ಮುಸ್ಲಿಂ-ಕ್ರೈಸ್ತ ಸಮುದಾಯದವರಿಗೆ ಉಡುಪಿ ಹೋಟೇಲಿನ ಚಾ ತಿಂಡಿಯೇ ಆಗಬೇಕು. ಅದೇ ರೀತಿ ಇಲ್ಲಿನ ಹಿಂದು ಹಾಗೂ ಕ್ರೈಸ್ತರಿಗೆ ಮುಸ್ಲಿಮರ ಬಿರಿಯಾನಿ ಬಹಳ ಇಷ್ಟ. ಇಲ್ಲಿನ ಬಸ್ಸುಗಳಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತರು ಒಟ್ಟಿಗೆ ಕುಳಿತು ಒಂದೇ ತಾಯಿಯ ಮಕ್ಕಳಂತೆ ಪ್ರಯಾಣ ಮಾಡುತ್ತಾರೆ.
“ದಕ್ಷಿಣ ಕನ್ನಡ ಕೋಮು ಸೂಕ್ಷ್ಮ ಜಿಲ್ಲೆ’ ಎಂಬುದಾಗಿ ಕೆಲವು ಜನಪ್ರತಿನಿಧಿಗಳು ನೂರಾರು ಬಾರಿ ಹೇಳಿದನ್ನು ನಾವು ಮೂಕ ಪ್ರೇಕ್ಷಕರಂತೆ ಕೇಳುತ್ತಲೇ ಬಂದಿದ್ದೇವೆ ವಿನಃ ಜಿಲ್ಲೆಯ ಜನತೆಯನ್ನು ಪದೇ ಪದೇ ಅವಮಾನಿಸುವಂತಹ ಇಂತಹ ಅಸಂಬದ್ಧ ಹೇಳಿಕೆಯನ್ನು ಇದುವರೆಗೂ ಯಾರು ಪ್ರತಿಭಟಿಸಲೇ ಇಲ್ಲ. ನಿಜವಾಗಿ ದ.ಕ. ಜಿಲ್ಲೆ ಶಾಂತಿ ಸೌಹಾರ್ದತೆಯ ಜಿಲ್ಲೆಯಾಗಿದೆ. ಬುದ್ಧಿವಂತರ ಜಿಲ್ಲೆಯಾಗಿದೆ. ಶಿಕ್ಷಣ ವೈದ್ಯಕೀಯ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿಶ್ವವಿಖ್ಯಾತಿಯನ್ನು ಪಡೆದಿದೆ.
ಮಂಗಳೂರಿನ ಪೊಲೀಸ್ ಆಯುಕ್ತರು ಇತ್ತೀಚೆಗೆ ನೀಡಿದ ಹೇಳಿಕೆಯ ಪ್ರಕಾರ ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ದ.ಕ. ಜಿಲ್ಲೆಯಲ್ಲಿ ಕೊಲೆ, ಸುಲಿಗೆಯಂತಹ ಅಹಿತಕರ ಘಟನೆಗಳು ನಡೆಯುವುದು ಅತ್ಯಂತ ಕಡಿಮೆ. ಇಲ್ಲಿ ಶೇ.99ರಷ್ಟು ಮಂದಿ ಸೌಹಾರ್ದ ಪ್ರಿಯರಾಗಿದ್ದಾರೆ. ಶೇ.1ರಷ್ಟು ಮಂದಿ ಮಾತ್ರ ಇಲ್ಲಿ ಅರಾಜಕತೆಯನ್ನು ಸೃಷ್ಟಿಸುತ್ತಾರೆ. ರಾಜಕೀಯ ದುರುದ್ದೇಶದಿಂದ ಇಲ್ಲಿ ವೈಯಕ್ತಿಕ ಕಾರಣಗಳಿಂದ ನಡೆಯುವ ಕೊಲೆಗಳಿಗೆ ಮತೀಯ ಬಣ್ಣ ಹಚ್ಚಲಾಗುತ್ತದೆ.
