ಮೈಸೂರು: ಜನಾದೇಶವನ್ನು ಗಾಳಿಗೆ ತೂರಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೊಡಲಿಪೆಟ್ಟು ನೀಡುತ್ತಿರುವ ರಾಜಕೀಯ ಪಕ್ಷಗಳ ನಡೆ ಖಂಡಿಸಿ, ಪ್ರಜಾಪ್ರಭುತ್ವ, ಚುನಾವಣೆಯ ಅಸ್ತಿತ್ವ ಉಳಿಸುವಂತೆ ಒತ್ತಾಯಿಸಿ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಶುಕ್ರವಾರ ಅಗ್ರಹಾರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಚುನಾವಣೆಯಲ್ಲಿ ಮೂರು ಪಕ್ಷಗಳಿಗೂ ಸ್ಪಷ್ಟ ಬಹುಮತ ಲಭಿಸದ ಕಾರಣ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಆದರೆ ಮೂರೂ ರಾಜಕೀಯ ಪಕ್ಷಗಳು ಅಧಿಕಾರದ ಆಸೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿವೆ. ಅಲ್ಲದೆ ಚುನಾವಣಾ ಪೂರ್ವದಲ್ಲಿ ಪರಸ್ಪರ ಕೆಸರೆರೆಚಾಟ,
ವೈಯಕ್ತಿಕ ನಿಂದನೆ, ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದ ಕಾಂಗ್ರೆಸ್-ಜೆಡಿಎಸ್ ಇದೀಗ ಮೈತ್ರಿ ಸರ್ಕಾರ ರಚಿಸಲು ಹೊರಟಿದ್ದರೆ, ಬಿಜೆಪಿ ಬಹುಮತವಿಲ್ಲದಿದ್ದರೂ ಸರ್ಕಾರ ರಚನೆಗೆ ಮುಂದಾಗುವ ಮೂಲಕ ಜನಾದೇಶವನ್ನು ಧಿಕ್ಕರಿಸಿ ತಮಗಿಷ್ಟ ಬಂದಂತೆ ಸರ್ಕಾರ ರಚಿಸಲು ಮುಂದಾಗಿವೆ ಎಂದು ಧಿಕ್ಕಾರ ಕೂಗಿದರು.
ಮತದಾರರಿಗೆ ಅವಮಾನ: ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ದೊಂಬರಾಟವನ್ನು ನೋಡಿ ಸಾರ್ವಜನಿಕರು ಬೇಸತ್ತಿದ್ದು, ಕೂಡಲೇ ಬಹುಮತವಿರುವ ಪಕ್ಷ ಸರ್ಕಾರ ರಚನೆ ಮಾಡಿ ಈ ನಾಟಕಕ್ಕೆ ತೆರೆಎಳೆದು ಪ್ರಜಾಪ್ರಭುತ್ವವನ್ನು ಉಳಿಸಬೇಕಿದೆ. ರಾಜ್ಯದ ಪ್ರಜ್ಞಾವಂತ ಮತದಾರರ ತೀರ್ಪಿಗೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲದಂತಾಗಿದೆ.
ರಾಜಕೀಯ ಪಕ್ಷಗಳು ಮತದಾರರನ್ನು ಅವಮಾನಿಸುತ್ತಿವೆ. ಚುನಾವಣೆಗೂ ಮುನ್ನ ಒಂದು ನೀತಿ ಬಳಿಕ ಮತ್ತೂಂದು ನೀತಿ ಅನುಸರಿಸುವುದಾದರೆ ಮತದಾರರ ತೀರ್ಪಿಗೆ ಬೆಲೆ ಇಲ್ಲವೇ? ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದಲ್ಲಿ ಮತ್ತೆ ರೆಸಾರ್ಟ್ ಸಂಸ್ಕೃತಿ ಆರಂಭವಾಗಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ಬೇಸರಿಸಿದರು.
ಪ್ರತಿಭಟನೆಯಲ್ಲಿ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ನಾಲಾಬೀದಿ ರವಿ, ಗುರುಬಸಪ್ಪ, ಪ್ಯಾಲೇಸ್ ಬಾಬು, ರಾಧಾಕೃಷ್ಣ, ಬೋಗಾದಿ ಸಿದ್ದೇಗೌಡ, ಮಂಜುನಾಥ್, ಬೀಡಾಬಾಬು, ಸತೀಶ್, ಸ್ವಾಮಿಗೈಡ್, ಸುನೀಲ್‌ಕುಮಾರ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.