Advertisement

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

12:34 AM Apr 29, 2024 | Team Udayavani |

ಮಂಗಳೂರು: ಕರಾವಳಿಯಲ್ಲಿ ಲೋಕ ಸಮರ ಮುಕ್ತಾಯವಾಗಿದ್ದು, ಜೂ. 4ರ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ. ಇದರ ಮಧ್ಯೆ, ಸೋಲು-ಗೆಲುವಿನ ಲೆಕ್ಕಾಚಾರಗಳು ಬಿಜೆಪಿ-ಕಾಂಗ್ರೆಸ್‌ ಮಧ್ಯೆ ಬಿರುಸಿ ನಿಂದಲೇ ನಡೆಯುತ್ತಿದೆ.

Advertisement

ಮತಯಂತ್ರದೊಳಗೆ ಭದ್ರವಾಗಿ ರುವ ಜನಾದೇಶ ಪ್ರಕಟಗೊಳ್ಳಲು ಇನ್ನು ಬರೋಬ್ಬರಿ 36 ದಿನಗಳು ಬಾಕಿ ಉಳಿದಿದ್ದು ಸೋಲು ಗೆಲುವಿನ ಬಗ್ಗೆ ಲೆಕ್ಕಾಚಾರ, ವಿಶ್ಲೇಷಣೆಗಳು ಮಾತ್ರ ನಾನಾ ಕೋನಗಳಿಂದ ಲೆಕ್ಕವಿಲ್ಲದಷ್ಟು ನಡೆಯುತ್ತಿವೆ.

ದ.ಕ. ಲೋಕಸಭಾ ಕ್ಷೇತ್ರದಲ್ಲಿ ಶೇ.77.56 ಮತದಾನವಾಗಿದೆ. ಎಂದಿ ನಂತೆ ಸುಳ್ಯದಲ್ಲಿ ಗರಿಷ್ಠ ಶೇ.83.01 ಮತದಾನವಾಗಿದೆ. ಹೆಚ್ಚಿದ ಮತದಾನ ಮತ್ತು ಕ್ಷೇತ್ರದಲ್ಲಿ ವ್ಯಕ್ತವಾಗಿರುವ ರಾಜಕೀಯ ಟ್ರೆಂಡ್‌ಗಳನ್ನು ಮೂಲ ವಾಗಿಟ್ಟುಕೊಂಡು ರಾಜಕೀಯ ಪಕ್ಷಗಳಲ್ಲಿ ಗೆಲುವಿನ ಸಾಧ್ಯತೆಗಳ ಬಗ್ಗೆ ವಿಶ್ಲೇಷಣೆಗಳು ನಡೆಯುತ್ತಿವೆ.

ದ.ಕ. ಕ್ಷೇತ್ರದ ಎಲ್ಲ 1,876 ಬೂತ್‌ಗಳ ಮತದಾರರ ಪಟ್ಟಿಯನ್ನು ಹಿಡಿದುಕೊಂಡು ಕೂಡಿಸಿ ಕಳೆಯುವ ಮತ ಗಣಿತ ಲೆಕ್ಕಾ ಚಾರ ಪಕ್ಷಗಳ ಕಚೇರಿಯಲ್ಲಿ ನಡೆಯುತ್ತಿದೆ. ಪ್ರತಿಯೊಂದು ಬೂತ್‌ನಲ್ಲಿ ತಮ್ಮ ಪಕ್ಷಕ್ಕೆ ಬರುವ ಪಕ್ಕಾ ಮತಗಳು, ಎದುರಾಳಿ ಅಭ್ಯರ್ಥಿಗೆ ಹೋಗಿರುವ ಮತ, ಶೇ.50-50ರ ಅಂಚಿನಲ್ಲಿರುವ ಮತ ಗಳನ್ನು ಅಂದಾಜಿಸಿ ಗಳಿಸಿರಬಹುದಾದ ಮತಗಳ ಲೆಕ್ಕ ಹಾಕುವ ಕಾರ್ಯ ಆರಂಭ ಗೊಂಡಿದೆ. ಇವುಗಳನ್ನು ಕ್ರೋಢಿಕರಿಸಿ ಗೆಲುವಿನ ಸಾಧ್ಯತೆ, ಅಂತರಗಳ ಒಟ್ಟು ಚಿತ್ರಣವೊಂದನ್ನು ಅಂದಾಜಿಸುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ತೊಡಗಿಸಿಕೊಂಡಿದ್ದಾರೆ.

