ನೆನಪಿರಲಿ ಪ್ರೇಮ್ ಈಗ ಬದಲಾಗಿದ್ದಾರೆ! ಹೀಗೆಂದಾಕ್ಷಣ, ಬೇರೆ ಏನನ್ನೋ ಅರ್ಥ ಕಲ್ಪಿಸಿಕೊಳ್ಳುವುದು ಬೇಡ. ಅವರ ಬದಲಾವಣೆಗೆ ಕಾರಣ “ದಳಪತಿ’. ಹೌದು, ಇದುವರೆಗೆ ಲವ್ವರ್ ಬಾಯ್ ಆಗಿಯೇ ಮಿಂಚಿದ್ದ ಪ್ರೇಮ್, “ದಳಪತಿ’ ಮೂಲಕ ಲವ್ ಲೀಡರ್ ಆಗಿ ರಗಡ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತುಂಬ ಹಿಂದೆಯೇ ಶುರುವಾಗಿದ್ದ “ದಳಪತಿ’ ಇದೇ ಏಪ್ರಿಲ್ 13 ರಂದು ತೆರೆಗೆ ಬರುತ್ತಿದೆ.
ಈ ಚಿತ್ರ ನೆನಪಿರಲಿ ಪ್ರೇಮ್‌ಗೆ ಹೊಸ ಲುಕ್ ಕೊಟ್ಟರೆ, ನಿರ್ದೇಶಕ ಪ್ರಶಾಂತ್‌ಗೂ ಹೊಸ ಜಾನರ್‌ನ ಸಿನಿಮಾ ಆಗಲಿದೆ. ಚಿತ್ರ ಲೇಟ್ ಆಗಿದ್ದರೂ ಲೇಟೆಸ್ಟ್ ಆಗಿ ಬರುತ್ತಿದೆ ಎನ್ನುವ ನಿರ್ದೇಶಕ ಪ್ರಶಾಂತ್‌ರಾಜ್, ಇಲ್ಲಿ ಕೆಲಸ ಮಾಡಿದ ಮೂರು ಮಂದಿ ಕೂಡ ಈ ಚಿತ್ರ ಶುರುವಾಗುವ ವೇಳೆ ಬಿಜಿಯಾಗಿದ್ದು ನಿಜ. ನಾನು “ಜೂಮ್’ ಕೈಗೆತ್ತಿಕೊಂಡೆ. ಪ್ರೇಮ್ “ಚೌಕ’ದಲ್ಲಿ ಬಿಜಿಯಾದರು.
ಕೃತಿ ತಮಿಳು ಮತ್ತು ಹಿಂದಿ ಚಿತ್ರಗಳಿಗೆ ಕಮಿಟ್ ಆಗಿದ್ದರು. ಅದರಲ್ಲೂ ಇದೊಂದು ಜರ್ನಿ ಸಿನಿಮಾ. ಪ್ರೇಮ್ ಅವರನ್ನು ಇಲ್ಲಿ ಸಾಕಷ್ಟು ಯಂಗ್ ಆಗಿ ತೋರಿಸಬೇಕಿತ್ತು. ಅದಕ್ಕಾಗಿ ಹೋಮ್ ವರ್ಕ್ ಜಾಸ್ತಿ ಇತ್ತು. ಎಲ್ಲವನ್ನೂ ಸರಿಪಡಿಸಿಕೊಳ್ಳುವ ಉದ್ದೇಶದಿಂದ ಸಮಯ ತೆಗೆದುಕೊಂಡು “ದಳಪತಿ’ ಮಾಡಿದ್ದೇವೆ. ಈಗ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ ಎಂಬುದು ನಿರ್ದೇಶಕರ ಮಾತು.
