ಪಡುಬಿದ್ರಿ: ಎಲ್ಲೂರು ಗ್ರಾ. ಪಂ. ವ್ಯಾಪ್ತಿಗೆ ಒಳಪಟ್ಟಿರುವ ಉಳ್ಳೂರು ಗೋಮಾಳದಲ್ಲಿನ ಸುಮಾರು 34ಎಕ್ರೆ ವಿಸ್ತೀರ್ಣದ ಅಕೇಶಿಯಾ ಮರಗಳ ಕಾಡಿಗೆ ಕೊಂಕಣ ರೈಲ್ವೇಸ್ ಭಾಗದಿಂದ ಹರಡುತ್ತಾ ಬಂದಿದ್ದ ಬೆಂಕಿಯಿಂದಾಗಿ ಸುಮಾರು ಹತ್ತಾರು ಎಕ್ರೆ ಅರಣ್ಯದ ಮರಮಟ್ಟುಗಳು ನಾಶವಾಗಿವೆ.
ಕಳೆದ ಮೂರು ದಿನಗಳಿಂದ ಬೆಂಕಿ ಆವರಿಸಿಕೊಂಡಿದ್ದರೂ ಶುಕ್ರವಾರವಷ್ಟೇ ಅರಣ್ಯ ಅಧಿಕಾರಿಗಳು ವಿಳಂಬವಾಗಿ ಆಗಮಿಸಿದ್ದರಿಂದ ಗ್ರಾಮದ ಜನತೆ ಆತಂಕಕ್ಕೊಳಗಾಗಿದ್ದಾರೆ.
ಒಣಗಿದ ಅಕೇಶಿಯಾ ಮರದ ಕೊಂಬೆಗಳನ್ನು ಉರುವಲಿಗಾಗಿ ಹೊತ್ತೂಯ್ಯಲು ಗ್ರಾಮದ ಜನರು ಮುಂದಾದರೂ ತಡೆಯುವ ಅರಣ್ಯ ಸಿಬಂದಿಗೆ ಬೆಂಕಿ ಬಿದ್ದಿದ್ದೇ ಗೊತ್ತಾಗಿಲ್ಲ ಎಂದಿದ್ದಾರೆ. ಸಾಮಾನ್ಯವಾಗಿ ಬೇಸಗೆ ಯಲ್ಲಿ ಇಂತಹ ಬೆಂಕಿ ಅನಾಹುತಗಳು ಸಂಭವಿಸುತ್ತಿರುತ್ತವೆ. ಈ ಕಾಡಿನ ಸುತ್ತಮುತ್ತಲೂ ತಮ್ಮ ಅರಣ್ಯ ಪಾಲಕರು ಸುತ್ತಾಡುತ್ತಿದ್ದರೂ ಅವರಿಗೆ ಬೆಂಕಿ ಬಿದ್ದಿರುವ ಮಾಹಿತಿ ಇರಲಿಲ್ಲ. ಇಂದು ಬೆಳಿಗ್ಗೆಯಷ್ಟೇ ಗೊತ್ತಾಗಿದೆ ಎಂದು ಸ್ಥಳಕ್ಕೆ ಆಗಮಿಸಿದ್ದ ವಲಯ ಅರಣ್ಯಾಧಿಕಾರಿ ನಾಗೇಶ್ ಬಿಲ್ಲವ ಹೇಳಿದ್ದಾರೆ.
ಸ್ಥಳೀಯ ಗ್ರಾಮಸ§ರು ಒಗ್ಗೂಡಿ ಬೆಂಕಿಯನ್ನು ತಹಬಂದಿಗೆ ತರಲು ಕಳೆದೆರಡು ದಿನಗಳಿಂದ ಶ್ರಮಿಸಿದ್ದಾರೆ. ಅದಾನಿ ಸಮೂಹದ ಯುಪಿಸಿಎಲ್ ಸ್ಥಾವರದಲ್ಲಿನ ಅಗ್ನಿ ಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದ್ದು ಅವರ ಸಿಬಂದಿ ನಿನ್ನೆಯಿಂದಲೂ ಎರಡು ಮೂರು ಬಾರಿ ಉಳ್ಳೂರು ಕಾಡಿಗೆ ಆಗಮಿಸಿ ಬೆಂಕಿ ಆರಿಸಲು ಶ್ರಮಿಸುತ್ತಿದ್ದಾರೆ. ಸ್ಥಳೀಯ ಗುರುಗುಂಡಿ ಪ್ರದೇಶದ ನಿವಾಸಿಗಳಲ್ಲಿ ಈ ಕುರಿತಾಗಿ ಆತಂಕ ಮನೆ ಮಾಡಿದೆ. ಎಲ್ಲೂರು ಗ್ರಾ. ಪಂ. ಪಿಡಿಒ, ಕಾರ್ಯದರ್ಶಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ಪರಿಶೀಲಿಸಿದ್ದಾರೆ.