Advertisement

ಸಂವಿಧಾನ ತಿದ್ದುಪಡಿಯಿಂದ ದಲಿತರ ಸಮಾಧಿ

12:46 PM Apr 04, 2017 | Team Udayavani |

ಕಲಬುರಗಿ: ದೇಶದ ಸಂವಿಧಾನ ತಿದ್ದುಪಡಿ ಮಾಡುವುದರಿಂದ ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಆಶಯ ಸಮಾಧಿ ಮಾಡಿದಂತೆ ಎಂದು ದಲಿತ ಸ್ವಾಭಿಮಾನಿ ಸಂಘರ್ಷ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಬಾಬಾಸಾಹೇಬ ಅಂಬೇಡ್ಕರ್‌ ಮೊಮ್ಮಗ ಪ್ರಕಾಶ ಅಂಬೇಡ್ಕರ್‌ ಹೇಳಿದರು. 

Advertisement

ಸೋಮವಾರ ನಗರದ ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ದಲಿತ ಸ್ವಾಭಿಮಾನಿ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ವಿಭಾಗ ಮಟ್ಟದ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಇವತ್ತಿನ ತುರ್ತು ದಿನಗಳಲ್ಲಿ ಸಂವಿಧಾನ ರಕ್ಷಣೆ ಮಾಡಬೇಕಾದ ಹೊಣೆ ಹೊರಬೇಕಿದೆ.

ದೇಶದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಹಾಗೂ ಆರ್‌ಎಸ್‌ಎಸ್‌, ವಿಎಚ್‌ಪಿಯ ಜನ ನಿರಂತರ ಒತ್ತಡ ಹೇರಿ ಸಂವಿಧಾನ ಅದರಲ್ಲೂ ಮೀಸಲಾತಿ ವಿಧೇಯಕ ತಿದ್ದುಪಡಿ ಮಾಡಲು ಒಳ ಪ್ರಯತ್ನ ಮಾಡುತ್ತಿದ್ದಾರೆ. ಸುಮ್ಮನಿದ್ದರೆ ಮೀಸಲಾತಿ ತೆಗೆದು ಹಾಕುತ್ತಾರೆ. ಇದರಿಂದ ದಲಿತರ ಸಮಾಧಿ ಖಂಡಿತ ಆಗುತ್ತದೆ.

ಆದ್ದರಿಂದ ಒಗ್ಗಟ್ಟಿನ ಹೋರಾಟ ಅನಿವಾರ್ಯ ಎಂದರು. ಒಳ್ಳೆಯ ಸಂವಿಧಾನ ಇದ್ದರೂ ಅದರ ಆಶಯ ಈಡೇರಿಸುವ ಬದಲು ಅದನ್ನು ತಿದ್ದುಪಡಿ ಮಾಡಿ ತಮಗೆ ಬೇಕಾದಂತೆ ರಚನೆ ಮಾಡಲು ಹೊರಟಿದ್ದಾರೆ. ಇದು ಅಪಾಯದ ಸಂಕೇತ. ಸುಮ್ಮನಿದ್ದರೆ ದಲಿತರಾಧಿಯಾಗಿ ಹಿಂದುಳಿದವರು, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ  ಹೆಚ್ಚಾಗುತ್ತದೆಯೇ ವಿನಃ ಕಡಿಮೆಯಾಗುವುದಿಲ್ಲ ಎಂದು ಹೇಳಿದರು. 

ನೋಟು ರದ್ದತಿಯಿಂದ ಕೆಳವರ್ಗದ ಜನರು ದೊಡ್ಡ ಸಂಘರ್ಷ ಎದುರಿಸಿದರು, ಸರದಿ ಸಾಲಿನಲ್ಲಿ ನಿಂತು ಕೆಲವರು ಸತ್ತು ಹೋದರು. ಇವತ್ತು ಭ್ರಷ್ಟಾಚಾರ ನಿರ್ಮೂಲನೆಗೆ ಹೆಚ್ಚಿನ ಆದ್ಯತೆ ನೀಡಿ ತೊಲಗಿಸಬೇಕಿದೆ. ಇಲ್ಲದಿದ್ದರೆ ಸಂವಿಧಾನದ ಮೂಲ ಆಶಯ ಈಡೇರುವುದಿಲ್ಲ ಎಂದರು. 

