ಕಾಪು: ವಾಡಿಕೆಗಿಂತ ಹೆಚ್ಚಾಗಿ ನಿರಂತರವಾಗಿ ಸುರಿದ ಭಾರೀ ಮಳೆಯಿಂದಾಗಿ ತಾಲೂಕಿನ ವಿವಿಧೆಡೆ ಭತ್ತದ ಗದ್ದೆಗಳಲ್ಲಿ ನೀರು ನಿಂತು ಅಪಾರ ಬೆಳೆ ಹಾನಿಯುಂಟಾಗಿರುವ ವಿವಿಧ ಗದ್ದೆಗಳಿಗೆ ತೆರಳಿ ಕೃಷಿ ಅಧಿಕಾರಿಗಳು ಹಾನಿ ಪರಿಶೀಲನೆ ನಡೆಸಿದ್ದಾರೆ. ಕಾಪು ತಾಲೂಕಿನಲ್ಲಿ ಈ ಬಾರಿ 2,800 ಹೆಕ್ಟೇರ್‌ನಷ್ಟು ಭತ್ತ ಬೆಳೆಯಲಾಗಿದ್ದು ಜೂನ್, ಜುಲೈ ತಿಂಗಳಲ್ಲಿ ಭಾರೀ ಮಳೆ ಸುರಿದು ಎರಡೆರಡು ಬಾರಿ ನೆರೆ ಉಂಟಾದ ಪರಿಣಾಮ ಈವರೆಗೆ ಸುಮಾರು 30 ಎಕರೆಯಷ್ಟು ಭತ್ತದ ಬೆಳೆ ಹಾನಿ ಅಂದಾಜಿಸಲಾಗಿದೆ. ಹಾನಿ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ.
ಮಾಹಿತಿ ನೀಡಿ
ಎರ್ಮಾಳು ತೆಂಕ, ಬಡಾ, ಶಿರ್ವ, ಮಜೂರು, ಗ್ರಾಮಗಳಲ್ಲಿ ಆಗಿರುವ ಭತ್ತದ ಬೆಳೆ ಹಾನಿಯನ್ನು ಈಗಾಗಲೇ ಪರಿಶೀಲಿಸಲಾಗಿದೆ. ಪಾದೆಬೆಟ್ಟು, ನಂದಿಕೂರು, ಕಟ್ಟಿಂಗೇರಿ ಭಾಗದಿಂದಲೂ ಅರ್ಜಿಗಳು ಬಂದಿದ್ದು ಸೋಮವಾರ ಕುಂಜೂರು ಪರಿಸರದಲ್ಲಿ ಪರಿಶೀಲನೆ ನಡೆಸಲಾಗಿದೆ. ಈವರೆಗೆ ಸುಮಾರು 30 ಎಕರೆ ಭತ್ತದ ಕೃಷಿ ಹಾನಿ ಅಂದಾಜಿಸಲಾಗಿದ್ದು ಮಳೆ ಇಳಿಮುಖವಾಗಿರುವುದರಿಂದ ಇನ್ನಷ್ಟು ಕಡೆಗಳಲ್ಲಿ ಭತ್ತದ ಕೃಷಿ ಹಾನಿ ಬಗ್ಗೆ ಮಾಹಿತಿ ಬರುತ್ತಿದೆ. ಭತ್ತದ ಕೃಷಿ ಹಾನಿ ಬಗ್ಗೆ ರೈತರು
ಮೊ: 8277929752ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕಾಪು ಹೋಬಳಿ ಕೃಷಿ ಅಧಿಕಾರಿ ಪುಷ್ಪಲತಾ ಅವರು ತಿಳಿಸಿದ್ದಾರೆ.
ಸುದಿನ ವರದಿ
ತಾಲೂಕಿನ ಇನ್ನಂಜೆ, ಪೊಲಿಪು, ಉಳಿಯಾರಗೋಳಿ, ಕೈಪುಂಜಾಲು, ಪಾಂಗಾಳ, ಮಲ್ಲಾರು, ಮೂಳೂರು, ಬೆಳಪು, ಮಜೂರು, ಕರಂದಾಡಿ, ಕುಂಜೂರು, ಅದಮಾರು, ಎರ್ಮಾಳು, ಪಾದೆಬೆಟ್ಟು, ನಂದಿಕೂರು, ಹೆಜಮಾಡಿ, ಕುತ್ಯಾರು, ಎಲ್ಲೂರು, ಕಳತ್ತೂರು, ಕುರ್ಕಾಲು, ಸುಭಾಸ್‌ನಗರ, ಶಿರ್ವ, ಮಣಿಪುರ, ಬೆಳ್ಳೆ, ಕಟ್ಟಿಂಗೇರಿ ಸಹಿತ ವಿವಿಧೆಡೆ ನೀರು ನಿಂತು ಭತ್ತದ ಕೃಷಿ ಕೊಳೆಯುತ್ತಿದ್ದು ಈ ಬಗ್ಗೆ ಆ. 11ರಂದು ಉದಯವಾಣಿ ಸುದಿನದಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ಎಲ್ಲೂರು ಗ್ರಾ. ಪಂ. ವ್ಯಾಪ್ತಿಯ ಕುಂಜೂರು ಬೈಲ್‌ಗೆ ಕಾಪು ಹೋಬಳಿ ಕೃಷಿ ಅಧಿಕಾರಿ ಪುಷ್ಪಲತಾ ಅವರು ಸೋಮವಾರ ಕಂದಾಯ ಇಲಾಖೆ ಸಿಬಂದಿ ಜತೆಗೂಡಿ ಭತ್ತದ ಕೃಷಿಗೆ ಆಗಿರುವ ಹಾನಿಯನ್ನು ಪರಿಶೀಲನೆ ನಡೆಸಿದರು.