Advertisement

ಹರೇಕಳದಲ್ಲಿ ಸೇತುವೆ ಸಹಿತ ಅಣೆಕಟ್ಟು

12:30 AM Feb 21, 2019 | Team Udayavani |

ಪುತ್ತೂರು: ಹರೇಕಳ – ಅಡ್ಯಾರ್‌ ನಡುವೆ ಸೇತುವೆ ಸಹಿತ ಅಣೆಕಟ್ಟು ನಿರ್ಮಾಣ ಯೋಜನೆಗೆ ಮಂಜೂರಾತಿ ದೊರಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ಕೆಲವು ಪ್ರದೇಶಗಳಿಗೆ ಇನ್ನೂ ಕೂಡ ಸರಿಯಾಗಿ ಕುಡಿಯುವ ನೀರು ದೊರಕುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹರೇಕಳ – ಅಡ್ಯಾರ್‌ ನಡುವೆ 200 ಕೋಟಿ ರೂ. ವೆಚ್ಚದಲ್ಲಿ ಸೇತುವೆ ಸಹಿತ ಅಣೆಕಟ್ಟು ನಿರ್ಮಿಸುವ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದಕ್ಕೆ ಮಂಜೂರಾತಿ ದೊರಕಿದೆ ಎಂದರು.

ಕುಡಿಯುವ ನೀರಿಗೆ 65 ಲಕ್ಷ ರೂ., ಒಳಚರಂಡಿ ವ್ಯವಸ್ಥೆಗೆ 125 ಕೋಟಿ ರೂ. ಅನುದಾನ ಇಡಲಾಗಿದೆ. ಕೆಲವು ಕಡೆಗಳಲ್ಲಿ ಜಾಗದ ಸಮಸ್ಯೆ ಆಗಿದ್ದರಿಂದ ಯೋಜನೆ ಹಿಂದಕ್ಕೆ ಬಿದ್ದಿತ್ತು. ಆದ್ದರಿಂದ ಮುಂದೆ ಯೋಜನೆ ಜಾರಿ ಮಾಡುವ ವೇಳೆ, ಭೂಸ್ವಾಧೀನ ಮಾಡಿಕೊಂಡೇ ಮುಂದುವರಿಯಲು ಸೂಚನೆ ನೀಡಲಾಗಿದೆ ಎಂದರು.

ರಾಜ್ಯದ ಸಮ್ಮಿಶ್ರ ಸರಕಾರ ಉತ್ತಮ ಕೆಲಸ ನಿರ್ವಹಿಸುತ್ತಿದೆ. ಬಿಜೆಪಿ ಅಭದ್ರಗೊಳಿಸುವ ಪ್ರಯತ್ನ ನಡೆಸಿದೆಯಾದರೂ ಫಲಕೊಡಲಿಲ್ಲ. ಸಮ್ಮಿಶ್ರ ಸರಕಾರವನ್ನು ಉರುಳಿಸುವ ಹಿನ್ನೆಲೆಯಲ್ಲಿ ನರೇಂದ್ರ ಮೋದಿ, ಅಮಿತ್‌ ಶಾ ಸಂಚು ರೂಪಿಸಿದ್ದರು. ಬಜೆಟ್‌ ಸಂದರ್ಭ ಬಿಜೆಪಿಗರು ಗಲಾಟೆ ಮಾಡಿದರು. ಆದರೆ ಇತಿಹಾಸದಲ್ಲೇ ಮೊದಲ ಬಾರಿಗೆ ಯಾವುದೇ ಚರ್ಚೆ ಇಲ್ಲದೇ ಬಜೆಟ್‌ಗೆ ಅನುಮೋದನೆಗೊಂಡಿದೆ. ಸಮ್ಮಿಶ್ರ ಸರಕಾರ ನಿಶ್ಚಿತವಾಗಿ 5 ವರ್ಷ ಆಡಳಿತ ನಡೆಸುತ್ತದೆ ಎಂದರು.

ಭದ್ರತೆ: ರಾಜಕೀಯ ಇಲ್ಲ
ಪುಲ್ವಾಮಾದಲ್ಲಿ ಉಗ್ರರು ನಡೆಸಿದ ಕೃತ್ಯ ಖಂಡನೀಯ. ಇದಕ್ಕೆ ಭಾರತ ತಿರುಗೇಟು ನೀಡಲೇಬೇಕು. ಈ ವಿಚಾರದಲ್ಲಿ ಕೇಂದ್ರದ ಜತೆ ನಾವಿದ್ದೇವೆ. 300 ಕೆಜಿಯಷ್ಟು ಆರ್‌ಡಿಎಕ್ಸ್‌ ಗಡಿ ದಾಟಿ ಬಂದದ್ದಾದರೂ ಹೇಗೆ ಎನ್ನುವುದರ ಬಗ್ಗೆ ತನಿಖೆ ಆಗಬೇಕು ಎಂದೂ ಒತ್ತಾಯಿಸಿದರು.

Advertisement

ಅಧಿಕಾರಕ್ಕೆ ಬಂದರೆ ನೆರೆಹೊರೆ ದೇಶಗಳನ್ನು ಹದ್ದುಬಸ್ತಿನಲ್ಲಿ ಇಡುತ್ತೇನೆ ಎಂದಿದ್ದ ನರೇಂದ್ರ ಮೋದಿ, ಈಗ ಮೌನವಾಗಿದ್ದಾರೆ. ಪಾಕಿಸ್ಥಾನ, ಚೀನ ವನ್ನು ಹದ್ದುಬಸ್ತಿನಲ್ಲಿಡಲು ಯಾಕೆ ಸಾಧ್ಯವಾಗುತ್ತಿಲ್ಲ. ಮನಮೋಹನ್‌ ಸಿಂಗ್‌ ಮೌನವಾಗಿದ್ದಾರೆ ಎನ್ನುತ್ತಿದ್ದರೇ ಈಗ ಮೌನಕ್ಕೆ ಶರಣಾಗಿದ್ದಾರೆ. ಕಳೆದ 4 ವರ್ಷದಲ್ಲಿ ಕೇಂದ್ರದ ಆಡಳಿತ ವಿಫಲವಾಗಿದೆ. ಕೊಟ್ಟ ಮಾತು ಉಳಿಸಿ ಕೊಂಡಿಲ್ಲ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next