Advertisement

ಪಾಳು ಬಿದ್ದ ತಾರಿಗುಡ್ಡೆ ಬಾಲವಾಡಿ ಜಾಗ: ಕ್ರಮ ಕೈಗೊಳ್ಳಲು ಹಿಂದೇಟು

04:49 PM Nov 13, 2017 | |

ತಾರಿಗುಡ್ಡೆ: ಅಂಗನವಾಡಿ ವ್ಯವಸ್ಥೆಯನ್ನು ಪರಿಚಯಿಸುವ ಮೊದಲು ಪ್ರಚಲಿತದಲ್ಲಿದ್ದ ಬಾಲವಾಡಿ ಮತ್ತದರ ಜಾಗ ಸದ್ಯದ ಸ್ಥಿತಿಯಲ್ಲಿ ಪಾಳು ಬಿದ್ದ ನಿದರ್ಶನ ತಾರಿಗುಡ್ಡೆಯಲ್ಲಿದೆ. ಕಟ್ಟಡ ಮುರಿದು ಹಾಕಿ, ಜಾಗ ಸ್ವಾಧೀನಕ್ಕೆ ಪಡೆದುಕೊಳ್ಳಲು ಇಲಾಖೆ ಮುಂದಾಗುತ್ತಿಲ್ಲ.

Advertisement

ತಾರಿಗುಡ್ಡೆ ಬಾಲವಾಡಿ ಸುತ್ತಮುತ್ತಲಿನ ನೂರಾರು ಮಕ್ಕಳ ವಿದ್ಯಾದೇಗುಲ. ಇಲ್ಲಿ ಮೂಲ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಇಂದು ದೊಡ್ಡ ಹುದ್ದೆಯಲ್ಲಿ ರಾರಾಜಿಸುತ್ತಿದ್ದಾರೆ. ಆದರೆ ಬಾಲವಾಡಿ ಮತ್ತದರ ಜಾಗ ಪಾಳು ಕೊಂಪೆಯಾಗಿ ಬದಲಾದದ್ದು
ಮಾತ್ರ ವಿಪರ್ಯಾಸ.

ನಿದ್ದೆಗೆಡಿಸಿರುವ ಅನೈತಿಕ ಅಡ್ಡೆ
ನಗರಸಭೆ ವ್ಯಾಪ್ತಿಯ ತಾರಿಗುಡ್ಡೆ, ಪುತ್ತೂರು ಪೇಟೆಯಿಂದ ಕೇವಲ 2 ಕಿಲೋಮೀಟರ್‌ ದೂರದಲ್ಲಿದೆ. ಇದು ನಿರ್ಜನ ಪ್ರದೇಶವಂತೂ ಅಲ್ಲ. ದಿನಂಪ್ರತಿ ನೂರಾರು ಮಂದಿ ಓಡಾಡುವ ಜನನಿಬಿಡ ಪ್ರದೇಶ.

ಉಪ್ಪಿನಂಗಡಿ, ಕಾಣಿಯೂರು, ಪುತ್ತೂರು ಹೀಗೆ ಪ್ರಮುಖ ರಸ್ತೆಗಳನ್ನು ಸಂಪರ್ಕಿಸುವ ಲಿಂಕ್‌ ರೋಡ್‌ ಕೂಡ ಹೌದು. ಇಂತಹ ರಸ್ತೆಯ ಪಕ್ಕದಲ್ಲಿರುವ ಸುಮಾರು 10 ಸೆಂಟ್ಸ್‌ ಜಾಗ ಸಮಾಜ ಕಲ್ಯಾಣ ಇಲಾಖೆಯ ಸೊತ್ತು. ಸದ್ಯದ ಸ್ಥಿತಿಯಲ್ಲಿ ಸ್ಥಳೀಯರ ನಿದ್ದೆಗೆಡಿಸಿರುವ ಅನೈತಿಕ ಅಡ್ಡೆ.

