Advertisement
ಲಾಕ್‌ಡೌನ್ ಆರಂಭದ ದಿನಗಳಲ್ಲಿ ಅಗತ್ಯ ವಸ್ತುಗಳು, ತುರ್ತು ವೈದ್ಯಕೀಯ ಕಾರಣಕ್ಕಾಗಿ ಪಾಸ್ ಮೊದಲಾದ ನೆರವಿಗಾಗಿ ಜಿಲ್ಲೆಯ ಜನರಿಂದ ಕರೆಗಳು ಬರುತ್ತಿದ್ದವು. ಇತರ ಜಿಲ್ಲೆ, ರಾಜ್ಯಗಳ ವಲಸೆ ಕಾರ್ಮಿಕರ ಸಂಚಾರಕ್ಕೆ ಸರಕಾರ ಅವಕಾಶ ಕಲ್ಪಿಸಿದ ಅನಂತರ ಪ್ರತಿನಿತ್ಯ 1,000ದಿಂದ 1,500ಕ್ಕೂ ಅಧಿಕ ಕರೆಗಳು ಬರಲಾರಂಭಿಸಿದವು. ಪ್ರಸ್ತುತ ದಿನಕ್ಕೆ 500ಕ್ಕೂ ಅಧಿಕ ಕರೆಗಳು ಬರುತ್ತಿವೆ.
ಡಿಸಿ ಕಚೇರಿಯಲ್ಲಿದ್ದ ಕಂಟ್ರೋಲ್ ರೂಮ್‌ನ್ನು ಲಾಕ್‌ಡೌನ್ ಸಂದರ್ಭದಲ್ಲಿ ಮನಪಾ ಕಚೇರಿಯ ಕಟ್ಟಡದಲ್ಲಿರುವ ಸ್ಮಾರ್ಟ್ ಸಿಟಿಯ “ಕಮಾಂಡ್ ಆ್ಯಂಡ್ ಕಂಟ್ರೋಲ್ ರೂಮ್’ಗೆ ಸ್ಥಳಾಂತರಿಸಲಾಗಿದೆ. 35 ಸಿಬಂದಿ ಪಾಳಿಯಲ್ಲಿ ದುಡಿಯುತ್ತಿದ್ದು ದಿನದ 24 ಗಂಟೆಯೂ ಸಹಾಯವಾಣಿ ಸ್ಪಂದಿಸುತ್ತಿದೆ.
ಊಟ, ಪಾಸ್‌ಗೆ ಬೇಡಿಕೆ
ಬೇರೆ ರಾಜ್ಯಗಳಿಂದ ಬಂದು ಇ-ಪಾಸ್ ಇಲ್ಲದೆ ಜಿಲ್ಲೆಯ ಗಡಿಯಲ್ಲಿ ಸಿಲುಕಿಕೊಂಡಿದ್ದ ಅನೇಕರು ಕಂಟ್ರೋಲ್ ರೂಮ್‌ನಿಂದ ಸಹಾಯ ಯಾಚಿಸಿದ್ದರು. ಅವರಿಗೆ ತುರ್ತಾಗಿ ಇ-ಪಾಸ್ ಒದಗಿಸಿದೆ. ರೈಲಿನಲ್ಲಿ ಉತ್ತರ ಪ್ರದೇಶ, ಝಾರ್ಖಂಡ್ ಮೊದಲಾದ ಹೊರ ರಾಜ್ಯಗಳಿಗೆ ಜಿಲ್ಲೆಯಿಂದ ಇ -ಪಾಸ್ ಪಡೆಯದೆ ತೆರಳಿದ್ದವರ ಮಾಹಿತಿಯನ್ನು ಕೂಡ ಸಹಾಯವಾಣಿ ಸಂಗ್ರಹಿಸಿದೆ. ಕಾರ್ಮಿಕರು ರೈಲು ಹತ್ತಿದ ಅರ್ಧ ಗಂಟೆಯಲ್ಲಿಯೇ ಅವರ ಕುರಿತಾದ ಸಮಗ್ರ ಮಾಹಿತಿಯನ್ನು ಅವರ ಜಿಲ್ಲಾಡಳಿತಕ್ಕೆ ಕಳುಹಿಸಿಕೊಡಲಾಗಿದೆ. ಕರೆ ಮಾಡಿದವರ ಸಂಖ್ಯೆಯನ್ನು ಸಂಗ್ರಹಿಸಿಟ್ಟು ಅನಂತರ ಅವರು ಕೇಳಿದ ರೈಲುಗಳ ಸಮಯ, ಮತ್ತಿತರ ಮಾಹಿತಿಗಳನ್ನು ಅನಂತರ ಕರೆ ಮಾಡಿ ತಿಳಿಸಲಾಗುತ್ತದೆ. ಕಂಟ್ರೋಲ್ ರೂಮ್ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸುತ್ತಿದೆ. ಸೇವಾಸಿಂಧು ಗೊಂದಲ ಅಧಿಕ
