ಜೋಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇನ್ ಕ್ರಿಕೆಟ್ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ. 38 ವರ್ಷದ ಹರಿಣಗಳ ನಾಡಿನ ವೇಗಿ ಡೇಲ್ ಸ್ಟೇನ್ ಮಂಗಳವಾರ ಟ್ವಿಟ್ಟರ್ ಮೂಲಕ ತಮ್ಮ ನಿವೃತ್ತಿ ಬಗ್ಗೆ ಘೋಷಿಸಿಕೊಂಡಿದ್ದಾರೆ.
2004ರಲ್ಲಿ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಪಂದ್ಯದ ಮೂಲಕ ಡೇಲ್ ಸ್ಟೇನ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ತನ್ನ ವೇಗದ ಮೂಲಕವೇ ಎದುರಾಳಿ ಬ್ಯಾಟ್ಸಮನ್ ಗೆ ನಡುಕ ಮೂಡಿಸಿದ್ದರು ಡೇಲ್ ಸ್ಟೇನ್.
2010ರ ಐಪಿಎಲ್ ಕೂಟದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡುತ್ತಿದ್ದ ಸ್ಟೇನ್ 156.7 ಕಿ.ಮೀ/ಗಂ ವೇಗದಲ್ಲಿ ಚೆಂಡು ಎಸೆದಿದ್ದರು. ಇದು ಸ್ಟೇನ್ ಎಸೆದ ಅತೀ ವೇಗದ ಎಸೆತ. ವೇಗದ ಜೊತೆ ಸ್ವಿಂಗ್ ಮಾಡುತ್ತಿದ್ದ ಕಾರಣ ಡೇಲ್ ಸ್ಟೇನ್ ಎಸೆತಗಳು ಬ್ಯಾಟ್ಸಮನ್ ಗಳಿಗೆ ದುಸ್ವಪ್ನವಾಗುತ್ತಿತ್ತು.
ಇದನ್ನೂ ಓದಿ:ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಪ್ರಮುಖ ವೇಗಿ ಆಡುವುದು ಅನುಮಾನ
93 ಟೆಸ್ಟ್ ಪಂದ್ಯಗಳನ್ನಾಡಿರುವ ಡೇಲ್ 439 ವಿಕೆಟ್ ಕಬಳಿಸಿದ್ದಾರೆ. 125 ಏಕದಿನ ಪಂದ್ಯಗಳಿಂದ 196 ವಿಕೆಟ್ ಗಳು, 47 ಟಿ20 ಪಂದ್ಯಗಳಿಂದ 64 ವಿಕೆಟ್ ಗಳನ್ನು ಡೇಲ್ ಸ್ಟೇನ್ ಪಡೆದಿದ್ದಾರೆ.
ಐಪಿಎಲ್ ನಲ್ಲಿ ಡೇಲ್, ಆರ್ ಸಿಬಿ, ಡೆಕ್ಕನ್ ಚಾರ್ಜರ್ಸ್, ಸನ್ ರೈಸರ್ಸ್ ಹೈದರಾಬಾದ್, ಗುಜರಾತ್ ಲಯನ್ಸ್ ತಂಡಗಳಲ್ಲಿ ಆಡಿದ್ದರು.