ದ.ಕ. ಜಿಲ್ಲೆ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಜಿಲ್ಲೆಯಾ ಗಿದೆ. ಅನೇಕ ಜಾತಿ, ಧರ್ಮ, ಭಾಷೆ ಮತ್ತು ಸಂಸ್ಕೃತಿಯ ಜನರು ಸಾವಿರಾರು ವರ್ಷಗಳಿಂದ ಇಲ್ಲಿ ಅನ್ಯೋನ್ಯತೆಯಿಂದ ಜೀವನ ನಡೆಸುತ್ತಾ ಬಂದಿದ್ದಾರೆ. ಇಲ್ಲಿನ ಹಿಂದು, ಮುಸ್ಲಿಂ, ಕ್ರೈಸ್ತ ಹಾಗೂ ಜೈನರು ಪರಸ್ಪರ ವ್ಯಾಪಾರ ವ್ಯವಹಾರಗಳಲ್ಲಿ ಕೂಡಾ ತೊಡಗಿಸಿ ಕೊಂಡು ಪ್ರೀತಿ ವಿಶ್ವಾಸವನ್ನು ಹಂಚುತ್ತಾ ಈಗಲೂ ಬದುಕುತ್ತಿ ದ್ದಾರೆ. ಹಿಂದುಗಳ ಹಬ್ಬ ಹರಿದಿನಗಳಲ್ಲಿ ಮುಸ್ಲಿಮರು ಹಾಗೂ ಕ್ರೈಸ್ತರು, ಮುಸ್ಲಿಮರ ಹಾಗೂ ಕ್ರೈಸ್ತರ ಹಬ್ಬಗಳಲ್ಲಿ ಹಿಂದುಗಳು ಭಾಗವಹಿಸುತ್ತಿದ್ದಾರೆ. ಜಿಲ್ಲೆಯಾದ್ಯಂತ ಕ್ರೈಸ್ತ ಸಮುದಾಯದ ವರು ನಡೆಸುತ್ತಿರುವ ವಿದ್ಯಾ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗ ಮಾಡುತ್ತಿರುವವರು ಹಿಂದು ಮತ್ತು ಮುಸ್ಲಿಂ ಸಮು ದಾಯದ ವಿದ್ಯಾರ್ಥಿಗಳು. ಇಲ್ಲಿ ಮುಸ್ಲಿಂ ಸಮುದಾಯದ ವರು ನಡೆಸುತ್ತಿರುವ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವವರು ಹಿಂದೂ ಸಮುದಾಯದ ಅಧ್ಯಾಪಕರುಗಳಾಗಿದ್ದಾರೆ. ಅದೇ ರೀತಿ ಇಲ್ಲಿ ವಿವಿಧ ಧರ್ಮೀಯರ ಮಾಲಕತ್ವಕ್ಕೆ ಸೇರಿದ ಆಸ್ಪತ್ರೆ ಗಳಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತ ಎಂಬ ಭೇದ ತೋರದೆ ವಿವಿಧ ಜಾತಿ ಧರ್ಮದ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಲ್ಲಿನ ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯದವರಿಗೆ ಹಿಂದುಗಳ ಉಡುಪಿ ಹೋಟೇಲಿನ ಚಾ ತಿಂಡಿಯೇ ಆಗಬೇಕು. ಅದೇ ರೀತಿ ಇಲ್ಲಿನ ಹಿಂದು ಹಾಗೂ ಕ್ರೈಸ್ತರಿಗೆ ಮುಸ್ಲಿಮರ ಬಿರಿಯಾನಿ ಬಹಳ ಇಷ್ಟ. ಇಲ್ಲಿನ ಬಸ್ಸುಗಳಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತರು ಒಟ್ಟಿಗೆ ಕುಳಿತು ಒಂದೇ ತಾಯಿಯ ಮಕ್ಕಳಂತೆ ಪ್ರಯಾಣ ಮಾಡುತ್ತಾರೆ. ಇಲ್ಲಿ ವಿವಿಧ ಉದ್ದಿಮೆಗಳಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತರ ಪಾಲುದಾರಿಕೆ ಇದೆ. ಇಲ್ಲಿ ನಡೆಯುವ ಕೋಮು ಗಲಭೆಯ ಸಂದರ್ಭಗಳಲ್ಲಿ ಕೂಡ ಹಿಂದುಗಳಿಗೆ ಮುಸ್ಲಿಮರೂ, ಮುಸ್ಲಿಮರಿಗೆ ಹಿಂದುಗಳು ಆಸರೆ ನೀಡಿದ ಅನೇಕ ಉದಾಹರಣೆ ಗಳಿವೆ. ದೌರ್ಜನ್ಯಕ್ಕೀಡಾದ ಮುಸ್ಲಿಮರನ್ನು ಹಿಂದುಗಳು, ಹಿಂದು ಗಳನ್ನು ಮುಸ್ಲಿಮರು ಆಸ್ಪತ್ರೆಗೆ ದಾಖಲಿಸಿದ ಉದಾ ಹರಣೆಗಳಿವೆ.
