ಕಲಬುರಗಿ: ದಲಿತ ವಚನಕಾರರಾದ ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಮಾದಾರ ದೂಳಯ್ಯ, ಸಮಗಾರ ಹರಳಯ್ಯ ಮತ್ತು ಉರಿಲಿಂಗ ಪೆದ್ದಿ ಅವರ ಜಯಂತ್ಯುತ್ಸವವನ್ನು ಜಿಲ್ಲಾದ್ಯಂತ ಫೆ.13ರಂದು ಸಂಭ್ರಮ ಸಡಗರದಿಂದ ಆಚರಿಸಲು ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯು ಸರ್ವಾನುಮತದ ನಿರ್ಣಯ ಕೈಗೊಂಡಿತು. ಫೆ. 13ರಂದು ಬೆಳಗ್ಗೆ 9:00ಕ್ಕೆ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಐವರು ದಲಿತ ವಚನಕಾರರ ಭಾವಚಿತ್ರದ ಮೆರವಣಿಗೆ ಡಾ| ಎಸ್.ಎಂ. ಪಂಡಿತ ರಂಗಮಂದಿರದವರೆಗೆ ಆಯೋಜಿಸಲು ಸಭೆ ನಿರ್ಣಯ ಕೈಗೊಂಡಿತು.
ಬೆಳಗ್ಗೆ 11:30ಕ್ಕೆ ಡಾ| ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಜಯಂತ್ಯುತ್ಸವ ಸಮಾರಂಭ ನಡೆಯಲಿದೆ. ಸಮಾರಂಭದಲ್ಲಿ
ಜಿಲ್ಲಾ ಸಚಿವರು, ಶಾಸಕರು ಮತ್ತು ವಿಶೇಷ ಉಪನ್ಯಾಸಕರು ಪಾಲ್ಗೊಳ್ಳುವರಲ್ಲದೆ ಕಲಾವಿದರಿಂದ ವಚನಕಾರರ ಗಾಯನ ಕಾರ್ಯಕ್ರಮ ನಡೆಯಲಿದೆ. ಮಹಾನಗರ ಪಾಲಿಕೆಯಿಂದ ಡಾ| ಎಸ್.ಎಂ.ಪಂಡಿತ ರಂಗಮಂದಿರದ ಸುತ್ತಮುತ್ತ ಸ್ವತ್ಛತೆ, ದೀಪಾಲಂಕಾರ ಮತ್ತಿತರ ವ್ಯವಸ್ಥೆ ಮಾಡಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಯಂತಿ ಅಂಗವಾಗಿ ನಡೆಸಲಾಗುವ ಮೆರವಣಿಗೆ ಸಂದರ್ಭದಲ್ಲಿ ಸಮರ್ಪಕ ಕುಡಿಯುವ ನೀರಿನ ಮತ್ತು ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ ತಿಳಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಜಯಂತ್ಯುತ್ಸವ ಕಾರ್ಯಕ್ರಮದ ರೂಪುರೇಷೆ ಬಗ್ಗೆ ವಿವರಿಸಿದರು. ಸಮಾಜದ ಪ್ರಮುಖ ಗಣ್ಯರಾದ ಶಂಕರ ಕೋಡ್ಲಾ, ಕಾಶಿರಾಯ ನಂದೂರಕರ, ಸಾಯಬಣ್ಣ ಎಂ. ಹೊಳಕರ, ರಮೇಶ ಆರ್. ಹೊಸಮನಿ, ಹಣಮಂತ ಭಾವಿಮನಿ, ಸಿದ್ದಲಿಂಗ ಕಲ್ಲೂರಕರ ಪಾಲ್ಗೊಂಡಿದ್ದರು.