ಲಕ್ನೋ: ದಲಿತನೆಂಬ ಕಾರಣಕ್ಕೆ ಮದುವೆಯ ಮೆರವಣಿಗೆಯಲ್ಲಿದ್ದ 24 ವರ್ಷದ ವರನೊಬ್ಬನಿಗೆ ಕುದುರೆ ಮೇಲಿಂದ ಕೆಳಗಿಳಿಯುವಂತೆ ಮೇಲ್ಜಾತಿಯ ಗುಂಪೊಂದು ಥಳಿಸಿ, ಅವಮಾನಿಸಿರುವ ಅಮಾನವೀಯ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ವರದಿಯಾಗಿದೆ.
ಸದರ್‌ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಸೊಹಲ್ಲಾ ಜಾತವ್ ಬಸ್ತಿ ಪ್ರದೇಶದಲ್ಲಿ, ರಾಧಾ ಕೃಷ್ಣ ಮ್ಯಾರೇಜ್ ಹಾಲ್‌ನಲ್ಲಿ ದಲಿತ ಕುಟುಂಬವೊಂದರ ಮದುವೆ ಸಮಾರಂಭ ನಡೆಯುತ್ತಿತ್ತು. ಈ ವೇಳೆ ಇದಕ್ಕಿದ್ದಂತೆ ಕೋಲುಗಳನ್ನು ಹಿಡಿದು ಮಂಟಪಕ್ಕ ಆಗಮಿಸಿದ ಮೇಲ್ಜಾತಿಯ ಕೆಲ ಸದಸ್ಯರು, ಮಂಟಪದಲ್ಲಿದ್ದ ಜನರ ಮೇಲೆ ಹಲ್ಲೆ ನಡೆಸಿದ್ದಾರೆ.
ಅಲ್ಲದೇ, ವರ ಅಜಯ್ ಜಾಟವ್‌ನಿಗೆ ಥಳಿಸಿ ನಮ್ಮ ಊರಿನಲ್ಲಿ ದಲಿತರು ಕುದುರೆ ಮೇಲೆ ಮೆರವಣಿಗೆ ನಡೆಸುವಂತಿಲ್ಲ ಎಂದು ಆಕ್ಷೇಪಿಸಿ ಕೆಳಗಿಳಿಸಿದ್ದಾರೆ. ಈ ಸಂಬಂಧಿಸಿ, ವರನ ಅತ್ತೆ ದೂರು ನೀಡಲು ಮುಂದಾಗಿದ್ದು, ಪೊಲೀಸರು ಸಹಕರಿಸದ ಬಳಿಕ ಆಗ್ರಾ ಕಮಿಷನರ್ ಅವರಿಗೆ ವಿಚಾರ ತಿಳಿಸಿ ದೂರು ದಾಖಲಿಸಿದ್ದಾರೆ.
ಮೇ4 ರಂದೇ ನಡೆದಿರುವ ಘಟನೆ ಈಗ ಬೆಳಕಿಗೆ ಬಂದಿದ್ದು, ಈ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.