Advertisement

Exam: ಈ ವರ್ಷ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಕೃಪಾಂಕ ಇಲ್ಲ: ಶಿಕ್ಷಣ ಸಚಿವ ಮಧು ಬಂಗಾರಪ್ಪ

03:34 AM Oct 10, 2024 | Team Udayavani |

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ಗ್ರೇಸ್‌ ಮಾರ್ಕ್ಸ್ (ಕೃಪಾಂಕ) ನೀಡುವುದಿಲ್ಲ. ಆದರೆ 3 ಪರೀಕ್ಷೆಗಳ ಆಯ್ಕೆ ಅವಕಾಶ ಮುಂದುವರಿಯಲಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.

Advertisement

ಬುಧವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕೋವಿಡ್‌ ಸಂದರ್ಭ ಶಾಲೆಗಳೇ ಬಂದ್‌ ಆಗಿದ್ದರಿಂದ ಅಂದಿನ ಸರಕಾರ ಗ್ರೇಸ್‌ ಮಾರ್ಕ್ಸ್ ನೀಡುವ ತೀರ್ಮಾನ ಮಾಡಿತ್ತು. ಕಳೆದ ಬಾರಿ ನಮ್ಮಲ್ಲೂ ಕೆಲ ನ್ಯೂನತೆಗಳಿದ್ದವು. ಅಲ್ಲದೆ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಿದ್ದರಿಂದ ಶೇ. 10ರಷ್ಟು ಗ್ರೇಸ್‌ ಮಾರ್ಕ್ಸ್ ಕೊಡಲು ತೀರ್ಮಾನಿಸಿದ್ದೆವು. ಆದರೆ ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೆಂಗಣ್ಣಿಗೂ ಗುರಿಯಾಗಬೇಕಾಯಿತು. ನಮ್ಮ ಮೇಲೆ ಅವರು ಸ್ವಲ್ಪ ಗರಂ ಆಗಿದ್ದರು ಎಂದರು.

ಶಿಕ್ಷಣದಲ್ಲಿ ಗುಣಮಟ್ಟ ಹೆಚ್ಚಿಸು ವುದು ನಮ್ಮ ಉದ್ದೇಶ. ಪರೀಕ್ಷೆಯಲ್ಲಿ ಅಕ್ರಮ ನಡೆಯದಂತೆ ಎಚ್ಚರಿಕೆ ವಹಿಸಿದ್ದೇವೆ. ಕಟ್ಟುನಿಟ್ಟಿನಿಂದ ಪರೀಕ್ಷೆಗಳನ್ನು ನಡೆಸುತ್ತೇವೆ. ಫ‌ಲಿತಾಂಶ ಕುಸಿತ ಆಗಬಹುದು. ಆದರೆ ಕಲಿಕೆಯಲ್ಲಿ ನಮ್ಮ ಮಕ್ಕಳು ಯಾವ ಹಂತದಲ್ಲಿದ್ದಾರೆ ಎಂಬುದು ಗೊತ್ತಾಗಲಿದೆ. ಅನುತ್ತೀರ್ಣರಾದ ವರಿಗೆ ಮತ್ತೆ ಅವಕಾಶ ನೀಡಲಾಗುತ್ತದೆ. ಯಾವುದೇ ವಿದ್ಯಾರ್ಥಿ ಹಿಂದೆ ಬೀಳಬಾರದು. ಅಂತೆಯೇ ಏನೂ ಕಲಿಯದೆ ಉತ್ತೀರ್ಣ ಸಹ ಆಗಬಾರದು. ಹಾಗೆಂದು ಗ್ರೇಸ್‌ ಮಾರ್ಕ್ಸ್ ಮಾತ್ರ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ
“ಮಂತ್ರ ಫಾರ್‌ ಚೇಂಜ್‌’ ಎಂಬ ಸಂಸ್ಥೆಯು 10ನೇ ತರಗತಿ ಫ‌ಲಿತಾಂಶ ಹೆಚ್ಚಿಸುವ ಬಗ್ಗೆ ಕೆಲಸ ಮಾಡುತ್ತಿದೆ. ಎಲ್‌.ಕೆ.ಜಿ., ಯು.ಕೆ.ಜಿ. ಮಕ್ಕಳಿಗೆ ಚಿಲಿಪಿಲಿ ಕಾರ್ಯಕ್ರಮ ಅನುಷ್ಠಾನದ ಮೂಲಕ ಮೂಲಗಣಿತದ ಪ್ರಾಯೋಗಿಕ ಪಾಠ ಮಾಡಲಾಗುತ್ತಿದೆ. ರಾಜ್ಯದ 46 ಸಾವಿರ ಶಾಲೆಗಳಿಗೂ ನೀರು, ವಿದ್ಯುತ್‌ ಉಚಿತವಾಗಿ ಕೊಡುತ್ತಿದ್ದೇವೆ.

ಉಚಿತ ವಿದ್ಯುತ್‌ ಇರುವುದರಿಂದ ತಂತ್ರಜ್ಞಾನ ತಾನಾಗಿಯೇ ಬರಲಿದೆ. ಇನ್ನು ಅಜೀಂ ಪ್ರೇಮ್‌ಜೀ ಅವರು ಮಕ್ಕಳಿಗೆ ಮೊಟ್ಟೆ, ಚಿಕ್ಕಿ ಇತ್ಯಾದಿ ಪೌಷ್ಟಿಕಯುತ ಆಹಾರ ಒದಗಿಸಲು 1,591 ಕೋಟಿ ರೂ.ಗಳನ್ನು ನೀಡಿದ್ದಾರೆ. ಸಾಂಸ್ಥಿಕ ಹೊಣೆಗಾರಿಕೆ (ಸಿಎಸ್‌ಆರ್‌)ನಿಧಿಯ ಮೂಲಕ ಸರಕಾರವು ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ಹೇಳಿದರು.

Advertisement

ಸಚಿವರು ಹೇಳಿದ್ದೇನು?
–  ಗ್ರೇಸ್‌ ಮಾರ್ಕ್ಸ್ಗೆ ಮುಖ್ಯಮಂತ್ರಿಗಳ ಆಕ್ಷೇಪ
–  ಕಟ್ಟುನಿಟ್ಟಿನ ಕ್ರಮದಿಂದ ಫ‌ಲಿತಾಂಶ ಕುಸಿತ ಆಗಬಹುದು
–  ಆದರೆ ಮಕ್ಕಳ ಕಲಿಕೆ ಪ್ರಮಾಣದ ಬಗ್ಗೆ ಅರಿವು
–  ಗುಣಮಟ್ಟದ ಶಿಕ್ಷಣ ನೀಡುವುದೇ ನಮ್ಮ ಆದ್ಯತೆ

Advertisement

Udayavani is now on Telegram. Click here to join our channel and stay updated with the latest news.

Next