Advertisement

ಪ್ರತೀ ತಿಂಗಳು ರಸ್ತೆ ಸುರಕ್ಷೆ ಸಮಿತಿ ಸಭೆ : ಡಿಸಿ ಡಾ|ರಾಜೇಂದ್ರ ಕೆ.ವಿ. ಸೂಚನೆ

09:37 AM Aug 25, 2022 | Team Udayavani |

ಮಂಗಳೂರು : ಪ್ರತೀ ತಿಂಗಳು ಜಿಲ್ಲಾ ಮಟ್ಟದ ರಸ್ತೆ ಸುರಕ್ಷೆ ಸಮಿತಿಯ ಸಭೆ ನಡೆಸಿ, ಕೈಗೊಂಡ ನಿರ್ಣಯಗಳ ಬಗ್ಗೆ ಕೇಂದ್ರ ಸರಕಾರದ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ಸೂಚಿಸಿದರು.

Advertisement

ಸರ್ಕಿಟ್ ಹೌಸ್‌ನಲ್ಲಿ ಜಿಲ್ಲಾ ಮಟ್ಟದ ರಸ್ತೆ ಸುರಕ್ಷೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲಾ ಮಟ್ಟದ ರಸ್ತೆ ಸುರಕ್ಷೆ ಬಗ್ಗೆ ಪ್ರತೀ ತಿಂಗಳು ಕಡ್ಡಾಯವಾಗಿ ಸಭೆ ನಡೆಸಬೇಕು, ಅದಕ್ಕೆ ಒಬ್ಬರು ನೋಡಲ್‌ ಅಧಿಕಾರಿಯನ್ನು ನಿಯೋ ಜಿಸಿ, ಸಭೆಯಲ್ಲಿ ಚರ್ಚೆಯಾದ ಹಾಗೂ ಕೈಗೊಂಡ ನಿರ್ಣಯಗಳ ಬಗ್ಗೆ 48 ತಾಸಿನೊಳಗೆ ವೆಬ್‌ಸೈಟ್‌ನಲ್ಲಿ ದಾಖಲಿಸಬೇಕು ಎಂದರು.

ಬ್ಲಾಕ್‌ ಸ್ಪಾಟ್‌ ಪ್ರದೇಶಗಳಲ್ಲಿ ರಸ್ತೆ ದುರಸ್ತಿ ಇರುವ ಬಗ್ಗೆ ವಾಹನ ಸವಾರರು ನಿಧಾನವಾಗಿ ಚಲಿಸುವಂತೆ ಸೂಚನ ಫಲಕ ಅಳವಡಿಸಬೇಕು, ಗಂಭೀರ ಸ್ವರೂಪದ ಅಪಘಾತವಾಗಿ ಸಾವು ಸಂಭವಿಸಿದ ಸಂದರ್ಭಗಳಲ್ಲಿ ಆಡಿಟ್‌ ವರದಿ ನೀಡಬೇಕು ಎಂದವರು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ದ್ವಿಚಕ್ರ ವಾಹನ ಸವಾರರು ತಮ್ಮ ಜೀವದ ಸುರಕ್ಷೆ ದೃಷ್ಟಿಯಿಂದ ಐಎಸ್‌ಐ ಚಿಹ್ನೆಯುಳ್ಳ ಹೆಲ್ಮೆಟ್‌ ಧರಿಸಬೇಕು, ಈ ಬಗ್ಗೆ ಜಾಗೃತಿ ಮೂಡಿಸುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಾರಿಗೆ ಉಪ ಆಯುಕ್ತ ರವಿಶಂಕರ್‌ಗೆ ತಿಳಿಸಿದರು. ನಿರ್ಮಾಣ ಕಾಮಗಾರಿಗಳನ್ನು ನಿರ್ವಹಿಸುವ ಇಲಾಖೆಗಳ ಕಾರ್ಯನಿರ್ವಾಹಕ ಅಭಿಯಂತರು ಇನ್ನು ಮುಂದೆ ಜಿಲ್ಲಾ ಮಟ್ಟದ ರಸ್ತೆ ಸುರಕ್ಷೆ ಸಮಿತಿ ಸಭೆಗೆ ಹಾಜರಾಗುವಂತೆ ಸೂಚಿಸಿದರು.

