Advertisement

60 ದಿನದಿಂದ ಹರಿಯುತ್ತಿದೆ ಪಾಲಾರ್‌ ಕೆರೆ ನೀರು

03:42 PM Dec 14, 2021 | Team Udayavani |

ಬೇತಮಂಗಲ: ಜಿಲ್ಲೆಯಲ್ಲೇ 2ನೇ ಅತಿ ದೊಡ್ಡ ಕೆರೆ ಬೇತಮಂಗಲದ ಪಾಲಾರ್‌ ಕೆರೆಯು ಸತತ 60 ದಿನದಿಂದ ತುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸಿದೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯಾಪ್ತಿಗೆ ಬರುವ ಈ ಕೆರೆಯನ್ನು ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿತ್ತು.

Advertisement

ಈ ಕೆರೆಗೆ 2 ಕೋಡಿ ಇದ್ದು, ಒಂದು ಕಡೆ 34 ಕ್ರಿಸ್‌ಗೇಟ್‌ಗಳ ಮೂಲಕ ನೀರು ಹರಿಯುತ್ತಿದೆ. ಈ ದೃಶ್ಯವು ಕೆಆರ್‌ ಎಸ್‌ ಡ್ಯಾಂ ಅನ್ನು ನೆನಪಿಸುತ್ತದೆ. ಹೊಯ್ಸಳರ ಕಾಲ ದಿಂದಲೂ ತಮಿಳುನಾಡಿಗೆ ಹರಿದು ಹೋಗುತ್ತಿರುವ ಪಾಲಾರ್‌ ನದಿ ನೀರಿಗೆ ಏರಿ ನಿರ್ಮಾಣ ಮಾಡಿ ವ್ಯವಸಾಯಕ್ಕೆ ನೀರನ್ನು ಉಪಯೋಗಿಸಲಾಗುತ್ತಿತ್ತು.

ನಂತರ ಬ್ರಿಟಿಷರು ಕೆಜಿಎಫ್ನ ಚಿನ್ನ ಗಣಿ ಆರಂಭಿಸಿದ ನಂತರ ದೊಡ್ಡ ಕೆರೆ ಏರಿ ಎತ್ತರಿಸಿ ಬೇತಮಂಗಲ, ಕೆಜಿಎಫ್ ನಗರಕ್ಕೆ ಆಗಿನ ಜನಸಂಖ್ಯೆಗೆ ಅನುಗುಣವಾಗಿ 40 ವರ್ಷದ ಲೆಕ್ಕಾಚಾರದಲ್ಲಿ ಮತ್ತು ಬಿಜಿಎಂಎಲ್‌ ಕಂಪನಿಗೆ ನೀರು ಪೂರೈಸಲಾಗುತ್ತಿದೆ. ಈವರೆಗೂ ಕೆರೆಗೆ ಯಾವುದೇ ಕಲುಷಿತ, ಚರಂಡಿ ನೀರು ಸೇರುತ್ತಿಲ್ಲ, ಅಲ್ಲದೆ, ನಂದಿಬೆಟ್ಟ ತಪ್ಪಲಿನಲ್ಲಿ ಬೀಳುವ ಮಳೆಯ ನೀರು ದೊಡ್ಡ ಮುದವಾಡಿ, ಹೊಳಳಿ, ಹಲವು ಕೆರೆಗಳು ತುಂಬಿ ಹರಿದು ಬರುತ್ತದೆ.

10 ವರ್ಷಗಳಿಂದ ಸರಿಯಾಗಿ ಮಳೆ ಬಾರದೆ ಕೆರೆ ಬತ್ತಿ ಹೋಗಿತ್ತು. 2017ರಲ್ಲಿ ಉತ್ತಮ ಮಳೆಯಾಗಿ ಸ್ವಲ್ಪ ದಿನ ಕೋಡಿ ಹರಿದಿತ್ತು. ಕೆರೆ, ಕಾಲುವೆ ಒತ್ತುವರಿ: ಬೇತಮಂಗಲದ ದೊಡ್ಡ ಕೆರೆಗೆ ನಂದಿ ಬೆಟ್ಟದಿಂದ ನೀರು ಹರಿದು ಬರುತ್ತಿದ್ದು. ಇದ್ದ ರಾಜಕಾಲುವೆ ಮುಚ್ಚಿ, ಮರಳು ದಂಧೆ ಕೋರರು ಕೆರೆಯಲ್ಲಿ ಗುಂಡಿ ತೋಡಿದ್ದಾರೆ. ಕೆರೆಗೆ ಬರುತ್ತಿದ್ದ ಅಲ್ಪ-ಸ್ವಲ್ಪ ನೀರು ಸಹ ಬರದಂತೆ ಮಾಡ ಲಾಗಿದೆ. ಬೇತಮಂಗಲ ದೊಡ್ಡಕೆರೆ ವಿಸ್ತೀರ್ಣ 1,132.08 ಎಕರೆ ಇದೆ.

