Advertisement

ಪಾಕ್‌ ಪ್ರವಾಹ ಮೊಹೆಂಜೊದಾರೋಗೆ ಹಾನಿ; ಇದು ವಿಶ್ವದ ಹಳೆಯ ನಾಗರಿಕತೆಯಲ್ಲಿ ಒಂದು

01:01 AM Sep 08, 2022 | Team Udayavani |

ವಿಶ್ವದ ಹಳೆಯ ನಾಗರಿಕತೆಯಲ್ಲಿ ಒಂದಾದ ಮೊಹೆ‌ಂಜೊದಾರೋ ತನ್ನ ಗತವೈಭವ ಕಳೆದುಕೊಳ್ಳುವ ಸನಿಹದಲ್ಲಿದೆ. ಪಾಕಿಸ್ಥಾನದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈ ಆತಂಕ ಉಂಟಾಗಿದೆ. ಮಳೆ ಪ್ರವಾಹದಿಂದಾಗಿ ಹಳೆಯ ನಾಗರಿಕತೆಯ ಕೆಲವು ಭಾಗಗಳಿಗೆ ಹಾನಿಯಾಗಿದೆ. ಇದರಿಂದ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣ ಎಂಬ ಖ್ಯಾತಿಯನ್ನು ಕಳೆದುಕೊಳ್ಳುವ ಆತಂಕ ಎದುರಾಗಿದೆ.

Advertisement

5,000 ವರ್ಷಗಳ ಇತಿಹಾಸ
ಮೊಹೆಂಜೊದಾರೋ ನಾಗರಿಕತೆಗೆ ಸುಮಾರು 5,000 ವರ್ಷಗಳ ಇತಿಹಾಸವಿದೆ. ಹರಪ್ಪ ಮತ್ತು ಮೊಹೆಂಜೊದಾರೋ ವಿಶ್ವದ ಪ್ರಥಮ ನಾಗರಿಕತೆ ಎಂಬ ಖ್ಯಾತಿಯನ್ನು ಪಡೆದಿದೆ. ಸಿಂಧೂ ನದಿ ತೀರದಲ್ಲಿ ಉಗಮವಾದ ಮೊಹೆಂಜೊದಾರೋ ನಾಗರಿಕತೆಯು, ಈಜಿಪ್ಟ್ ಮತ್ತು ಮೆಸಪೊಟೊಮಿಯಾ ನಾಗರಿಕತೆಗಿಂತ ಬಹಳ ಹಳೆಯದಾಗಿದೆ. ಈ ತಾಣವು ದಕ್ಷಿಣ ಏಷ್ಯಾದಲ್ಲಿ ಉತ್ತಮ ಸಂರಕ್ಷಿತ ವಸಾಹತುಗಳಲ್ಲಿ ಒಂದಾಗಿದೆ.

ಯಾವ ಭಾಗದಲ್ಲಿದೆ?
ಸದ್ಯ ಅದು ಪಾಕಿಸ್ಥಾನದ ಸಿಂಧ್‌ ಪ್ರಾಂತದಲ್ಲಿ ಇದೆ. ಸುಕ್ಕೂರ್‌ ನಗರದ ನೈಋತ್ಯಕ್ಕೆ 80 ಕಿ.ಮೀ. ದೂರದಲ್ಲಿ ಮೊಹೆಂಜೊದಾರೋ ಇದೆ. ಇನ್ನೊಂದು ಹಳೆಯ ನಾಗರಿಕತೆ ಯಾದ ಹರಪ್ಪಾ, ಇದು ಪಾಕಿಸ್ಥಾನದ ಪಂಜಾಬ್‌ ಪ್ರಾಂತದಲ್ಲಿ ವಾಯವ್ಯಕ್ಕೆ 640 ಕಿ.ಮೀ. ದೂರದಲ್ಲಿದೆ.

ನಗರ ಯೋಜನೆಗೆ ಹೆಸರುವಾಸಿ
ಈ ತಾಣವು ನಗರ ಯೋಜನೆಗೆ ಹೆಸರುವಾಸಿಯಾಗಿದೆ. ಇಟ್ಟಿಗೆಗಳಿಂದ ನಿರ್ಮಿಸಿರುವ ಪಾದಚಾರಿ ಮಾರ್ಗ, ಅಭಿವೃದ್ಧಿಪಡಿಸಲಾದ ನೀರು ಸರಬರಾಜು, ಒಳಚರಂಡಿ ಮತ್ತು ಮುಚ್ಚಿದ ಒಳಚರಂಡಿ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಸುಸಜ್ಜಿತ ಮನೆಗಳು ಸೇರಿವೆ.

ನಿರಂತರ ಮಳೆಯಿಂದ ಹಾನಿ
1922ರಲ್ಲಿ ಮೊದಲ ಬಾರಿಗೆ ಮೊಹೆಂಜೊದಾರೋ ನಾಗರಿಕತೆಯ ಪಳೆಯುಳಿಕೆಗಳನ್ನು ಗುರುತಿಸಲಾಯಿತು. ಹವಾಮಾನ ಬದಲಾವಣೆ ಮತ್ತು ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಿಶ್ವದ ಪಾರಂಪರಿಕ ತಾಣ ಮೊಹೆಂಜೊದಾರೋ ಹಾನಿಯ ಭೀತಿ ಎದುರಿಸುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next