ಬೆಂಗಳೂರು: ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ದಲಿತರನ್ನು ಸ್ವಾರ್ಥಕ್ಕಾಗಿಯಷ್ಟೇ ಬಳಸಿಕೊಳ್ಳುತ್ತಿದೆ, ಈ ಬಗ್ಗೆ ದೇಶದ ಇಡೀ ದಲಿತ ಸಮುದಾಯ ಎಚ್ಚರಗೊಳ್ಳಬೇಕಿದೆ ಎಂದು ರೋಹಿತ್ ವೇಮುಲ ತಾಯಿ ರಾಧಿಕಾ ವೇಮುಲ ಹೇಳಿದ್ದಾರೆ.
ಬಹುಜನ ವಿದ್ಯಾರ್ಥಿ ಸಂಘ (ಬಿವಿಎಸ್)ದ ವತಿಯಿಂದ ಶನಿವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ “ಪ್ರಜಾಪ್ರಭುತ್ವದ ಉಳಿವಿಗಾಗಿ ಮೀಸಲಾತಿ ಉಳಿಸೋಣ’ ಘೋಷವಾಕ್ಯದಡಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ವಿದ್ಯಾರ್ಥಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು ದಲಿತರು ದೇಶದ ದೊಡ್ಡ ಶಕ್ತಿ. ಆದರೆ, ದಲಿತರನ್ನು ಒಡೆದು ಆಳುವಿಕೆ ಮೊದಲಿಂದಲೂ ನಡೆಯುತ್ತಿದೆ. ದಲಿತ ನಾಯಕರನ್ನು ವಿಭಜಿಸಿ ದಲಿತ ಶಕ್ತಿಯನ್ನು ಛಿದ್ರಗೊಳಿಸಲಾಗಿದೆ.
ಆ ಮೂಲಕ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ದಲಿತರನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದೆ. ಇದು ಪ್ರತಿಯೊಬ್ಬ ದಲಿತನಿಗೂ ಅರ್ಥವಾಗಬೇಕಿದೆ ಎಂದು ಹೇಳಿದರು. ದಲಿತರು ಡಾ. ಬಿ.ಆರ್.ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಚಾಚೂತಪ್ಪದೆ ಪಾಲಿಸಬೇಕು. ಅದರಿಂದ ದಲಿತರು ದೇಶದ ಚುಕ್ಕಾಣಿ ಹಿಡಿಯುಲು ಸಾಧ್ಯವಾಗಲಿದೆ. ದಲಿತರಿಗೆ ಅಧಿಕಾರ ಸಿಕ್ಕಾಗ ಮಾತ್ರ ಅವರ ಅಭಿವೃದ್ಧಿ ಸಾಧ್ಯ. ಇದಕ್ಕಾಗಿ ಹರಿದು ಹಂಚಿ ಹೋಗಿರುವ ದಲಿತರು ಒಟ್ಟಾಗಿ ಹೋರಾಟಕ್ಕೆ ಇಳಿಯಬೇಕಿದೆ ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್ ಮಾತನಾಡಿ, “ಕೇಂದ್ರ ಸರ್ಕಾರ ಮೀಸಲಾತಿ ರದ್ದುಪಡಿಸುವ ಹುನ್ನಾರ ನಡೆಸುತ್ತಿದೆ. ಹಾಗೇನಾದರೂ ಆದರೆ ಮತ್ತೆ ಈ ದೇಶದ ದಲಿತರು, ಪರಿಶಿಷ್ಟರು, ಹಿಂದುಳಿದ ವರ್ಗಗಳು ದಾಸ್ಯಕ್ಕೆ ನೂಕಲ್ಪಡುತ್ತವೆ. ಮೇಲ್ಪಂಗ್ತಿಯ ಕೆಲವೇ ಸಮುದಾಯಗಳು ದೇಶದ ಅಧಿಕಾರ ಹಿಡಿದು ಉಳಿದವರ ಮೇಲೆ ಸವಾರಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದಕ್ಕೆ ಎಂದೂ ಅವಕಾಶ ನೀಡಬಾರದು. ದಲಿತರೂ ಸೇರಿದಂತೆ ಅವಕಾಶ ವಂಚಿತ ಎಲ್ಲ ಸಮುದಾಯಗಳೂ ಒಗ್ಗಟ್ಟಾಗಿ ಮೀಸಲಾತಿ ಉಳಿವಿಗಾಗಿ ಹೋರಾಟ ನಡೆಸಬೇಕಿದೆ,” ಎಂದು ಹೇಳಿದರು.
ಬಿವಿಎಸ್ ಮುಖಂಡ ಡಾ.ಶಿವಕುಮಾರ್ ಮಾತನಾಡಿ, “”ಬಡ್ತಿ ವಿಚಾರದಲ್ಲಿ ಮೀಸಲಾತಿ ರದ್ದುಪಡಿಸಿರುವ ಸುಪ್ರೀಂ ಕೋರ್ಟ್ ಆದೇಶದಿಂದ ದಲಿತ ನೌಕರರಿಗೆ ಅನ್ಯಾಯವಾಗುತ್ತಿದೆ. ಭಾಷಣಗಳಲ್ಲಿ ದಲಿತ, ಅಹಿಂದ ಪರ ಎನ್ನುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಈ ವಿಚಾರವಾಗಿ ಸಮರ್ಥವಾದ ಮಂಡಿಸುವಲ್ಲಿ ವಿಫಲವಾಗಿದೆ. ಕೂಡಲೇ ಸರ್ಕಾರ ಈ ಆದೇಶ ತೆರವಿಗೆ ಅಥವಾ ಮರು ಪರಿಶೀಲನೆಗೆ ಮೇಲ್ಮನವಿ ಸಲ್ಲಿಸಬೇಕು,” ಎಂದು ಆಗ್ರಹಿಸಿದರು.
ಸಾವಿನ ಸತ್ಯ ಮುಚ್ಚಿಹಾಕುವ ಪ್ರಯತ್ನ ನಡೆದಿತ್ತು
ವಿವಿಧ ಪಕ್ಷಗಳ ನಾಯಕರು ರೋಹಿತ್ ವೇಮುಲ ಸಾವಿನ ರಹತ್ಯವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ್ದರು ಎಂದು ರಾಧಿಕಾ ವೇಮುಲ ಇದೇ ವೇಳೆ ಆರೋಪಿಸಿದರು. ವಿವಿಧ ಪಕ್ಷಗಳ ನಾಯಕರು ರೋಹಿತ್ ವೇಮುಲ ಸಾವಿನ ರಹಸ್ಯ ಮುಚ್ಚಿಡಲು ವ್ಯವಸ್ಥಿತ ಷಡ್ಯಂತ್ರ ನಡೆಸಿದ್ದರು. ನನಗೆ ಸಾಂತ್ವನ ಹೇಳುವ ನೆಪದಲ್ಲಿ ಬಂದ ಹಲವು ಮುಖಂಡರು ವಿವಿಧ ಕೊಡುಗೆಗಳ ಆಮಿಷ ಒಡ್ಡಿದ್ದರು. ಈ ಆಮಿಷಗಳ ಹಿಂದೆ ರೋಹಿತ್‌ನ ಸಾವಿನ ಸತ್ಯ ಬಚ್ಚಿಡುವ ಪ್ರಯತ್ನಗಳಿದ್ದವು ಎಂದು ಹೇಳಿದರು.