Advertisement

ಫುಟ್‌ಪಾತ್‌ಗಳ ಮೇಲೆ ವಾಹನಗಳು ಚಲಿಸಿದಂತೆ ನಿಗಾ ವಹಿಸಬೇಕು, ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ರಸ್ತೆ ಬದಿಗಳಲ್ಲಿ ಹಾಕಲಾದ ಕಟ್ಟಡ ನಿರ್ಮಾಣ ಸಾಮಗ್ರಿಗಳಿಂದ ಅಪಘಾತ ಸಂಭವಿಸಿದಲ್ಲಿ ಆ ಕಟ್ಟಡ ಮಾಲಕರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದವರು ಎಚ್ಚರಿಸಿದರು.

ಜಿ.ಪಂ. ಸಿಇಒ ಡಾ| ಕುಮಾರ್‌, ಎಸ್‌ಪಿ ಹೃಷಿಕೇಷ್‌ ಭಗವಾನ್‌ ಸೋನಾವಣೆ, ಮನಪಾ ಆಯುಕ್ತ ಅಕ್ಷಯ್‌ ಶ್ರೀಧರ್‌, ಎಡಿಸಿ ಕೃಷ್ಣಮೂರ್ತಿ, ಎಸಿ ಮದನಮೋಹನ್‌, ಎನ್‌ಎಚ್‌ಎಐ ಯೋಜನ ನಿರ್ದೇಶಕ ಲಿಂಗೇ ಗೌಡ, ಡಿಡಿಪಿಐ ಸುಧಾಕರ್‌, ಕೆಎಸ್ಸಾರ್ಟಿಸಿ ಮಂಗಳೂರು ನಿಗಮದ ವಿಭಾಗೀಯ ನಿಯಂತ್ರ ಣಾಧಿಕಾರಿ ರಾಜೇಶ್‌ ಶೆಟ್ಟಿ, ಪುತ್ತೂರು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀನಾಥ್‌ ಅಜಿಲ, ಬಂಟ್ವಾಳ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧೀಕ್ಷಕ ಸಚಿನ್‌ ತಾಳೇಕರ್‌, ಮುಡಾ ಜಂಟಿ ನಿರ್ದೇಶಕ ರಮೇಶ್‌, ಸಂಚಾರ ಸಲಹಾ ಸಮಿತಿ ಸದಸ್ಯ ಜಿ.ಕೆ. ಭಟ್‌ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ : ಬೆಳ್ಳಂಬೆಳಗ್ಗೆ ಶಿರಾ ಬಳಿ ಭೀಕರ ರಸ್ತೆ ಅಪಘಾತ : 9 ಜನರ ದುರ್ಮರಣ, ಹಲವರ ಸ್ಥಿತಿ ಗಂಭೀರ

ಶಾಲಾ ವಾಹನ: ಮುನ್ನೆಚ್ಚರಿಕೆ ಅತ್ಯಗತ್ಯ
ಶಾಲೆ ಹಾಗೂ ಕಾಲೇಜುಗಳ ಬಸ್‌ಗಳ ಪರ್ಮಿಟ್‌, ಆ ವಾಹನಗಳ ಸ್ಥಿತಿಗತಿಗಳ ಬಗ್ಗೆ ತಪಾಸಣೆ ನಡೆಸಬೇಕು, ಆಯಾ ಬಸ್‌ಗಳಲ್ಲಿ ಸಂಬಂಧಿಸಿದ ಶಾಲೆಗಳ ಹೆಸರು, ಅಪಾಯಕಾರಿ ಚಾಲನೆ ಕಂಡುಬಂದರೆ ಸಂಪರ್ಕಿಸಬೇಕಾದವರ ದೂರವಾಣಿ ಸಂಖ್ಯೆಯನ್ನು ಕಾಣುವಂತೆ ನಮೂದಿಸಬೇಕು, ಈ ಕುರಿತು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಾರಿಗೆ ಉಪ ಆಯುಕ್ತರು ಖುದ್ದಾಗಿ ಶಾಲೆ-ಕಾಲೇಜುಗಳ ಬಸ್‌ಗಳನ್ನು ಪರಿಶೀಲಿಸಬೇಕು, ವಿದ್ಯಾರ್ಥಿಗಳನ್ನು ಕರೆದೊಯ್ಯುವ ಆಟೋಗಳಲ್ಲಿ ಐದು ಮಕ್ಕಳ ಪ್ರಯಾಣಕ್ಕೆ ಮಾತ್ರ ಅವಕಾಶವಿದೆ. ಮಿತಿ ಮೀರಿದರೆ ಕಠಿನ ಕ್ರಮ ಕೈಗೊಳ್ಳಬೇಕು ಎಂದು ಡಿಸಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next