Advertisement

ದಲಿತರ ಭೂಮಿ ರಕ್ಷಣೆಗೆ ಆಗ್ರಹ

08:20 PM Feb 18, 2020 | Lakshmi GovindaRaj |

ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಬಜೆಟ್‌ ಅಧಿವೇಶನದಲ್ಲಿಯೇ ರಾಜ್ಯದ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಭೂ ಪರಭಾರೆ ನಿಷೇಧ ಕಾಯ್ದೆಗೆ ತಿದ್ದುಪಡಿ ತಂದು ದಲಿತರ ಭೂಮಿ ರಕ್ಷಿಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಮಂಗಳವಾರ ಕದಸಂಸ ನೂರಾರು ಕಾರ್ಯಕರ್ತರು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

Advertisement

ಕಾಯ್ದೆಗೆ ಧಕ್ಕೆ ಆಗದಿರಲಿ: ರಾಜ್ಯದ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಭೂ ಪರಭಾರೆ ನಿಷೇಧ ಕಾಯ್ದೆಗೆ ಸಂಬಂಧಿಸಿದಂತೆ ಕೆಲವು ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್‌ ಹಾಗೂ ಹೈಕೋರ್ಟ್‌ಗಳು ಪಿಟಿಸಿಎಲ್‌ ಕಾಯ್ದೆ ಸೆಕ್ಷನ್‌ 05ರ ವಿರುದ್ಧ ತೀರ್ಪು ನೀಡಿರುವುದರಿಂದ ಬಹುತೇಕ ಪ್ರಕರಣಗಳು ಡೀಸಿ ಹಾಗೂ ಉಪ ವಿಭಾಗಾಧಿಕಾರಿಗಳು ಕೋರ್ಟ್‌ಗಳಲ್ಲಿ ವಜಾಗೊಳ್ಳುತ್ತಿರುವುದನ್ನು ತಡೆಯಲು ಸರ್ಕಾರ ಕೂಡಲೇ ಕಾಯ್ದೆಗೆ ಧಕ್ಕೆ ಆಗದಂತೆ ತಿದ್ದುಪಡಿ ತರಬೇಕೆಂದು ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕದಸಂಸ ರಾಜ್ಯ ಸಂಘಟನಾ ಸಂಚಾಲಕ ವಿಜಯ ನರಸಿಂಹ, 1978-79ರ ಅಧಿನಿಯಮಗಳ ಪ್ರಕಾರ ಪಿಟಿಸಿಎಲ್‌ ಕಾಯ್ದೆ ಪ್ರಕಾರ ಯಾವುದೇ ಮಂಜೂರಾತಿ ಭೂಮಿಗಳು ಪಿಟಿಸಿಎಲ್‌ ವ್ಯಾಪ್ತಿಗೆ ಬರುತ್ತದೆ. ಅದರ ನಂತರ ತೋಟಿ, ತಳವಾರಿಕೆ, ಕುಳವಾಡಿ, ಹಂಚಿಕೆ ಭೂಮಿಗಳು ಪ.ಜಾತಿ ಹಾಗೂ ಪಂಗಡದವರಿಗೆ ಸರ್ಕಾರ ಮರು ಮಂಜೂರು ಮಾಡಿದೆ. ಈ ಭೂಮಿ ಹೈಕೋರ್ಟ್‌ ವ್ಯಾಪ್ತಿಗೆ ಬರುವುದಿಲ್ಲವೆಂದು ತೀರ್ಪು ನೀಡಿದೆ.

ಆದ್ದರಿಂದ ಈ ಬಗ್ಗೆ ಸೂಕ್ತ ತಿದ್ದುಪಡಿ ತರಬೇಕು. ಹಂಚಿಕೆ ಭೂಮಿಯನ್ನು ಮರು ಸ್ಥಾಪನೆ ಮಾಡಲು ಆದೇಶ ನೀಡಿ ಸ್ವಾಧೀನ ಕೊಡಿಸಿ ಕೊಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು. ಕದಸಂಸ ಜಿಲ್ಲಾ ಸಂಚಾಲಕ ಕಡ್ಡೀಲು ವೆಂಕಟರವಣ ಮಾತನಾಡಿ, ಹಲವು ವರ್ಷಗಳಿಂದ ಅನುಷ್ಠಾನಗೊಳ್ಳದೇ ನೆನಗುದಿಗೆ ಬಿದ್ದಿರುವ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಬರುವ ಬಜೆಟ್‌ ಆಧಿವೇಶನದಲ್ಲಿ ಮಂಡಿಸಿ ಅಂಗೀಕರಿಸುವ ಮೂಲಕ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಒತ್ತಾಯಿಸಿದರು.

ಅಪರ ಜಿಲ್ಲಾಧಿಕಾರಿಗೆ ಮನವಿ: ಕದಸಂಸ ಕಾರ್ಯಕರ್ತರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಆರತಿಗೆ ಅವರಿಗೆ ತಮ್ಮ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿ ಸರ್ಕಾರದ ಗಮನ ಸೆಳೆಯಬೇಕೆಂದು ಮನವಿ ಮಾಡಿದರು.

Advertisement

ಪ್ರತಿಭಟನೆಯಲ್ಲಿ ಕದಸಂಸ ಜಿಲ್ಲಾ ಸಂಘಟನಾ ಸಂಚಾಲಕರಾದ ವಿ.ಅಮರ್‌, ಕೆ.ವಿ.ವೆಂಕಟೇಶ್‌, ಗೊರಮಡಗು ನಾರಾಯಣಸ್ವಾಮಿ, ತಿಪ್ಪೇನಹಳ್ಳಿ ನಾರಾಯಣ, ನವೀದ್‌, ಕೆ.ನಂಜುಂಡಪ್ಪ, ಖಜಾಂಚಿ ಚಂದ್ರಪ್ಪ, ತಾಲೂಕು ಸಂಚಾಲಕರಾದ ಚಿಕ್ಕಬಳ್ಳಾಪುರದ ಹನುಮ ಜೋಸ್ವ, ಗೌರಿಬಿದನೂರು ಅಶ್ವತ್ಥಪ್ಪ, ಚಿಂತಾಮಣಿಯ ಟಿ.ಕೆ.ವೆಂಕಟರವಣಪ್ಪ, ಶಿಡ್ಲಘಟ್ಟದ ರಾಜಪ್ಪ, ಬಾಗೇಪಲ್ಲಿ ಗಂಗಣ್ಣ, ಗುಡಿಬಂಡೆ ಈಶ್ವರಪ್ಪ, ಮುಖಂಡರಾದ ಈರಣ್ಯಹಳ್ಳಿ ಕೃಷ್ಣಪ್ಪ, ಚಿನ್ನಸಂದ್ರ ನಾರಾಯಣಸ್ವಾಮಿ, ವಿನೋಬಾ ಕಾಲೋನಿ ನರಸಿಂಹಪ್ಪ ಸೇರಿದಂತೆ ಕದಸಂಸ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next