Advertisement

ಟಿಪ್ಪುವಿನಿಂದ ರಾಜಮನೆತನಕ್ಕೆ ಹಾನಿ

06:00 AM Nov 15, 2018 | Team Udayavani |

ಬೆಳಗಾವಿ: “”ಟಿಪ್ಪು ಸುಲ್ತಾನ್‌ನಿಂದ ನಮ್ಮ ಕುಟುಂಬಕ್ಕೆ ತುಂಬಾ ತೊಂದರೆಯಾಗಿದೆ. ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸುತ್ತಿರುವುದಕ್ಕೆ ವೈಯಕ್ತಿಕವಾಗಿ ನಮ್ಮ ಬೆಂಬಲವಿಲ್ಲ” ಎಂದು ಮೈಸೂರಿನ ರಾಜಮಾತೆ ಪ್ರಮೋದಾದೇವಿ ಹೇಳಿದರು.

Advertisement

ನಗರದ ಕೆಎಲ್‌ಇ ಸಂಸ್ಥೆಯ ಫಿಸಿಯೋಥೆರಪಿ ವಿಭಾಗವನ್ನು ಬುಧವಾರ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “”ಒಂದು ಕುಟುಂಬಕ್ಕೆ ತೊಂದರೆ ಆದರೇನಂತೆ ಎಂಬ ಭಾವನೆಯಿಂದ ಸರ್ಕಾರ ನೋಡುತ್ತಿರಬಹುದು. ಯಾವ ಆಧಾರ ಇಟ್ಟುಕೊಂಡು ಜಯಂತಿ ಆಚರಣೆ ಎಂಬುದು ಗೊತ್ತಿಲ್ಲ. ವೈಯಕ್ತಿಕವಾಗಿ ಜಯಂತಿಯ ಪರವಾಗಿಯೂ ಇಲ್ಲ, ವಿರೋಧಕ್ಕೆ ಬೆಂಬಲವೂ ಇಲ್ಲ. ಈ ಬಗ್ಗೆ ಮಾತನಾಡುತ್ತ ಹೋದರೆ ಮನಸ್ಸಿಗೆ ನೋವಾಗುವುದೇ ಜಾಸ್ತಿ. ಹೀಗಾಗಿ, ದೂರವಿರುವುದೇ ಒಳ್ಳೆಯದು. ಟಿಪ್ಪು ಜಯಂತಿಯಂತೆ ಇನ್ನುಳಿದ ಸ್ವಾತಂತ್ರ್ಯವೀರರ, ಮಹಾನ್‌ ನಾಯಕರ ಜಯಂತಿ ಆಚರಿಸಲಿ ಎಂಬುದೇ ನಮ್ಮ ಆಶಯ” ಎಂದರು.

ರಾಜಕೀಯದ ಆಸಕ್ತಿ ಇಲ್ಲ:
ಇದೇ ವೇಳೆ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ ರಾಜಮಾತೆ ಪ್ರಮೋದಾದೇವಿ, “”ಚುನಾವಣೆಗೆ ಸ್ಪರ್ಧಿಸಬೇಕೆನ್ನುವ ಆಸಕ್ತಿ ಇಲ್ಲ. ಪುತ್ರ ಯದುವೀರ್‌ಗೂ ರಾಜಕೀಯ ಸೇರುವ ಆಸಕ್ತಿ ಇಲ್ಲ. ಮುಂದಿನ ದಿನಗಳಲ್ಲಿ ಮತ್ತೆ ಮನಸ್ಸು ಬದಲಾಯಿಸಿಬಹುದು, ಗೊತ್ತಿಲ್ಲ. ಪ್ರತಿ ಚುನಾವಣೆ ವೇಳೆಯಲ್ಲೂ ಎಲ್ಲ ಪಕ್ಷದವರೂ ಬಂದು ಭೇಟಿ ಆಗುತ್ತಾರೆ. ಸುಮಾರು 15 ವರ್ಷಗಳಿಂದ ನಮ್ಮನ್ನು ಸಂಪರ್ಕ ಮಾಡುತ್ತಿದ್ದಾರೆ. ನಮಗೆ ಆಸಕ್ತಿ ಇಲ್ಲವೆಂದು ಅರ್ಥ ಮಾಡಿಕೊಂಡು ಸುಮ್ಮನಾಗುತ್ತಾರೆ” ಎಂದು ಹೇಳಿದರು.

ಬಿಜೆಪಿ ಸೇರುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪಕ್ಕದಲ್ಲಿದ್ದ ರಾಜ್ಯಸಭಾ ಸದಸ್ಯ ಡಾ| ಪ್ರಭಾಕರ ಕೋರೆ ಪ್ರತಿಕ್ರಿಯಿಸಿ, ಸಮಯ ಬಂದಾಗ ನಾವೇ ಎಲ್ಲವನ್ನೂ ಹೇಳುತ್ತೇವೆ ಎಂದು ನಕ್ಕರು.

ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶದ ಬಗ್ಗೆ ಪ್ರತಿಕ್ರಿಯಿಸಿ, ಇದು ದೇವಸ್ಥಾನದ ನಂಬಿಕೆ ಹಾಗೂ ಪರಂಪರೆ ಮೇಲೆ ಅವಲಂಬಿತವಾಗಿರುತ್ತದೆ. ಮಹಿಳೆಯರಿಗೂ ಸಮಾನತೆಯ ಹಕ್ಕು ಇದೆ. ಧಾರ್ಮಿಕ ನಂಬಿಕೆಯ ವಿಚಾರವೂ ಇದಾಗಿದೆ. ನಮ್ಮ ಮನೆಯ ಪದ್ಧತಿ-ಪರಂಪರೆಯನ್ನು ಅನುಸರಿಸಿಕೊಂಡು ಹಿಂದಿನಿಂದಲೂ ಬರಲಾಗಿದೆ. ಹೀಗಾಗಿ, ಶಬರಿಮಲೆಗೆ ಹೋಗಬೇಕೋ, ಬೇಡವೋ ಎಂಬುದು ಅವರವರ ಭಾವಕ್ಕೆ ಬಿಟ್ಟಿದ್ದು ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next