ಇದೊಂದು ಲವ್‌ಸ್ಟೋರಿ ಹೊಂದಿರುವ ಕಥೆಯಾಗಿದ್ದರೂ, ಚಿತ್ರಕಥೆಯೇ ಇಲ್ಲಿನ ಹೈಲೈಟ್. ಸಂಪೂರ್ಣ ಇದು ಉತ್ತರ ಕರ್ನಾಟಕ ಶೈಲಿಯಲ್ಲೇ ಸಾಗುವಂತಹ ಚಿತ್ರ. ಹೊಸತೆನಿಸುವ ಅಂಶಗಳನ್ನು ಇಟ್ಟುಕೊಂಡು ಈಗಿನ ಯುವ ಮನಸ್ಸುಗಳಿಗೆ ಇಷ್ಟವಾಗುವಂತಹ ಚಿತ್ರ ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇವೆ. “ದಳಪತಿ’ ಅಂದರೆ, ಲೀಡರ್ ಎಂದರ್ಥ.
ಪ್ರತಿಯೊಬ್ಬರಿಗೂ ಪ್ರೀತಿ ಹೇಳಿಕೊಳ್ಳಲು ಮೀಟರ್ ಇರಬೇಕು. ಮಿಡ್ಲ್ಕ್ಲಾಸ್ ಅಥವಾ ಲೋ ಮಿಡ್ಲ್ಕ್ಲಾಸ್ ಯಾರೇ ಇರಲಿ, ಪ್ರೀತಿಯನ್ನು ಗೆಲ್ಲುವುದೇ ದೊಡ್ಡ ಸಮಸ್ಯೆ. ಅಂತಹ ಸಮಸ್ಯೆಯನ್ನು ಹೇಗೆ ದಾಟಿ ಇಲ್ಲಿ ಲವ್‌ಗೊಂದು ಅರ್ಥ ಕೊಡಲಾಗುತ್ತೆ ಎಂಬುದು ವಿಶೇಷ. ಎಲ್ಲಾ ಚಿತ್ರಗಳಲ್ಲಿರುವಂತೆ ಇಲ್ಲೂ ಲವ್‌ಸ್ಟೋರಿ ಇದೆಯಾದರೂ, ಅದನ್ನು ಹೊಸ ಪ್ಯಾಟ್ರನ್‌ನಲ್ಲಿ ಹೇಳಲಾಗಿದೆ.
ಪ್ರೇಮ್ ಮತ್ತು ಕೃತಿ ಅವರ ಜೋಡಿ ಇಲ್ಲಿ ಹೊಸ ಮೋಡಿ ಮಾಡುವುದು ಗ್ಯಾರಂಟಿ. ಪ್ರೇಮ್ ಅವರು ಕ್ಲಾಸ್‌ಗೂ ಸೈ ಮಾಸ್‌ಗೂ ಸೈ. ಇದು ಕಂಪ್ಲೀಟ್ ಮಾಸ್ ಫೀಲ್ ಸಿನಿಮಾ ಆಗಿದ್ದರೂ, ಕ್ಲಾಸ್ ಆಗಿದೆ. ನನ್ನ ಹಿಂದಿನ ಕಮರ್ಷಿಯಲ್ ಲವ್‌ಸ್ಟೋರಿ ಚಿತ್ರಗಳಿಗಿಂತಲೂ “ದಳಪತಿ’ಯನ್ನು ಬೇರೆ ರೀತಿಯಾಗಿ ತೋರಿಸಲು ಹೊರಟಿದ್ದೇನೆ ಎಂದು ವಿವರ ಕೊಡುವ ಪ್ರಶಾಂತ್‌ರಾಜ್, ಈಗಾಗಲೇ ಹಾಡುಗಳು ಕೇಳುಗರ ಮನಗೆದ್ದಿವೆ.
ಚಿತ್ರಕ್ಕೆ ಇನ್ನೊಂದು ಪ್ಲಸ್ ಅಂದರೆ ಅದು ಹಿನ್ನೆಲೆ ಸಂಗೀತ. ಚಿತ್ರವನ್ನು ಸುಮಾರು 200 ಚಿತ್ರಮಂದಿರಗಳಲ್ಲಿ ಜಯಣ್ಣ ವಿತರಣೆ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ. ಏಕಕಾಲದಲ್ಲಿ ವಿದೇಶದಲ್ಲೂ ಚಿತ್ರ ಬಿಡುಗಡೆ ಮಾಡುವ ತಯಾರಿ ನಡೆಯುತ್ತಿದೆ ಎನ್ನುತ್ತಾರೆ ನಿರ್ದೇಶಕರು.