Advertisement

ಅನುದಾನ ಸದ್ಬಳಕೆ: ದ.ಕ. ಆರೋಗ್ಯ ಇಲಾಖೆ ಮುಂದು

09:46 AM Oct 26, 2019 | Hari Prasad |

ಮಂಗಳೂರು: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಆರೋಗ್ಯ ಇಲಾಖೆಗೆ ನೀಡುವ ಅನುದಾನದ ಸದ್ಬಳಕೆಯಲ್ಲಿ ಸತತ 2 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆ 2ನೇ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದು, ಈ ವರ್ಷಾರ್ಧದಲ್ಲಿ ಮೊದಲ ಸ್ಥಾನದಲ್ಲಿದೆ.

Advertisement

2017-18ನೇ ಸಾಲಿನಲ್ಲಿ ದ.ಕ. ಜಿಲ್ಲಾ ಆರೋಗ್ಯ ಇಲಾಖೆಗೆ 28.56 ಕೋ. ರೂ. ಬಿಡುಗಡೆಯಾಗಿದ್ದು, 25.98 ಕೋ. ರೂ. ಬಳಕೆ ಮಾಡಿಕೊಂಡು ಶೇ.91ರಷ್ಟು ಗುರಿ ಸಾಧಿಸಿದೆ. 2018-19ನೇ ಸಾಲಿನ 36.70 ಕೋ.ರೂ.ಗಳಲ್ಲಿ 31.3 ಕೋಟಿ ರೂ.ಗಳು ವಿನಿಯೋಗವಾಗಿ ಶೇ.85ರಷ್ಟು ಗುರಿ ಸಾಧನೆಯಾಗಿದೆ.

ಈ ಎರಡೂ ವರ್ಷಗಳಲ್ಲಿ ಕ್ರಮವಾಗಿ ಕೋಲಾರ ಮತ್ತು ಚಿತ್ರದುರ್ಗ ಜಿಲ್ಲೆಗಳು ಮೊದಲ ಸ್ಥಾನದಲ್ಲಿದ್ದವು. 2019-20ನೇ ಸಾಲಿನ ಮೊದಲ 6 ತಿಂಗಳಲ್ಲಿ ದಕ್ಷಿಣ ಕನ್ನಡವು ಅನುದಾನ ಸದ್ಬಳಕೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಸ್ಥಾನವನ್ನು ವರ್ಷಪೂರ್ತಿ ಕಾಯ್ದುಕೊಳ್ಳಲು ಪಣ ತೊಟ್ಟಿದೆ. ಮೊದಲ ಸ್ಥಾನದಲ್ಲಿದ್ದರೂ ಬಾಕಿ ಮೊತ್ತವನ್ನು ತತ್‌ಕ್ಷಣವೇ ಸಮರ್ಪಕವಾಗಿ ವಿನಿಯೋಗಿಸಲು ಸಚಿವರು ದ.ಕ. ಆರೋಗ್ಯ ಇಲಾಖೆಗೆ ತಾಕೀತು ಮಾಡಿದ್ದಾರೆ.

9ನೇ ಸ್ಥಾನದಲ್ಲಿ ಉಡುಪಿ
2019-20ನೇ ಸಾಲಿನಲ್ಲಿ ದ.ಕ. ಜಿಲ್ಲೆಗೆ ಒಟ್ಟು 36.45 ಕೋ.ರೂ. ಅನುದಾನ ಅನುಮೋದನೆಗೊಂಡಿದ್ದು, ಈಗಾಗಲೇ 14.58 ಕೋಟಿ ರೂ. ಖರ್ಚಾಗಿದೆ. ಅನುಮೋದಿತ 21.86 ಕೋ.ರೂ.ಗಳ ಪೈಕಿ 8.59 ಕೋ.ರೂ. ಬಳಕೆ ಮಾಡುವ ಮೂಲಕ ರಾಮನಗರ ಎರಡನೇ ಸ್ಥಾನದಲ್ಲಿದೆ. 26 ಕೋ. ರೂ. ಪೈಕಿ 10 ಕೋ.ರೂ.ಗಳನ್ನು ಬಳಸಿ ಉಡುಪಿ 9ನೇ ಸ್ಥಾನದಲ್ಲಿದೆ. ಅನುದಾನದ ಸದ್ಬಳಕೆಯಲ್ಲಿ ವಿಫಲವಾದ ಎಲ್ಲ 30 ಜಿಲ್ಲೆ ಮತ್ತು ಬಿಬಿಎಂಪಿಗೆ ಆರೋಗ್ಯ ಸಚಿವರು ಮೂರು ತಿಂಗಳ ಗಡುವು ನೀಡಿದ್ದಾರೆ.