ಇಲಾಖೆ ಹೇಳುವುದೇನು ?
ತಾರಿಗುಡ್ಡೆಯ ಇಲಾಖೆಯ ಜಾಗದಲ್ಲಿರುವ ಕಟ್ಟಡವನ್ನು ಮುರಿದು ಹಾಕಲಾಗುವುದು. ಬಳಿಕ ಇಲ್ಲಿ ಕ್ವಾರ್ಟರ್ಸ್‌ಗಳನ್ನು
ನಿರ್ಮಿಸಿ, ಇಲಾಖೆ ಸಿಬಂದಿಗೆ ನೀಡುವ ಯೋಚನೆ ಇದೆ. ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎನ್ನುತ್ತಾರೆ. ಆದರೆ ಇದುವರೆಗೆ ಈ ಕಡತ ಜಿಲ್ಲಾ ಮಟ್ಟದ ಅಧಿಕಾರಿ ಬಳಿಯೇ ಧೂಳು ಹಿಡಿಯುತ್ತಿದೆ.

Advertisement

ಶಾಸಕಿಯೂ ಮೌನ
ಮಹಿಳಾ ಹೋರಾಟ ಮಾಡುತ್ತಲೇ ಇಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಹುದ್ದೆಗೆ ಏರಿರುವ ಶಾಸಕಿ ಶಕುಂತಳಾ ಶೆಟ್ಟಿ, ಈ ಹಿಂದೆ ಕಟ್ಟಡದ ಬಗ್ಗೆ ಅಧಿಕಾರಿಗಳ ಗಮನ ಸೆಳೆಯುವ ಭರವಸೆ ನೀಡಿದ್ದರು. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕೆಲವು ವರ್ಷಗಳ ಹಿಂದೆ ಪುತ್ತೂರಿನಲ್ಲಿ ದೊಡ್ಡ ಸುದ್ದಿಯಾಗಿದ್ದ ಅಕ್ಷತಾ ಕೊಲೆ ನಡೆದದ್ದು ಇದೇ ಬಾಲವಾಡಿ ಜಾಗದ ಪಕ್ಕದಲ್ಲೇ ಎನ್ನುವುದನ್ನು ಮರೆಯುವಂತಿಲ್ಲ

ನಿರ್ವಹಣೆ ಕೊರತೆಯಿಂದ ನೆಲಕಚ್ಚುವ ಭೀತಿ
ಬಾಲವಾಡಿ ಕೇಂದ್ರಗಳನ್ನು ಮುಚ್ಚಿದ ಬಳಿಕ ತಾರಿಗುಡ್ಡೆಯ ಬಾಲವಾಡಿ ಕಟ್ಟಡ ಅಂಗಾಳಮ್ಮ ಅವರ ವಾಸದ ಮನೆಯಾಗಿತ್ತು. ಕೆಲವು ವರ್ಷಗಳ ಬಳಿಕ ಇಲಾಖೆ ಅಧಿಕಾರಿಗಳು ಕಟ್ಟಡ ವನ್ನು ಸ್ವಾಧೀನಕ್ಕೆ ತೆಗೆದುಕೊಂಡರು. ಅಂಗಾಳಮ್ಮಅವರನ್ನು ಹೊರ ಹೋಗುವಂತೆ ಸೂಚಿಸಲಾಯಿತು. ಅಲ್ಲಿಗೇ ಈ ಕಟ್ಟಡ ಅಕ್ಷರಶಃ ಪಾಳು ಬಿದ್ದಿತು. ಕಟ್ಟಡದ ಸುತ್ತ ಪೊದೆ ಬೆಳೆದು ನಿಂತಿವೆ. ಕೆಲವು ತೆಂಗಿನಮರಗಳಿವೆ. ಕಟ್ಟಡ ಗಟ್ಟಿ ಮುಟ್ಟಾಗಿಯೇ ಇದೆ. ಒಂದಷ್ಟು ಹಂಚು ಕಿತ್ತು ಹೋಗಿವೆ. ಕಿಟಕಿ-ಬಾಗಿಲು ಮುರಿದು ಬಿದ್ದಿವೆ. ಆದರೆ ನಿರ್ವಹಣೆ ಕೊರತೆ ಯಿಂದ ನೆಲಕಚ್ಚುವ ಭೀತಿಯೂ ಇದೆ. ಪೊದೆ ಬೆಳೆದು ನಿಂತ ಕಾರಣಕ್ಕೆ ರಸ್ತೆಗೆ ಈ ಕಟ್ಟಡ ತತ್‌ಕ್ಷಣ ಕಂಡುಬರುವುದಿಲ್ಲ. ಆದ್ದರಿಂದ ಇದು ಅನ್ಯ ಚಟುವಟಿಕೆಗಳಿಗೆ ಹೇಳಿ ಮಾಡಿಸಿದ ತಾಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next