Advertisement

Dakshina Kannada: ಎಸೆಸೆಲ್ಸಿಯ 4,742 ವಿದ್ಯಾರ್ಥಿಗಳಿಗೆ ‘ದತ್ತಾಂಶ ಸೂತ್ರ’!

08:30 AM Oct 25, 2024 | Team Udayavani |

ಮಂಗಳೂರು: ಎಸೆಸೆಲ್ಸಿಯಲ್ಲಿ 2023-24ರಲ್ಲಿ ಶೇ.92.12 ಫಲಿತಾಂಶದೊಂದಿಗೆ ರಾಜ್ಯದಲ್ಲಿ 2ನೇ ಸ್ಥಾನ ಪಡೆದ ದಕ್ಷಿಣ ಕನ್ನಡ ಜಿಲ್ಲೆಯು ಈ ಶೈಕ್ಷಣಿಕ ವರ್ಷದಲ್ಲಿ ಪ್ರಥಮ ಸ್ಥಾನ ಪಡೆಯುವ ನಿಟ್ಟಿನಲ್ಲಿ ‘ದತ್ತಾಂಶ ಸೂತ್ರ’ವೊಂದನ್ನು ಶಿಕ್ಷಣ ಇಲಾಖೆ ಹೊಸದಾಗಿ ಅನುಷ್ಠಾನಿಸಿದೆ.

Advertisement

ದ. ಕ. ಜಿಲ್ಲೆಯಲ್ಲಿ 525 ಶಾಲೆಗಳಿದ್ದು 10ನೇ ತರಗತಿಯಲ್ಲಿ 28,612 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಪೈಕಿ 4742 ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದವರು ಎಂದು ಇಲಾಖೆ ಪತ್ತೆ ಹಚ್ಚಿತ್ತು. ಇವರನ್ನು ಇತರ ಮಕ್ಕಳ ಸಾಲಿಗೆ ತರುವ ನಿಟ್ಟಿನಲ್ಲಿ ದತ್ತಾಂಶ ಸೂತ್ರ ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ.

ಬಂಟ್ವಾಳ ವಲಯದಲ್ಲಿ 1052, ಬೆಳ್ತಂಗಡಿ 650, ಮಂಗಳೂರು ಉತ್ತರ 773, ಮಂಗಳೂರು ದಕ್ಷಿಣ 1064, ಮೂಡುಬಿದಿರೆ 342, ಪುತ್ತೂರು 627, ಸುಳ್ಯ 234 ವಿದ್ಯಾರ್ಥಿಗಳನ್ನು ನಿಧಾನ ಕಲಿಕೆಯವರು ಎಂದು ಗುರುತಿಸಲಾಗಿದೆ.

ನಿಧಾನ ಕಲಿಕೆಯ ಮಕ್ಕಳನ್ನು ಆಯಾ ಶಾಲಾ ಶಿಕ್ಷಕರಿಗೆ ಹಂಚಿಕೆ ಮಾಡಿ ಮಕ್ಕಳಿಗೆ ಕಠಿನ ಇರುವ ವಿಷಯಗಳ ಬಗ್ಗೆ ಶಿಕ್ಷಕರು ಹೆಚ್ಚಿನ ತರಬೇತಿ ನೀಡುತ್ತಿದ್ದಾರೆ. ಜತೆಗೆ ಆ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಮೂಡಿಸುವುದು, ಶಾಲೆಯಲ್ಲಿ ಆನಂದದಾಯಕ ಕಲಿಕಾ ವಾತಾವರಣ ನಿರ್ಮಿಸುವುದು ಇದರ ಉದ್ದೇಶ. ವಿಶೇಷ ತರಗತಿ ಆಯೋಜಿಸಿ ಪ್ರತಿದಿನ ಬೆಳಗ್ಗೆ 1 ಗಂಟೆ ತರಗತಿ ನಡೆಸಲಾಗುತ್ತದೆ. ದೀಕ್ಷಾ ಆ್ಯಪ್‌, ಇ-ಲರ್ನಿಂಗ್‌ ಸಾಧನ ಬಳಸಿ ಪಾಠ ಬೋಧಿಸಲಾಗುತ್ತದೆ. ಇದಕ್ಕಾಗಿಯೇ ಶಿಕ್ಷಕರಿಗೆ ವಿಷಯವಾರು ತರಬೇತಿ ನೀಡಲಾಗಿದೆ.

ನಿಧಾನ ಕಲಿಕೆಯ ವಿದ್ಯಾರ್ಥಿಗಳಿಗೆ ಹಾಗೂ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳಿಗೆ ಪ್ರತಿದಿನ ಸ್ಟುಡಿಯೋ ಮೂಲಕ ಆನ್‌ಲೈನ್‌ ತರಬೇತಿ ನೀಡಲು ಉದ್ದೇಶಿಸಲಾಗಿದೆ.

Advertisement

‘ದತ್ತಾಂಶ ಸೂತ್ರದ ಪ್ರಯೋಗ ಆರಂಭವಾದ 2 ತಿಂಗಳ ಒಳಗೆ ನಿಧಾನ ಕಲಿಕೆಯ 4,742 ವಿದ್ಯಾರ್ಥಿಗಳ ಪೈಕಿ 1,200ರಷ್ಟು ವಿದ್ಯಾರ್ಥಿಗಳು ಕಲಿಕೆಯಲ್ಲಿ ಬಹಳಷ್ಟು ಸುಧಾರಣೆ ಕಂಡಿದ್ದಾರೆ’ ಎಂದು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next