ತಿಂಗಳ ಅಬ್ಬರ ಈಗ ಮೌನ!
ಮತದಾರರ ಮನಸ್ಸು ಗೆಲ್ಲಲು ರಾಜಕೀಯ ಪಕ್ಷಗಳು ನಾನಾ ರೀತಿಯ ಕಸರತ್ತು, ಕಾರ್ಯತಂತ್ರಗಳನ್ನು ಅನು ಸರಿಸಿದ್ದವು. ಆರೋಪ ಪ್ರತ್ಯಾರೋಪ, ವಾದ ವಿವಾದ, ಭರವಸೆ, ಆಶ್ವಾಸನೆಗಳು ಚುನಾವಣ ಪ್ರಚಾರ ಕಣದಲ್ಲಿ ಸಾಕಾಷ್ಟು ಆಗಿ ಹೋಗಿದೆ. ಬಹಿರಂಗ ಪ್ರಚಾರ, ರೋಡ್‌ಶೋಗಳಿಂದ ಚುನಾವಣ ಕಣ ರಂಗೇರಿತ್ತು. ಮತದಾರರ ಮನೆಯೆಡೆಗೆ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡಿಗೆ ಸಾಗಿತ್ತು. ಕೆಲವು ಪ್ರಭಾವಿ ನಾಯಕರು ಜಿಲ್ಲೆಗೆ ಆಗಮಿಸಿ ರಾಜಕೀಯ ಸಂಚಲನ ಮೂಡಿಸಿದ್ದರು. ರಾಜಕೀಯ ಪಕ್ಷಗಳು, ಬೆಂಬಲಿಗ ಸಂಘಟನೆಗಳಿಂದ ಸರಣಿ ಪತ್ರಿಕಾಗೋಷ್ಠಿಗಳು ಆಯೋಜನೆ ಗೊಂಡಿದ್ದವು. ಎ.26ರಂದು ಮತದಾನ ನಡೆಯುವುದರ ಜತೆಗೆ ಇದೆಲ್ಲದಕ್ಕೂ ತೆರೆಬಿದ್ದಿದೆ. ಕಳೆದ ಒಂದು ತಿಂಗಳಿನಿಂದ ಸದ್ದುಗದ್ದಲದ ರಾಜಕೀಯ ವಾತಾವರಣ ಇದೀಗ ಮೌನಕ್ಕೆ ಜಾರಿದೆ.

Advertisement

ಮದುವೆ/ ಅಂಗಡಿ.. ಎಲ್ಲೆಡೆಯೂ ಮತದಾನೋತ್ತರ ಚರ್ಚೆ!
ದ.ಕ. ಲೋಕ ಕಣದಲ್ಲಿ ಯಾರು ಗೆಲ್ಲಬಹುದು ಎಂಬ ಬಗ್ಗೆ ಮತದಾರರಲ್ಲಿ ಕುತೂಹಲ ಗರಿಗೆದರಿದೆ. ಮದುವೆ ಸೇರಿದಂತೆ ಎಲ್ಲ ರೀತಿಯ ಸಮಾರಂಭದಲ್ಲಿ ಇದೇ ಬಹು ಚರ್ಚಿತ ವಿಷಯ. ಮತದಾನೋತ್ತರ ಸಮೀಕರಣ ಇಲ್ಲಿಯೂ ನಡೆಯುತ್ತಿದೆ. “ಹೇಗಾಗಬಹುದು?’ ಎಂದು ಮಾತು ಆರಂಭಿಸುತ್ತ ಜಾತಿ ಲೆಕ್ಕಾಚಾರ, ಪಕ್ಷಗಳ ನಿಲುವು, ಧರ್ಮ-ಜಾತಿ ಗಣಿತ, ಲಾಭ, ನಷ್ಟ ಹೀಗೆ ಎಲ್ಲ ಕೋನಗಳಿಂದ ಚರ್ಚೆ ನಡೆಯುತ್ತಿದೆ. ಜತೆಗೆ ಸಮಯವಿದ್ದವರು, ಹೊರ ಜಿಲ್ಲೆ-ರಾಜ್ಯದ ಕುತೂಹಲ ಸಂಗತಿ ಬಗ್ಗೆಯೂ ಮಾತು ಮುಂದುವರಿಸುತ್ತಾರೆ. ಕಳೆದ ಲೋಕಸಭೆಯ ಮತದಾನದ ಲೀಡ್‌, ವಿಧಾನಸಭೆಯಲ್ಲಿ ಆದ ಲೀಡ್‌ ಎಂಬಿತ್ಯಾದಿ ವಿಷಯಗಳಿಂದ ಚರ್ಚೆ ಗಮನಸೆಳೆಯುತ್ತಿದೆ. ಸಮಾರಂಭ ಮಾತ್ರವಲ್ಲ-ಹೊಟೇಲ್‌, ಸೆಲೂನ್‌ ಸಹಿತ ಎಲ್ಲ ವ್ಯವಹಾರ ತಾಣದಲ್ಲಿಯೂ ಈಗ ಮತದಾನೋತ್ತರದ್ದೇ ಚರ್ಚೆ!

Advertisement

Udayavani is now on Telegram. Click here to join our channel and stay updated with the latest news.

Next