ಉಡುಪಿಯಲ್ಲಿ ಇತ್ತೀಚೆಗೆ ನಡೆದ ಪೇಜಾವರ ಶ್ರೀಯವರ ಉತ್ಸವದಲ್ಲಿ ಮುಸ್ಲಿಮರು, ಕ್ರೈಸ್ತರು ಭಾಗವಹಿಸಿದ್ದರು. ಅದೇ ರೀತಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಡೆಯವರ ಪ್ರತಿಯೊಂದು ಕಾರ್ಯಕ್ರಮದಲ್ಲಿ ಸರ್ವಧರ್ಮಿಯರು ಸೇರುತ್ತಾರೆ. ಇತಿಹಾಸ ಪ್ರಸಿದ್ಧ ಉಳ್ಳಾಲದ ಸೈಯಿದ್ ಮದನಿ ದರ್ಗಾದ ಉರೂಸ್ ಸಮಾರಂಭಕ್ಕೆ ಸಾವಿ ರಾರು ಹಿಂದುಗಳು ಹರಕೆ ಸಲ್ಲಿಸುತ್ತಾರೆ. ಮಾಜಿ ಸಚಿವ ಜನಾ ರ್ದನ ಪೂಜಾರಿಯವರು ಕೂಡಾ ಹೊರೆ ಕಾಣಿಕೆ ಸಲ್ಲಿಸಿದ್ದಾರೆ. ಈ ಎಲ್ಲಾ ಕಾರಣಗಳಿಂದ ದ.ಕ. ಜಿಲ್ಲೆ ಅತ್ಯಂತ ಸೌಹಾರ್ದ ಪ್ರಿಯ ಜಿಲ್ಲೆಯಾಗಿದೆ. ಗಲಾಟೆ, ಗದ್ದಲ, ಗಲಭೆ, ಕೊಲೆ ಸುಲಿಗೆಗಳು ಪ್ರತಿಯೊಂದು ಪ್ರದೇಶಗಳಲ್ಲಿ ನಡೆಯುವುದು ಸ್ವಾಭಾವಿಕ. ಹಿಂದು ಮುಸ್ಲಿಂ ಎಂಬುದಾಗಿ ಮಾತ್ರವಲ್ಲ ಪ್ರತಿಯೊಂದು ಸಮುದಾಯದಲ್ಲೂ ಕೂಡಾ ಧಾರ್ಮಿಕ ಅಥವಾ ಆಂತರಿಕ ಭಿನ್ನಾಭಿಪ್ರಾಯಗ ಳಿಂದಾಗಿ ವಿವಿಧ ಗುಂಪುಗಳಾಗಿ ಅವರೊಳಗೇನೆ ಗಲಾಟೆಗಳಾ ಗುವುದನ್ನು ನಾವು ಕಾಣುತ್ತಿದ್ದೇವೆ.
ಆದರೆ ದ.ಕ. ಜಿಲ್ಲೆಯಲ್ಲಿ ಯಾವುದೋ ವಿಚಾರದಲ್ಲಿ ಹಿಂದು ಮತ್ತು ಮುಸ್ಲಿಮರ ಮಧ್ಯೆ ಗಲಾಟೆ ನಡೆದರೆ ಕೂಡಲೇ ಅದಕ್ಕೆ ಕೋಮು ಬಣ್ಣವನ್ನು ಹಚ್ಚಲಾಗುತ್ತದೆ. ಇದಕ್ಕೆ ಮುಖ್ಯ ಕಾರಣ ರಾಜಕೀಯ ಸ್ವಾರ್ಥ. ಇಲ್ಲಿನ ಕೆಲವು ಉನ್ನತ ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಕ್ಷುಲ್ಲಕ ಜಗಳಗಳಿಗೆ ಕೋಮು ಬಣ್ಣ ಹಚ್ಚಿ ಜಿಲ್ಲೆಗೆ ಬೆಂಕಿ ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ. ಇಲ್ಲಿನ ಪೊಲೀಸ್ ಅಧಿಕಾರಿಗಳನ್ನು ತಮ್ಮ ಕೈಗೊಂಬೆಗಳಾಗಿ ಬಳಸಲು ಪ್ರಯತ್ನಿಸುತ್ತಾರೆ. ಇಲ್ಲಿ ಕೊಲೆಗಳು ನಡೆದಾಗ ಪಾರದರ್ಶಕ ತನಿಖೆ ಮಾಡಲು ಪೊಲೀಸರಿಗೆ ಮುಕ್ತ ಅವಕಾಶ ನೀಡುವುದಿಲ್ಲ. ಆದುದರಿಂದ ಈ ಜಿಲ್ಲೆಯ ಹೆಸರು ಹಾಳಾ ಗುತ್ತಿದೆ. ದ.ಕ. ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಜಾತಿ ಭೇದ ಮತ್ತು ಪಕ್ಷ ಭೇದ ಮರೆತು ಈ ಜಿಲ್ಲೆಯ ಶಾಂತಿ ನೆಮ್ಮದಿ ಸೌಹಾರ್ದತೆಗಾಗಿ ಪಣತೊಡಬೇಕಾದ ಅವಶ್ಯಕತೆ ಇದೆ ಮತ್ತು ಈ ಜಿಲ್ಲೆಯ ಹೆಸರನ್ನು ಕೆಡಿಸಲು ಪ್ರಯತ್ನಿಸುತ್ತಿರುವ ಸ್ವಾರ್ಥ ರಾಜಕಾರಣಿಗಳ ವಿರುದ್ಧ ಹೋರಾಟ ಮಾಡಬೇಕಾಗಿದೆ.
– ಕೆ. ವಿಜಯಕುಮಾರ್ ಶೆಟ್ಟಿ (ಮಾಜಿ ಶಾಸಕರು)