ಪ್ರಸ್ತುತ ಮಹಾರಾಷ್ಟ್ರ ಹಾಗೂ ಇತರ ರಾಜ್ಯಗಳ ಲ್ಲಿರುವ ಜಿಲ್ಲೆಯ ನಿವಾಸಿಗಳು ಇ-ಪಾಸ್‌ಗಾಗಿ ಹೆಚ್ಚು ಕರೆಗಳನ್ನು ಮಾಡುತ್ತಿದ್ದಾರೆ. ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿ ಇನ್ನೂ ಇ-ಪಾಸ್ ಸಿಗದಿರುವ ಬಗ್ಗೆ ಅನೇಕ ದೂರುಗಳು ಬರುತ್ತಿವೆ. ಸೇವಾ ಸಿಂಧುವಿನಲ್ಲಿ ಎಲ್ಲ ಮಾಹಿತಿಗಳನ್ನು ನೀಡದಿದ್ದರೆ ಇ-ಪಾಸ್ ದೊರೆಯುವುದಿಲ್ಲ. ಸೇವಾಸಿಂಧುವಿನಲ್ಲಿ ನೋಂದಾಯಿಸಿದ ಕೂಡಲೇ ಜಿಲ್ಲೆಯತ್ತ ಪ್ರಯಾಣ ಬೆಳೆಸಿ ಅರ್ಧದಲ್ಲಿ ತೊಂದರೆಗೀಡಾಗಿ ಕರೆ ಮಾಡುತ್ತಾರೆ. ಅವರಿಗೆ ಸ್ಪಂದಿಸಲಾಗುತ್ತಿದೆ ಎನ್ನುತ್ತಾರೆ ಸಹಾಯವಾಣಿಯ ಸಿಬಂದಿ.
Related Articles
1077 ಕೋವಿಡ್-19 ಸಹಾಯ ವಾಣಿಯು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ದಿನದ 24 ಗಂಟೆಗಳ ಕಾಲ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಆಯಾ ಜಿಲ್ಲೆಯವರು ನೇರವಾಗಿ 1077ಗೆ ಕರೆ ಮಾಡಿದರೆ ಅದೇ ಜಿಲ್ಲೆಗೆ ಕರೆ ಸಂಪರ್ಕವಾಗುತ್ತದೆ. ಬೇರೆ ರಾಜ್ಯ ಅಥವಾ ಬೇರೆ ಜಿಲ್ಲೆಯವರು ಇನ್ನೊಂದು ರಾಜ್ಯ, ಜಿಲ್ಲೆಗೆ ಕರೆ ಮಾಡುವುದಾದರೆ ಅಲ್ಲಿನ ಎಸ್‌ಟಿಡಿ ಕೋಡ್ ಹಾಕಿ ಅನಂತರ ಸಹಾಯವಾಣಿ ಸಂಖ್ಯೆ ನಮೂದಿಸಿ ಕರೆ ಮಾಡಬೇಕು. ಉದಾಹರಣೆಗೆ ದ.ಕ.ಜಿಲ್ಲೆಯವರು ಬೇರೆ ಜಿಲ್ಲೆ ಅಥವಾ ರಾಜ್ಯದಲ್ಲಿದ್ದರೆ 0824-1077, ಉಡುಪಿ ಜಿಲ್ಲೆಯವರು ಬೇರೆ ಜಿಲ್ಲೆ, ರಾಜ್ಯಗಳಲ್ಲಿದ್ದರೆ 0820-1077 ಹೀಗೆ ಕರೆ ಮಾಡಬೇಕು.
Advertisement
ಸಮಸ್ಯೆಗಳಿಗೆ ಪರಿಹಾರಕೋವಿಡ್-19 ಸಂಕಷ್ಟಗಳಿಗೂ ಸಹಾಯವಾಣಿ ನೆರವಾಗುತ್ತಿದೆ. ಪ್ರಸ್ತುತ ಸಹಾಯವಾಣಿಗೆ ದಿನಕ್ಕೆ 500ರಷ್ಟು ಕರೆಗಳು ಬರುತ್ತಿವೆ. ಇದರಲ್ಲಿ ಸೇವಾ ಸಿಂಧು ಪಾಸ್‌ಗೆ ಸಂಬಂಧಿ ಸಿದ ಕರೆಗಳು ಅಧಿಕ ಇವೆ. ಕೆಲವು ಮಂದಿ ಕಾರ್ಮಿಕರಿಗೆ ನಮ್ಮ ರಾಜ್ಯದ ಪೋರ್ಟಲ್ ಅರ್ಜಿಯಲ್ಲಿ ಹಿಂದಿ ಭಾಷೆ ಇಲ್ಲದಿರುವುದರಿಂದ ಸಮಸ್ಯೆಯಾಗಿದೆ. ಇಂತಹ ಕಾರ್ಮಿಕರಿಗೂ ಸಹಾಯವಾಣಿ ನೆರವಾಗುತ್ತಿದೆ.
-ದಿನೇಶ್ ಕುಮಾರ್, ಅಧಿಕಾರಿ, ಕೋವಿಡ್-19 ಸಹಾಯವಾಣಿ, ದ.ಕ.