ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಿನ ಪರಿಸ್ಥಿತಿ ನೋಡಿದರೆ ಕುಡಿಯುವ ನೀರನ್ನು ರೇಷನಿಂಗ್ ಮಾಡುವ ಸ್ಥಿತಿ ಎದುರಾಗದು. ನೇತ್ರಾವತಿ ನದಿಯ ಮೂರು ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ತೃಪ್ತಿದಾಯಕವಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಗಾರು ಯಾವಾಗ ಜಿಲ್ಲೆಗೆ ಬರುವುದೋ ಗೊತ್ತಿಲ್ಲ, ಹಾಗಿದ್ದರೂ ಸದ್ಯದ ಮಟ್ಟಿಗೆ ಸಮಸ್ಯೆ ಕಾಣುತ್ತಿಲ್ಲ ಎಂದರು.
ತುಂಬೆಯ ಅಣೆಕಟ್ಟಿನಲ್ಲಿ 5.48 ಮೀಟರ್, ಎಎಂಆರ್ ಅಣೆಕಟ್ಟಿನಲ್ಲಿ 17.6 ಮೀ, ಬಿಳಿಯೂರು ಅಣೆಕಟ್ಟಿನಲ್ಲಿ 1.95 ಮೀಟರ್ ನೀರು ಲಭ್ಯವಿದೆ. ತುಂಬೆ ಅಣೆಕಟ್ಟಿನ ಮಟ್ಟ 5ಕ್ಕೆ ಇಳಿದಾಗ ಎಎಂಆರ್‌ನಿಂದ ನೀರು ಬಿಡಲಾಗುವುದು, ಎಎಂಆರ್‌ನಲ್ಲಿ 16 ಮೀಟರ್‌ಗೆ ಬಂದಾಗ ಬಿಳಿಯೂರಿನಿಂದ ನೀರು ಬಿಡಲಾಗುವುದು. ಈಗಾಗಲೇ ಕೈಗಾರಿಕೆಗಳಿಗೆ ಕೊಡುವ ನೀರಿನ ಪ್ರಮಾಣವನ್ನು ಶೇ. 50ರಷ್ಟು ಕಡಿಮೆ ಮಾಡಲಾಗಿದೆ. ನಾಗರಿಕರೂ ಆದಷ್ಟೂ ನೀರನ್ನು ಪೋಲು ಮಾಡದೆ ಮಿತವಾಗಿ ಬಳಸಿ ಸಹಕರಿಸಬೇಕು ಎಂದರು.
ಉಳ್ಳಾಲ ತಾಲೂಕಿನ ಉಳ್ಳಾಲ, ಸೋಮೇಶ್ವರ, ಕೋಟೆಕಾರು ಪಟ್ಟಣ ವ್ಯಾಪ್ತಿಯಲ್ಲಿ 10 ಟ್ಯಾಂಕರ್‌ಗಳಲ್ಲಿ ಹಾಗೂ ಕೊಣಾಜೆ, ನರಿಮೊಗರು, ಬಾಳೇಪುಣಿ, ಪಜೀರು, ಮಂಜನಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ನಡೆಯುತ್ತಿದೆ ಎಂದೂ ವಿವರಿಸಿದರು.