Advertisement

ಪಕ್ಷ ನಿಷ್ಠೆಗೆ ಮನ್ನಣೆ: ದಕ್ಷಿಣ ಕನ್ನಡಕ್ಕೆ ಒಲಿದ ಪರಿಷತ್‌ ಸ್ಥಾನ

02:46 AM Jun 19, 2020 | Sriram |

ಮಂಗಳೂರು: ವಿಧಾನ ಸಭೆಯಿಂದ ವಿಧಾನ ಪರಿಷತ್‌ಗೆ ಸದಸ್ಯರ ಆಯ್ಕೆಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ದಕ್ಷಿಣ ಕನ್ನಡದ ಬಿಜೆಪಿ ಹಿರಿಯ ನಾಯಕ ಕೆ. ಪ್ರತಾಪಸಿಂಹ ನಾಯಕ್‌ ಅವರಿಗೆ ಅವಕಾಶ ನೀಡಿರುವುದು ಜಿಲ್ಲೆಯ ತಳಮಟ್ಟದ ಕಾರ್ಯಕರ್ತ ರಲ್ಲಿ ಹುರುಪು ಮೂಡಿಸಿದೆ.

Advertisement

ಏಕೆಂದರೆ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಈಗಾಗಲೇ ವಿಧಾನ ಸಭೆಯಿಂದ ಆಯ್ಕೆ ಗೊಂಡಿ ರುವ ಬಿಜೆಪಿಯ 13 ಶಾಸಕರು ಹಾಗೂ ಒಬ್ಬರು ವಿಧಾನ ಪರಿಷತ್‌ ಸದಸ್ಯರ ಪ್ರಾತಿನಿಧ್ಯವಿದೆ. ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನವೂ ಜಿಲ್ಲೆಗೆ ಸಿಕ್ಕಿದೆ. ಹೀಗಿರುವಾಗ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಗೊಳಿಸಲು ಬಿಜೆಪಿಗೆ ನಾಲ್ಕು ಸ್ಥಾನಗಳಿದ್ದು, ಅದಕ್ಕೆ ಪಕ್ಷದೊಳಗೆ ಘಟಾನುಘಟಿ ನಾಯಕರ ಪೈಪೋಟಿ ಇದ್ದರೂ 1 ಸ್ಥಾನವು ದ.ಕ.ದ ಪಾಲಾಗಿರುವುದು ಅಚ್ಚರಿಯ ಬೆಳವಣಿಗೆ ಎಂದು ವಿಶ್ಲೇಷಿಸಲಾಗುತ್ತಿದೆ.

ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಏಳು ಸ್ಥಾನಗಳಲ್ಲಿ ಬಿಜೆಪಿ ಶಾಸಕರಿದ್ದು, ಇದೀಗ ವಿಧಾನ ಪರಿಷತ್‌ನಲ್ಲೂ 1 ಸ್ಥಾನ ಲಭಿಸಿದರೆ 8 ಶಾಸಕರನ್ನು ಜಿಲ್ಲೆ ಹೊಂದಿದಂತಾಗಲಿದೆ. ವಿಧಾನಸಭೆಯಿಂದ ವಿಧಾನಪರಿಷತ್‌ನ 7ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿಗೆ ತನ್ನ ಸ್ವಂತ ಬಲದಿಂದ ನಾಲ್ವರನ್ನು ಗೆಲ್ಲಿಸಲು ಅವಕಾಶವಿದೆ. ಕಾಂಗ್ರೆಸ್‌ಗೆ ಇಬ್ಬರನ್ನು ಹಾಗೂ ಜೆಡಿಎಸ್‌ಗೆ ಓರ್ವ ಅಭ್ಯರ್ಥಿಯನ್ನು ಗೆಲ್ಲಿಸಲು ಅವಕಾಶವಿದೆ. ನಾಮಪತ್ರ ಸಲ್ಲಿಕೆಗೆ ಒಂದು ದಿನವಷ್ಟೇ ಬಾಕಿಯಿರಬೇಕಾದರೆ ಬುಧವಾರ ರಾತ್ರಿ ಬಿಜೆಪಿ ಪ್ರತಾಪ ಸಿಂಹರನ್ನು ಒಳಗೊಂಡಂತೆ ತನ್ನ ನಾಲ್ವರು ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಿತ್ತು.

