ಲಿದ್ದ ಬೃಹತ್‌ ತೆಂಗಿನ ಮರ ಬುಡದಿಂದಲೇ ಮುರಿದು ಕೊಟ್ಟಿ ಗೆಯ ಮಾಡಿಗೆ ಬಿದ್ದು ಮಾಡಿನ ಸಿಮೆಂಟ್‌ ಶೀಟ್‌ ಸಂಪೂರ್ಣ ನಾಶವಾಗಿದೆ. ಈ ವೇಳೆ ತೆಂಗಿನಮರ ಮನೆಯ ವಿದ್ಯುತ್‌ ಸಂಪರ್ಕದ ವಯರ್‌ ಮೇಲೆ ಬಿದ್ದ ಪರಿಣಾಮ ಮನೆಯ ಮಾಡಿಗೆ ಅಪಾರ ಹಾನಿ ಉಂಟಾಗಿದ್ದು, ಪಕ್ಕಾಸು ಹಾಗೂ ಹೆಂಚುಗಳು ಪುಡಿಯಾಗಿವೆ.

Advertisement

ಕೊಂಡಾಡಿ ಏಣಿತ್ತಡ್ಕ ರವಿ ಗೌಡರ ಮನೆಗೂ ಹಾನಿಯಾಗಿದ್ದು ಹೆಂಚುಗಳು ಗಾಳಿಗೆ ಹಾರಿ ಹೋಗಿವೆ. ಅಲ್ಲದೆ, ಸಿಮೆಂಟ್‌ ಶೀಟ್‌ಗಳಿಗೆ ಹಾನಿಯುಂಟಾಗಿದೆ. 20 ಅಡಿಕೆ ಮರಗಳು ಗಾಳಿಗೆ ತುಂಡಾಗಿದ್ದು, ಏಣಿತ್ತಡ್ಕ ಪದ್ಮಯ್ಯ ಗೌಡರ 18 ಅಡಿಕೆ ಮರಗಳು ಗಾಳಿಗೆ ಬಿದ್ದಿವೆ. ಕೊಂಡಾಡಿಕೊಪ್ಪ ಶೀನಪ್ಪ ಕುಂಬಾರರ ತೋಟಕ್ಕೂ ಹಾನಿಯಾಗಿದೆ.

ಕೃಷಿ ನಾಶ
ಮಾ. 19ರಂದು ಶರವೂರು, ಕಂದ್ಲಾಜೆ, ನಗ್ರಿ, ಕಕ್ವೆ ಮೊದಲಾದ ಕಡೆಗಳಲ್ಲಿ ಇದೇ ಮಾದರಿಯ ಬಿರುಗಾಳಿ ಬೀಸಿದ್ದು ಭಾರೀ ಪ್ರಮಾಣದ ಆಸ್ತಿ-ಪಾಸ್ತಿಗೆ ನಷ್ಟ ಸಂಭವಿಸಿತ್ತು. ಅಲ್ಲದೆ ಶನಿವಾರ ಕೊಯಿಲ ಹಾಗೂ ರಾಮಕುಂಜ ಗ್ರಾಮಗಳ ಕೆಲವು ಪ್ರದೇಶಗಳಲ್ಲಿ ಇದ್ದಕ್ಕಿದ್ದಂತೆ ಬೀಸಿದ ಭಾರಿ ಸುಂಟರಗಾಳಿಯಿಂದಾಗಿ ಅಪಾರ ಪ್ರಮಾಣದ ಕೃಷಿ ನಾಶವಾಗಿತ್ತು. ಭಾರೀ ಗಾತ್ರದ ಮರಗಳು ವಿದ್ಯುತ್‌ ತಂತಿ ಮೇಲೆ ಬಿದ್ದ ಪರಿಣಾಮ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಘಟನಾ ಸ್ಥಳಗಳಿಗೆ ಆಲಂಕಾರು ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಜಗನ್ನಾಥ ಶೆಟ್ಟಿ, ಗ್ರಾ.ಪಂ. ಸದಸ್ಯ ಸದಾನಂದ ಆಚಾರ್ಯ, ಉಗ್ರಾಣಿ ವಿಶ್ವನಾಥ ಭೇಟಿ ನೀಡಿ ಸಂಭವಿಸಿದ ನಷ್ಟ ಪರಿಶೀಲಿಸಿದರು. ಪ್ರಾಕೃತಿಕ ವಿಕೋಪದಡಿ ಪರಿಹಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು. 

ಮೊಬೈಲ್‌ ಶಾಪ್‌ಗೆ ಹಾನಿ
ಶಾಂತಿಮೊಗರು ಕಮ್ತೀಲು ರವಿ ಅವರ ಮೊಬೈಲ್‌ ಶಾಪ್‌ ಬಿರುಗಾಳಿಗೆ ಸಿಲುಕಿ ಭಾರಿ ನಷ್ಟ ಸಂಭವಿಸಿದೆ. ಶಾಪ್‌ನ ಛಾವಣಿಯ 16 ಸಿಮೆಂಟ್‌ ಶೀಟ್‌ಗಳು ಗಾಳಿಗೆ ಸಿಲುಕಿ ಸಂಪೂರ್ಣ ನಾಶವಾಗಿವೆ. ಪರಿಣಾಮ ಅಂಗಡಿಯೊಳಗಿದ್ದ ಜೆರಾಕ್ಸ್‌ ಮೆಷಿನ್‌, ಮೊಬೈಲ್‌ ಫೊನ್‌ಗಳು, ದುರಸ್ತಿಗೆ ಬಂದ
ಮೊಬೈಲ್‌, ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಹಾಗೂ ವಿದ್ಯುತ್‌ ಉಪಕರಣಗಳು ಮಳೆ ನೀರಿಗೆ ಹಾನಿಯಾಗಿದ್ದು, ಸುಮಾರು 70 ಸಾವಿರ ರೂ. ನಷ್ಟ ಸಂಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next