ಸುತ್ತ-ಮುತ್ತ ನೀಲಗಿರಿ ತೋಪು ಬೆಳೆಸಿ ಒತ್ತುವರಿ ಮಾಡಲಾಗಿದೆ. ಶಾಸಕಿ ರೂಪಕಲಾ ಶ್ರಮ: ಶಾಸಕಿ ಎಂ.ರೂಪಕಲಾ ತಮ್ಮ ಸ್ವಂತ ಹಣದಿಂದ ಬೆಮೆಲ್‌ ಸಹಯೋಗ ದೊಂದಿಗೆ ಕೈಜೋಡಿಸಿ ಕೆರೆಯಲ್ಲಿ ಬೆಳೆದಿದ್ದ ಗಿಡಗಂಟಿ ತೆರವುಗೊಳಿಸಿ ಸ್ವಲ್ಪ ಮಟ್ಟಿಗೆ ನೀರು ಶೇಖರಣೆ ಆಗಲು ಸಹಕಾರಿ ಆಯಿತು. ಆದರೆ, ಹೂಳು ತೆಗೆಯಲಿಲ್ಲ.

Advertisement

2017ರಲ್ಲಿ ಕೋಡಿ ಹರಿದಿದ್ದ ಪಾಲಾರ್‌ ಕೆರೆ ಮತ್ತೆ 2012ರಲ್ಲಿ ಕೋಡಿ ಹರಿಯುತ್ತಿದೆ. ಈ ಮನೋಹರ ದೃಶ್ಯ ನೋಡಲು ಆಂಧ್ರ, ತಮಿಳುನಾಡಿನಿಂದಲೂ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಈ ಕೆರೆಯಿಂದ ಜಿಲ್ಲೆಯ ಅತಿ ದೊಡ್ಡ ಕೆರೆ ರಾಮಸಾಗರಕ್ಕೆ ನೀರು ಹರಿಯುತ್ತಿದೆ. ಈ ಕೆರೆಯೂ ಕೋಡಿ ಹರಿದು ತಮಿಳುನಾಡು ಸೇರುತ್ತಿದೆ.

ಕಾಯಿಲೆ ಬರುವ ಆತಂಕ: ಸರ್ಕಾರವು ಕೆ.ಸಿ. ವ್ಯಾಲಿ ನೀರು ಹರಿಸುವ ಬಗ್ಗೆ ಪ್ರಸ್ತಾವನೆ ಇತ್ತು. ಆದರೆ, ಕೆ.ಸಿ. ವ್ಯಾಲಿ ಕೆರೆಗೆ ಬರುವ ವೇಳೆಗೆ ಹೆಚ್ಚು ಮಳೆ ನೀರಿನಿಂದಲೇ ಕೆರೆ ತುಂಬಿ ತುಳುಕುತ್ತಿದೆ. ಆದರೆ, ಜಿಲ್ಲೆಯ ಎಲ್ಲಾ ಕೆರೆಗಳು ತುಂಬಿದ ಹಿನ್ನೆಲೆ ಕೆ.ಸಿ. ವ್ಯಾಲಿ ನೀರು ಸಹ ಈ ಮಳೆ ನೀರಿಗೆ ಸೇರಿ ಕೊಂಡಿದೆ. ಇದರಿಂದ ಜನರಿಗೆ ಆತಂಕ ಶುರು ವಾಗಿದೆ.