ವೃತ್ತಿಯಲ್ಲಿ ವಕೀಲ
ವೃತ್ತಿಯಲ್ಲಿ ನ್ಯಾಯವಾದಿಯಾದ 60ರ ವಯಸ್ಸಿನ ಪ್ರತಾಪಸಿಂಹ ನಾಯಕ್‌ ಬಾಲ್ಯದಲ್ಲೇ ಆರ್‌ಎಸ್‌ಎಸ್‌ ಸ್ವಯಂಸೇವಕರಾಗಿ ಬಳಿಕ ಜನಸಂಘದ ಮೂಲಕ ರಾಜಕೀಯ ಪ್ರವೇಶಿಸಿ ದ್ದರು. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಗುರುತಿಸಿಕೊಂಡು ಸಂಘಟನಾ ಶಕ್ತಿಯ ಮೂಲಕ ಬಿಜೆಪಿಯಲ್ಲಿ ವಿವಿಧ ಗುರುತರ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ, ಎರಡು ಅವಧಿಗಳಲ್ಲಿ ಜಿಲ್ಲಾ ಅಧ್ಯಕ್ಷರಾಗಿ, ವಿಭಾಗ ಸಹ ಪ್ರಭಾರಿಯಾಗಿ, ವಿಧಾನಸಭಾ, ಲೋಕಸಭಾ ಚುನಾವಣೆಗಳಲ್ಲಿ ಕ್ಷೇತ್ರ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದರು. ಬೆಳ್ತಂಗಡಿ ತಾಲೂಕು ಜನ ಜಾಗೃತಿ ವೇದಿಕೆ ಅಧ್ಯಕ್ಷರಾಗಿ, ರೋಟರಿ ಕ್ಲಬ್‌ ಅಧ್ಯಕ್ಷರು ಸೇರಿದಂತೆ ವಿವಿಧ ಸಾಮಾಜಿಕ ಸಂಘಟನೆಗಳಲ್ಲೂ ತೊಡಗಿಸಿಕೊಂಡಿದ್ದರು.

ಬೆಳ್ತಂಗಡಿ ಎರಡನೇ ಪ್ರಾತಿನಿಧ್ಯ
ಪ್ರತಾಪಸಿಂಹ ನಾಯಕ್‌ ಅವರಿಗೆ ಅವಕಾಶ ಲಭಿಸುವುದರೊಂದಿಗೆ ವಿಧಾನಪರಿಷತ್‌ನಲ್ಲಿ ಬೆಳ್ತಂಗಡಿಯ ಇಬ್ಬರು ನಾಯಕರಿಗೆ ಪ್ರಾತಿನಿಧ್ಯ ದೊರಕಿದಂತಾಗುತ್ತದೆ. ಕಾಂಗ್ರೆಸ್‌ನ ಜಿಲ್ಲಾ ಹಿರಿಯ ನಾಯಕರಲ್ಲೋರ್ವರಾದ ಹರೀಶ್‌ ಕುಮಾರ್‌ ಈಗಾಗಲೇ ವಿಧಾನ ಪರಿಷತ್‌ ಸದಸ್ಯರಾಗಿದ್ದಾರೆ.

Advertisement

ವಿಧಾನ ಪರಿಷತ್‌ನಲ್ಲಿ ಅವಿಭಜಿತ ದ.ಕ. ಜಿಲ್ಲೆಯಿಂದ ಪ್ರಸ್ತುತ ಐವರು ಸದಸ್ಯರಿದ್ದಾರೆ. ಉಡುಪಿಯಿಂದ ಕಾಂಗ್ರೆಸ್‌ನ ಪ್ರತಾಪಚಂದ್ರ ಶೆಟ್ಟಿ, ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ, ದ.ಕ. ಜಿಲ್ಲೆಯಿಂದ ಕಾಂಗ್ರೆಸ್‌ನ ಹರೀಶ್‌ ಕುಮಾರ್‌, ಐವನ್‌ ಡಿ’ಸೋಜಾ, ಜೆಡಿಎಸ್‌ನಿಂದ ಬಿ.ಎಂ. ಫಾರೂಕ್‌ ಸದಸ್ಯರಾಗಿದ್ದಾರೆ. ಭೋಜೇಗೌಡರು ದ.ಕ. ಹಾಗೂ ಉಡುಪಿ ಜಿಲ್ಲೆಗಳನ್ನೊಳಗೊಂಡ ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದವರು. ಐವನ್‌ ಡಿ’ಸೋಜಾ ಅವರ ಅವಧಿ ಜೂ. 23ಕ್ಕೆ ಕೊನೆಗೊಳ್ಳಲಿದೆ.

ಅವಕಾಶ ನಿರೀಕ್ಷಿಸಿರಲಿಲ್ಲ
“ಈ ಸ್ಥಾನವನ್ನು ನಿರೀಕ್ಷಿಸಿರಲಿಲ್ಲ. ಬುಧವಾರ ರಾತ್ರಿ 11.30ಕ್ಕೆ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರು ಕರೆ ಮಾಡಿ ಹೇಳಿದಾಗಲೇ ನನ್ನ ಹೆಸರು ಆಯ್ಕೆಯಾಗಿರುವುದು ತಿಳಿದು ಬಂತು. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಬಿಜೆಪಿ ಗುರುತಿಸುತ್ತದೆ ಎಂಬುದಕ್ಕೆ ಇದು ನಿದರ್ಶನ. ಗುರುವಾರ ಪಕ್ಷದ ನಾಯಕರ ಉಪಸ್ಥಿತಿಯಲ್ಲಿ ನಾಮಪತ್ರ ಸಲ್ಲಿಸಿದ್ದೇನೆ’ ಎಂದು ಪ್ರತಾಪ ಸಿಂಹ ನಾಯಕ್‌ ಅವರು “ಉದಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next