ಬೆಳಗಾವಿ: ”ದಲಿತರು ಸಿಎಂ ಆಗಬೇಕೆಂಬ ಕೂಗು ಇಂದು, ನಿನ್ನೆಯದಲ್ಲ. ಇದು ಮಲ್ಲಿಕಾರ್ಜುನ ಖರ್ಗೆ ಅವರಿಂದ ಆರಂಭವಾಗಿದ್ದು, ದಲಿತರು ಸಿಎಂ ಆಗಬೇಕೆಂಬ ಬೇಡಿಕೆ ಕಾಂಗ್ರೆಸ್ ನಲ್ಲಿ ಅಷ್ಟೇ ಅಲ್ಲ. ಬಿಜೆಪಿ, ಜೆಡಿಎಸ್ ನಲ್ಲೂ ಇದೆಯಾದರೂ ಇದುವರೆಗೆ ದಲಿತರು ಯಾವುದೇ ಪಕ್ಷದಲ್ಲಿ ಸಿಎಂ ಆಗಲು ಸಾಧ್ಯವಾಗಿಲ್ಲ” ಎಂದು ಸಚಿವ ಸತೀಶ ಜಾರಕಿಹೋಳಿ ಗುರುವಾರ ಹೇಳಿಕೆ ನೀಡಿದ್ದಾರೆ.
”ಕಳೆದ 20 ವರ್ಷದಿಂದ ಮಲ್ಲಿಕಾರ್ಜುನ ಖರ್ಗೆ, 2013ರಲ್ಲಿ ಡಾ. ಜಿ. ಪರಮೇಶ್ವರ್ ಅವರು ಸಿಎಂ ಆಗಬೇಕೆಂಬ ಕೂಗು ಇತ್ತು. ಆದರೆ ಅವರಿಬ್ಬರಿಗೂ ಸಿಎಂ ಆಗುವ ಭಾಗ್ಯ ಸಿಗಲಿಲ್ಲ. ನಾನು ಅನೇಕ ಸಮಾವೇಶಗಳಲ್ಲಿ ದಲಿತರು ಸಿಎಂ ಆಗಲೇಬೇಕೆಂದು ಹೇಳಿದ್ದೇನೆ.ಎಸ್ಸಿ, ಎಸ್ಟಿ ಸಮಾಜದವರು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುತ್ತಾರೆ. ನಮ್ಮ ಕಡೆ ಸೈನಿಕರು ಹೆಚ್ಚಿಗೆ ಇದ್ದಾರೆ. ಆದರೆ ಸೈನಿಕರನ್ನು ಲೀಡ್ ಮಾಡುವ ಕ್ಯಾಪ್ಟನ್ ಇಲ್ಲ. ಕ್ಯಾಪ್ಟನ್ ಪಾತ್ರಗಳನ್ನು ರೆಡಿ ಮಾಡಬೇಕಿದೆ” ಎಂದರು.
ಮುಖ್ಯವಾಗಿ ಹೈಕಮಾಂಡ್ ಎದುರು ಪ್ರಭಾವ ಬೀರುವಲ್ಲಿ ವಿಫಲರಾಗಿದ್ದೇವೆ. ಲೋಕಸಭೆ ಚುನಾವಣೆ ನಂತರ ದಲಿತ ಸಿಎಂ ಬಗ್ಗೆ ದನಿ ಎತ್ತುತ್ತೇವೆ. ಈಗ ಲೋಕಸಭೆಯಲ್ಲಿ ಹೆಚ್ಚಿನ ಸೀಟು ಗೆಲ್ಲಲು ಆದ್ಯತೆ ನೀಡುತ್ತೇವೆ ಎಂದರು.
ಬೆಳಗಾವಿ, ಚಿಕ್ಕೋಡಿ ಕ್ಷೇತ್ರಗಳ ಲೋಕಸಭೆ ಅಭ್ಯರ್ಥಿಗಳ ಹೆಸರು 1ನೇ ಪಟ್ಟಿಯಲ್ಲಿ ಆಗುವದಿಲ್ಲ. ಎರಡನೇ ಪಟ್ಟಿಯಲ್ಲಿ ಬಿಡುಗಡೆಯಾಗುತ್ತದೆ.
ಈ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಜಿಲ್ಲೆಯ ಎಲ್ಲ ರಾಜಕಾರಣಿಗಳು ಎರಡ್ಮೂರು ದಿನಗಳಲ್ಲಿ ಇನ್ನೊಂದು ಸಭೆ ಮಾಡಲು ಸೂಚಿಸಿದ್ದಾರೆ ಎಂದರು.
ಶಾಸಕ ಲಕ್ಷ್ಮಣ ಸವದಿಗೆ ಒಳ್ಳೆಯ ಭವಿಷ್ಯವಿದೆ ಎಂದು ನಾನೇ ಮೊದಲು ಹೇಳಿದ್ದೇನೆ. ಲೋಕಸಭೆ ಚುನಾವಣೆ ನಂತರ ಲಕ್ಷ್ಮಣ ಸವದಿ ಅವರಿಗೆ ಒಳ್ಳೆಯ ಅವಕಾಶ ದೊರಕಬಹುದು ಎಂದರು.