Advertisement

ಸಾಹಿತಿ ಹಾಗೂ ಪತ್ರಕರ್ತ ರಂಜಾನ್‌ದರ್ಗಾ ಮಾತನಾಡಿ, ಇವತ್ತು ದೇಶ ಧಾರ್ಮಿಕ ಒಳ ಸಂಘರ್ಷಕ್ಕೆ ತುತ್ತಾಗಿದೆ. ಸಂವಿಧಾನವನ್ನು ಸಂಘ ಪರಿವಾರಗಳು ಹಾಗೂ ಬಿಜೆಪಿಯವರು ಟೊಳ್ಳು ಮಾಡಲು ಹೊರಟು ನಿಂತಿದ್ದಾರೆ. ಪ್ರಜಾಪ್ರಭುತ್ವ ಭಾರತದಲ್ಲಿ ಉಳಿಯಬೇಕಾದರೆ ಸಂವಿಧಾನ ತಿದ್ದುಪಡಿ ಬೇಡ.

ಅಚ್ಚರಿ ಎಂದರೆ ಒಳಗೊಳಗಿನ ಸೇಡಿನಿಂದ ದಲಿತರು ಬಿಜೆಪಿಯನ್ನು ಬೆಂಬಲಿಸುತ್ತಿರುವುದು ದುರಂತ. ಯಾರು ಬಸವಣ್ಣ ಮತ್ತು ಅಂಬೇಡ್ಕರ್‌ ಅವರನ್ನು ನಂಬುತ್ತಿರೋ, ಅವರ ಆದರ್ಶಗಳನ್ನು ಇಷ್ಟಪಡುತ್ತಿರೋ ಅವರು ಸಂವಿಧಾನ ತಿದ್ದುಪಡಿಗೆ ವಿರೋಧಿಸಬೇಕು ಎಂದು ಕರೆ ನೀಡಿದರು.

ಹಿರಿಯ ಪ್ರಾಧ್ಯಾಪಕಿ ಡಾ| ಶಿವಗಂಗಮ್ಮ ರುಮ್ಮಾ ಮಾತನಾಡಿ, ಸಂವಿಧಾನದ ತಿದ್ದುಪಡಿ ತರಲು ಹೊರಟಿರುವ ಸರಕಾರ, ಕೂಡಲೇ ಖಾಸಗಿ ಆಸ್ತಿ ಮಿತಿ ಹೇರುವ ಕಾನೂನು ಜಾರಿಗೆ ತರಲಿ. ಇಂತಿಷ್ಟು ಆದಾಯದ ಗಳಿಕೆ ನಂತರ ಹೆಚ್ಚಿನದ್ದೆಲ್ಲಾ ಸರಕಾರಕ್ಕೆ ಸಲ್ಲುತ್ತದೆ ಎನ್ನುವ ನಿಯಮದಿಂದ ಮಾತ್ರವೇ ಭ್ರಷ್ಟಾಚಾರ ಹಾಗೂ ಬಡತನ ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ. 

ಇಲ್ಲದಿದ್ದರೆ ಬಡವರು ಬಡವರಾಗೆ, ಸಿರಿವಂತರೂ ಸಿರಿವಂತರಾಗೇ ಮತ್ತು ಲೂಟಿ ಮಾಡುವವರು ನಿರಂತರವಾಗಿ ಲೂಟಿ ಮಾಡುತ್ತಲೇ ಇರುತ್ತಾರೆ ಎಂದರು. ಅಧ್ಯಕ್ಷತೆವಹಿಸಿದ್ದ ಜಿಲ್ಲಾ ಸಂಚಾಲಕ ಡಾ| ವಿಠuಲ ದೊಡ್ಡಮನಿ ಮಾತನಾಡಿ, ದಲಿತರ ಸೌಖ್ಯದ ಬಗ್ಗೆ ಮಾತನಾಡುವವರು ಒಮ್ಮೆ ಹೊಲಗೇರಿಗಳಿಗೆ ಬಂದು ನೋಡಿ. ನಮ್ಮ ಬದುಕು ಹಾಗೂ ನಿಮ್ಮ ಭರವಸೆ ಹೇಗಿದೆ ಎನ್ನುವುದು ಅರ್ಥವಾಗುತ್ತದೆ. ಭಾಷಣಗಳಿಂದ ನಮ್ಮನ್ನು ನಂಬಿಸಿ ನಮ್ಮ ಬದುಕನ್ನು ಮತ್ತೂಮ್ಮೆ ಹಾಳು ಮಾಡಬೇಡಿ ಎಂದು ಮನವಿ ಮಾಡಿದರು.  

Advertisement

Udayavani is now on Telegram. Click here to join our channel and stay updated with the latest news.

Next