ಅನುದಾನ ಸದ್ವಿನಿಯೋಗ
ವೇತನ, ಆರೋಗ್ಯ ಕೇಂದ್ರಗಳಿಗೆ ಮುಕ್ತ ನಿಧಿ ಅನುದಾನ, ಜನನಿ ಸುರಕ್ಷಾ ಯೋಜನೆ, ಜನನಿ ಶಿಶು ಸುರಕ್ಷಾ ಯೋಜನೆ, ರಾಷ್ಟ್ರೀಯ ಔಷಧ ಅನುದಾನ, ಲ್ಯಾಬ್‌ಗಳಲ್ಲಿ ಉಚಿತ ಸೇವೆ, ಸಿಬಂದಿ ತರಬೇತಿ, ತಾಯಿ ಮಕ್ಕಳ ಅಭಿವೃದ್ಧಿ ಸಂಬಂಧಿ ಸೇರಿ ದಂತೆ ವಿವಿಧ ಕಾರ್ಯಕ್ರಮಗಳಿಗೆ ಈ ಅನುದಾನವನ್ನು ಬಳಕೆ ಮಾಡಲಾಗಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಆರೋಗ್ಯ ಸಚಿವರ ಜಿಲ್ಲೆಗೆ ಕೊನೆ ಸ್ಥಾನ
ಆರೋಗ್ಯ ಸಚಿವ ಶ್ರೀರಾಮುಲು ಅವರ ತವರು ಜಿಲ್ಲೆಯಾದ ಬಳ್ಳಾರಿ ಅನುದಾನ ಸದ್ಬಳಕೆಯಲ್ಲಿ ಸದ್ಯ ಕೊನೆಯ ಸ್ಥಾನದಲ್ಲಿದೆ. ಮುಂದಿನ ಆರು ತಿಂಗಳುಗಳಲ್ಲಿ ಹೆಚ್ಚು ಅನುದಾನ ಬಳಕೆ ಮಾಡಿ ತನ್ನ ಜಿಲ್ಲೆಯಲ್ಲಿ ಪರಿಣಾಮಕಾರಿ ಆರೋಗ್ಯ ಸೇವೆ ನೀಡುವಂತೆ ಮಾಡುವ ಸವಾಲು ಆರೋಗ್ಯ ಸಚಿವರಿಗಿದೆ. ಅನುಮೋದಿತ 66.63 ಕೋ.ರೂ. ಪೈಕಿ 16.32 ಕೋ.ರೂ.ಗಳನ್ನು ಬಳ್ಳಾರಿ ಜಿಲ್ಲಾ ಆರೋಗ್ಯ ಇಲಾಖೆ ಬಳಸಿದೆ.

400 ಕೋ.ರೂ. ಬಾಕಿ!
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಜ್ಯ ಆರೋಗ್ಯ ಇಲಾಖೆಗೆ 2019-20ನೇ ಸಾಲಿನಲ್ಲಿ ಬಿಡುಗಡೆಯಾಗಿರುವ ಒಟ್ಟು ಅನುದಾನದ ಪೈಕಿ ಸುಮಾರು 400 ಕೋ.ರೂ. ಬಳಕೆಯಾಗಿಲ್ಲ. ಬಳಕೆ ಮಾಡದೆ ಇದ್ದಲ್ಲಿ ಮುಂದಿನ ಬಾರಿ ಅನುದಾನ ಕೇಳುವುದು ಕಷ್ಟವಾಗುತ್ತದೆ. ದ.ಕ. ಜಿಲ್ಲೆಯವರು ಇತರರಿಗಿಂತ ಹೆಚ್ಚು ಖರ್ಚು ಮಾಡಿದ್ದು, ಮೊದಲ ರ್‍ಯಾಂಕಿಂಗ್‌ ನೀಡಲಾಗಿದೆ. ಆದರೂ ಜಿಲ್ಲೆಯಲ್ಲಿ ಅರ್ಧಕ್ಕೂ ಹೆಚ್ಚು ಹಣ ಖರ್ಚಾಗದೆ ಬಾಕಿಯಿದ್ದು, ಮುಂದಿನ ಮೂರು ತಿಂಗಳೊಳಗೆ ವಿನಿಯೋಗಿಸುವಂತೆ ಸೂಚಿಸಲಾಗಿದೆ ಎಂದು ಸಚಿವ ಶ್ರೀರಾಮುಲು “ಉದಯವಾಣಿ’ಗೆ ತಿಳಿಸಿದ್ದಾರೆ.

ಬಳ್ಳಾರಿ ಜಿಲ್ಲೆ ಅನುದಾನ ಸದ್ಬಳಕೆಯಲ್ಲಿ ಕೊನೆಯ ಸ್ಥಾನದಲ್ಲಿದೆ. ಉಳಿದ ಜಿಲ್ಲೆಗಳಲ್ಲಿಯೂ ಶೇ. 100 ಸಾಧನೆ ಆಗಿಲ್ಲದ ಕಾರಣ ಒಟ್ಟಾರೆ ಈ ಯೋಜನೆ ವಿನಿಯೋಗದಲ್ಲಿ ವಿಫಲವಾಗಿದೆ. ಬಳ್ಳಾರಿ ಸಹಿತ ಎಲ್ಲ ಜಿಲ್ಲೆಗಳ ಆರೋಗ್ಯಾಧಿಕಾರಿಗಳಿಗೆ ಮೂರು ತಿಂಗಳ ಟಾರ್ಗೆಟ್‌ ನೀಡಲಾಗಿದೆ. ಇಲ್ಲವಾದಲ್ಲಿ ಆಯಾ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು.
– ಶ್ರೀರಾಮುಲು, ಆರೋಗ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next