ಮಳೆ ನೀರಿನ ಜೊತೆ ಬೆಂಗಳೂರಿನಿಂದ ಸಂಸ್ಕರಿಸಿದ ನೀರು ಬರುತ್ತಿರುವ ಕಾರಣ, ನೀರು ಕುಡಿದರೆ ಎಲ್ಲಿ ಕಾಯಿಲೆ ಬರುತ್ತದೋ ಎಂಬ ಆತಂಕ ಅವರನ್ನು ಕಾಡುತ್ತಿದೆ. ಕೆ.ಸಿ.ವ್ಯಾಲಿ ನೀರು ಹರಿಸುವ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. 2 ಬಾರಿ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಪರೀಕ್ಷೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಕೊಳಚೆ ನೀರನ್ನು 3 ನೇ ಹಂತದಲ್ಲಿ ಸಂಸ್ಕರಣೆ ಮಾಡಿದರೆ ಒಳ್ಳೆಯದು. ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ●ಶಿವಕುಮಾರ್‌, ಸಹಾಯಕ ಅಭಿಯಂತರರು, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೇತಮಂಗಲ ವಿಭಾಗ

ಜನಸಂಖ್ಯೆಗೆ ಅನುಗುಣವಾಗಿ ನೀರು ಪೂರೈಕೆ ಆಗುತ್ತಿಲ್ಲ ಈ ಕೆರೆಯಿಂದ ಕೆಜಿಎಫ್, ಬೇತಮಂಗಲ ಗ್ರಾಮದ ಜನರಿಗೆ ಕುಡಿಯುವ ನೀರು ದೊರೆ ಯುತ್ತಿದೆ. ಈ ಕೆರೆ ನಿರ್ಮಾಣವಾದ ಸಮಯದಲ್ಲಿ ಕೆಜಿಎಫ್ ಜನಸಂಖ್ಯೆ 40 ಸಾವಿರ, ಬೇತಮಂಗಲ ಜನಸಂಖ್ಯೆ ಕೇವಲ 1 ಸಾವಿರ ಇತ್ತು.

ಪ್ರಸ್ತುತ 2011ರ ಜನಗಣತಿ ಪ್ರಕಾರ ಕೆಜಿಎಫ್ ಜನಸಂಖ್ಯೆ 1.5 ಲಕ್ಷ, ಬೇತಮಂಗಲ ಜನಸಂಖ್ಯೆ 15 ರಿಂದ 18 ಸಾವಿರಕ್ಕೆ ಏರಿದೆ. ಆದರೆ, ಬ್ರಿಟಿಷರ ಕಾಲದಲ್ಲಿ ಹಾಕಿದ ಪೈಪ್‌ಲೈನ್‌ ಶಿಥಿಲಗೊಂಡಿದ್ದು, ಕೆಜಿಎಫ್ನ ಕೆಲವೇ ಭಾಗಕ್ಕೆ ಮಾತ್ರ ನೀರು ಪೂರೈಕೆ ಮಾಡಬಹುದಾಗಿದೆ.

ಈ ಬಗ್ಗೆ ಅನೇಕ ಬಾರಿ ಮಾಧ್ಯಮಗಳಲ್ಲಿ ವರದಿ ಮಾಡಿದ ಹಿನ್ನೆಲೆ ಅಮೃತ್‌ ಸಿಟಿ ಯೋಜನೆಯ ಮೂಲಕ ಕೆ.ಸಿ. ವ್ಯಾಲಿ ನೀರು ಸರಬರಾಜು ಮಾಡಲು ಬೃಹತ್‌ ಪೈಪ್‌ಲೈನ್‌ ಅಳವಡಿಸ ಲಾಗುತ್ತಿದೆ. ಈ ಯೋಜನೆ ಯಲ್ಲಿ ಕೋಟ್ಯಂತರ ರೂ. ಅನುದಾನ ದುರ್ಬಳಕೆ ಯಾಗಿದೆ. ಈ ಬಗ್ಗೆ ಅಧಿಕಾರಿಗಳು ಕೇಳಿದರೆ ಕೆಜಿಎಫ್ಗೆ ಕೆ.ಸಿ. ವ್ಯಾಲಿ ನೀರು ಸರಬರಾಜು ಮಾಡುವ ಬಗ್ಗೆ ಗೊತ್ತಿಲ್ಲ ಎಂಬ ಉಡಾಫೆ ಉತ್ತರ ನೀಡುತ್ತಾರೆ ಹೊರತು, ಬೃಹತ್‌ ಪೈಪ್‌ಲೈನ್‌ ಅಳವಡಿಕೆ ಬಗ್ಗೆ ಉತ್ತರ ನೀಡುತ್ತಿಲ್ಲ

– ಆರ್‌.ಪುರುಷೋತ್ತಮ ರೆಡಿ

Advertisement

Udayavani is now on Telegram. Click here to join our channel and stay updated with the latest news.

Next